ಜೆಡಿಎಸ್ ಪಕ್ಷದ 25ನೇ ವರ್ಷದ ಸಂಭ್ರಮಾಚರಣೆಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ದೇವೇಗೌಡರು ಮತ್ತು ಕುಮಾರಸ್ವಾಮಿಯವರನ್ನು ಶ್ಲಾಘಿಸಿದರು. ಸಿದ್ದರಾಮಯ್ಯನವರನ್ನು ಟೀಕಿಸಿದ ಅವರು, ಕುಮಾರಸ್ವಾಮಿಯವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ ಎಂದು ಘೋಷಿಸಿದರು.
ಬೆಂಗಳೂರು: ರಾಜ್ಯದ ಪ್ರಮುಖ ಪ್ರಾದೇಶಿಕ ಪಕ್ಷವಾಗಿರುವ ಜನತಾ ದಳ (ಸೆಕ್ಯುಲರ್) ತನ್ನ 25ನೇ ವರ್ಷದ ಸಂಭ್ರಮದಲ್ಲಿದೆ. ಜೇಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು. ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರು ಹಾಗೂ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದು ಸಂಭ್ರಮದ ವಾತಾವರಣ ಮನೆಮಾಡಿತ್ತು.
ದೇವೇಗೌಡರು ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ
ಸಮಾರಂಭದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ದೇಶದ ಹಾಗೂ ರಾಜ್ಯದ ಇತಿಹಾಸದಲ್ಲಿ ದೇವೇಗೌಡರಂತಹ ವ್ಯಕ್ತಿತ್ವ ಸಿಗಲಾರದು. ಮತ್ತೆ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದು ಎಲ್ಲರಿಗೂ ಸಂತೋಷ ವಾಗಿದೆ. ಎಲ್ಲರ ಪರವಾಗಿ ಅವರನ್ನು ಅಭಿನಂದಿಸುತ್ತೇನೆ. ಕುಮಾರಸ್ವಾಮಿ ಎರಡು ಸಲ ಮುಖ್ಯಮಂತ್ರಿ ಆಗಿ ಜನಪರ ಕೆಲಸ ಮಾಡಿದ್ದಾರೆ. ಅವರ ಮಗನಾಗಿ ಹುಟ್ಟಿದ್ದು ನನ್ನ ಪುಣ್ಯ. ನರೇಂದ್ರ ಮೋದಿ ಸಂಪುಟ ದಲ್ಲಿ ಉಕ್ಕು ಮತ್ತು ಭಾರಿ ಕೈಗಾರಿಕಾ ಸಚಿವರಾಗಿ ಕೆಲಸ ಮಾಡ್ತಿದ್ದಾರೆ. ಪ್ರಾದೇಶಿಕ ಪಕ್ಷ 25 ವರ್ಷಗಳನ್ನು ಪೂರೈಸಿರುವುದು ಸಂತೋಷದ ವಿಚಾರ. ದೇವೇಗೌಡರು ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ ಎಂದರು.
ಸಿದ್ದರಾಮಯ್ಯಗೆ ದೇವರು ಒಳ್ಳೆಯ ಬುದ್ದಿಯನ್ನು ಕೊಡಲಿ
ನಾನು ಕೋಲಾರಕ್ಕೆ ಪ್ರವಾಸ ಹೋದ ಸಂದರ್ಭದಲ್ಲಿ ರೈತನೊಬ್ಬ ಎಳನೀರು ಕೊಟ್ಟು ಆಶೀರ್ವದಿಸಿದ, ಆತನಿಗೆ ನಾನು ಹಣ ಕೊಡಲು ಹೋದರೆ ಆತನೇ ನನಗೆ ಹಣವನ್ನು ಕೊಟ್ಟು ಇದು ಪಕ್ಷಕ್ಕೆ ನನ್ನ ದೇಣಿಗೆ ಎಂದು ಹೇಳಿದ. ಈ ರೀತಿ ಜೆಡಿಎಸ್ ಪಕ್ಷವನ್ನು ಪ್ರೀತಿಸುವ ಅನೇಕ ಜನರು ರಾಜ್ಯದಲ್ಲಿದ್ದಾರೆ. ಸಾಮಾಜಿಕ ನ್ಯಾಯ ಬದ್ಧತೆ ಪಾಲಿಸುವ ನಾಯಕ ದೇವೇಗೌಡರು ಮಾತ್ರ. ಸಿದ್ದರಾಮಯ್ಯ ಅವರನ್ನು ಬೆಳೆಸಿದ್ದು ದೇವೇಗೌಡ್ರು, ಆದರೆ ಸಿದ್ದರಾಮಯ್ಯ ಬೆಳೆದು ಬಂದ ಹಾದಿಯನ್ನು ಮರೆತಿದ್ದಾರೆ. ಅವರಿಗೆ ದೇವರು ಒಳ್ಳೆಯ ಬುದ್ದಿಯನ್ನು ಕೊಡಲಿ ಎಂದರು.
ನಮ್ಮೆಲ್ಲರ ಮುಂದೆ ಇರುವ ಗುರಿ ಸಂಕಲ್ಪ ಒಂದೇ, ಜನತಾದಳ ಸ್ವತಂತ್ರವಾಗಿ ಸರ್ಕಾರ ರಚಿಸುವಂತೆ ಆಗಬೇಕು. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಬೇಕು. ನನಗೆ ಮುಂಚೆ ಭಾಷಣ ಮಾಡಲು ಬರುತ್ತಿರಲಿಲ್ಲ. ಈಗ ರಾಜ್ಯ ಪ್ರವಾಸ ಕೂಡ ಮಾಡ್ತಾ ಇದ್ದೀನಿ. ರಾಜ್ಯಾದ್ಯಂತ ಪ್ರವಾಸ ಮಾಡಿ ಸದಸ್ಯತ್ವ ಅಭಿಯಾನ ಮಾಡ್ತಾ ಇದ್ದೇವೆ. ಆದರೆ ಅಂದುಕೊಂಡ ಮಟ್ಟಿಗೆ ನಾವು ಗುರಿ ತಲುಪಿಲ್ಲ. ಕೇವಲ 30 ರಿಂದ 40% ಮಾತ್ರ ಗುರಿ ಮುಟ್ಟಿದ್ದೇವೆ. ಮುಂದಿನ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆಯಬೇಕು ಎಂದರು.
2028 ರಲ್ಲಿ ಎನ್‌ಡಿಎ ಅಧಿಕಾರಕ್ಕೆ
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾ ರೆಡ್ಡಿ ಮಾತನಾಡಿ, 2028 ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿದೆ. ಕುಮಾರಸ್ವಾಮಿ ಮತ್ತೆ ಸಿಎಂ ಆಗಲಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಆಗಿದೆ. ಸಿಎಂ-ಡಿಸಿಎಂ ಸಂಘರ್ಷ ನಡೀತಿದೆ. ಅಧಿಕಾರಿಗಳು ಕೆಲಸ ಮಾಡ್ತಿಲ್ಲ. ಕುಮಾರಸ್ವಾಮಿ ಸಿಎಂ ಆದರೆ ಮಾತ್ರ ಉತ್ತಮ ಆಡಳಿತ ಬರಲಿದೆ. ಸಿದ್ದರಾಮಯ್ಯ ಉತ್ತಮ ಆರ್ಥಿಕ ತಜ್ಞರಲ್ಲ. 8 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ನೀರಾವರಿಗೆ ಹಣ ಇಲ್ಲ. ಖಜಾನೆ ಖಾಲಿ ಆಗಿದೆ. ಗ್ಯಾರಂಟಿ ಜಪ ಮಾಡ್ತಿದ್ದಾರೆ. ಸಾಲದ ಹೊರೆಯಿಂದ ಬಾಂಗ್ಲಾದ ಪರಿಸ್ಥಿತಿ ರಾಜ್ಯಕ್ಕೆ ಬರಲಿದೆ ಎಂದು ಹೇಳಿದರು.


