ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸಲು ಕಾಂಗ್ರೆಸ್‌ನಲ್ಲಿಯೇ ಸಂಚು ನಡೆಯುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೀದರ್ (ಜು.3): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್‌ನೊಳಗೆಯೇ ಸಂಚು ರೂಪಿಸಲಾಗುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಫೋಟಕ ಆರೋಪ ಮಾಡಿದ್ದಾರೆ.
ಬೀದರ್‌ನಲ್ಲಿ ನಡೆದ ಜೆಡಿಎಸ್ ಸದಸ್ಯತ್ವ ಅಭಿಯಾನದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರ ದರಿದ್ರ ಸರ್ಕಾರವಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಕಾಣುವುದು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು ಐದು ವರ್ಷ ನಾನೇ ಸಿಎಂ ಎಂದು ಬಹಿರಂಗವಾಗಿ ಹೇಳಿದ್ದಾರೆ. ಆದರೆ, ಡಿಕೆ ಶಿವಕುಮಾರ್ ಸೇರಿದಂತೆ ಕೆಲವು ಬಣಗಳು ಸಿಎಂ ಸ್ಥಾನಕ್ಕಾಗಿ ಸಂಚು ರೂಪಿಸುತ್ತಿವೆ ಎಂದು ಗಂಭೀರ ಹೇಳಿಕೆ ನೀಡಿದರು.
ಡಿಕೆ ಶಿವಕುಮಾರ ನಿಮ್ಮ ಸೀಟು ನೋಡ್ಕೊಳ್ಳಿ:
2013ರಲ್ಲಿ ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿಯ ರಾಜ್ಯಾಧ್ಯಕ್ಷರನ್ನು ಸೋಲಿಸಿದ್ದರು. ಇನ್ನೊಬ್ಬ ಪರಿಶಿಷ್ಟ ಜಾತಿಯ ನಾಯಕನನ್ನು ಕೇಂದ್ರಕ್ಕೆ ಕಳುಹಿಸಿದ್ದರು. ಈಗ ಡಿಸಿಎಂ ಜೊತೆ ಅವರೂ ಇದ್ದಾರೆ, ಅವರ ಮಗನನ್ನ ಡಿಸಿಎಂ ಮಾಡೋಣ, ನೀನು ಸಿಎಂ ಆಗು ಅಂತಿದ್ದಾರಂತೆ ಎಂದು ಪರೋಕ್ಷವಾಗಿ ಡಿಕೆಶಿ ಜೊತೆ ಪರಮೇಶ್ವರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಸೇರಿದ್ದಾರೆಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಯಾವುದೇ ಕ್ರಾಂತಿ ಆಗದು: ನಿಖಿಲ್ ವ್ಯಂಗ್ಯ
'ಕಾಂಗ್ರೆಸ್‌ನಲ್ಲಿ ಯಾವುದೇ ಕ್ರಾಂತಿ ಆಗದು, ಎಲ್ಲವೂ ಶಾಂತಿಯಾಗಿ ಮುಗಿಯುತ್ತದೆ' ಎಂದು ವ್ಯಂಗ್ಯವಾಡಿದ ಅವರು, ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ನಿಖಿಲ್ ಕುಮಾರಸ್ವಾಮಿ ಅವರು, ಬಿಜೆಪಿ-ಜೆಡಿಎಸ್‌ಗೆ ವಾಮಮಾರ್ಗದಿಂದ ಅಧಿಕಾರಕ್ಕೆ ಬರಲು ಇದು ಸರಿಯಾದ ಸಮಯವಲ್ಲ. ಆದರೆ, ಎಲ್ಲಕ್ಕೂ ಒಂದು ಅಂತ್ಯ ಇದ್ದೇ ಇರುತ್ತದೆ ಎಂದು ಎಚ್ಚರಿಸಿದರು.
ಪೊಲೀಸ್ ಅಧಿಕಾರಿಗೆ ಸಿಎಂ ಕಪಾಳಮೋಕ್ಷಕ್ಕೆ ಕಿಡಿ:
ಸಿದ್ದರಾಮಯ್ಯ ಅವರು ದಕ್ಷ ಪೊಲೀಸ್ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಲು ಯತ್ನಿಸಿದ ಘಟನೆಯನ್ನು ಉಲ್ಲೇಖಿಸಿದ ನಿಖಿಲ್, ಪಾಪ, ಅಂತ ದಕ್ಷ ಅಧಿಕಾರಿಗಳಿಗೆ ಕಪಾಳಕ್ಕೆ ಹೊಡೆಯಲು ಸಿದ್ದರಾಮಯ್ಯ ಯತ್ನಿಸಿದ್ದರು. ಅದರಿಂದ ಆ ಅಧಿಕಾರಿ ಮನನೊಂದು ಸ್ವಯಂ ನಿವೃತ್ತಿ ಘೋಷಣೆ ಮಾಡಲು ಮುಂದಾಗಿದ್ದಾರೆ' ಎಂದು ಸಿಎಂ ಸಿದ್ದರಾಮಯ್ಯರ ವರ್ತನೆಯನ್ನು ಟೀಕಿಸಿದರು.
