ರಾಜ್ಯದಲ್ಲಿ ಪ್ರಮುಖ ನೀರಾವರಿ ಯೋಜನೆಗಳ ಬಗ್ಗತೆ ಸರ್ಕಾರದ ನಿಲುವು, ನೆರೆ ಸಂತ್ರಸ್ತರ ಸಮಸ್ಯೆ, ಪರಿಹಾರ  ವಿಚಾರ ಜೆಡಿಎಸ್‌ ನಿಯೋಗದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ

ಬೆಂಗಳೂರು (ಸೆ.07):  ರಾಜ್ಯದಲ್ಲಿ ಪ್ರಮುಖ ನೀರಾವರಿ ಯೋಜನೆಗಳ ಬಗ್ಗತೆ ಸರ್ಕಾರದ ನಿಲುವು, ನೆರೆ ಸಂತ್ರಸ್ತರ ಸಮಸ್ಯೆ, ಪರಿಹಾರ ಸೇರಿದಂತೆ ಹಲವು ವಿಚಾರಗಳ ಕುರಿತು ಜೆಡಿಎಸ್‌ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಿತು.

ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನೀರಾವರಿ ಯೋಜನೆ ವಿಚಾರದಲ್ಲಿ ಕೇಂದ್ರಕ್ಕೆ ನಿಯೋಗವನ್ನು ಕರೆದುಕೊಂಡು ಹೋದರೆ ಪಕ್ಷದ ಸದಸ್ಯರು ಬರಲು ಸಿದ್ಧ ಎಂಬುದನ್ನು ಮನವರಿಕೆ ಮಾಡಿಕೊಡಲಾಯಿತು. ಕೇಂದ್ರ ಸರ್ಕಾರದಲ್ಲಿ ನೆನೆಗುದಿಗೆ ಬಿದ್ದಿರುವ ರಾಜ್ಯದ ಪ್ರಮುಖ ಯೋಜನೆಗಳಾದ ಮೇಕೆದಾಟು, ಕೃಷ್ಣಾ ಮೇಲ್ದಂಡೆ ಯೋಜನೆ (2ನೇ ಹಂತ), ಮಹದಾಯಿ ಯೋಜನೆಗಳಿಗೆ ಅನುಮತಿ, ಮಂಜೂರಾತಿ ಮತ್ತು ತೀರ್ಮಾನ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಾಯ ಹೇರಬೇಕು. ಈ ನಿಟ್ಟಿನಲ್ಲಿ ಸರ್ಕಾರವು ತ್ವರಿತವಾಗಿ ಕ್ರಮ ಕೈಗೊಳ್ಳಲು ಕಾರ್ಯನ್ಮೋಖವಾಗಬೇಕು ಎಂದು ನಿಯೋಗವು ಆಗ್ರಹಿಸಿತು.

ಸಿಎಂ ಬೊಮ್ಮಾಯಿ ಇಂದು ದೆಹಲಿಗೆ : 4 ಸಚಿವ ಸ್ಥಾನ ಭರ್ತಿ ಬಗ್ಗೆ ಚರ್ಚೆ?

ಎತ್ತಿನಹೊಳೆ ಯೋಜನೆಯ ಭೈರಗೊಂಡ್ಲು ಜಲಾಶಯದ ಶೇಖರಣಾ ಸಾಮರ್ಥ್ಯ ಕಡಿಮೆ ಮಾಡಿ ಪರ್ಯಾಯ ಪ್ರಸ್ತಾವನೆಯಿಂದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಪ್ರಸ್ತಾವಿತ ಕುಡಿಯುವ ನೀರು ಪೂರೈಕೆ ಯೋಜನೆಗೆ ಉಂಟಾಗುವ ಪರಿಣಾಮದ ಕುರಿತು ಮುಖ್ಯಮಂತ್ರಿಗಳಿಗೆ ಜೆಡಿಎಸ್‌ ನಿಯೋಗವು ಮನವರಿಕೆ ಮಾಡಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಹಾಸನ ಜಿಲೆಯಲ್ಲಿ ಕಾಡಾನೆಗಳ ಹಾವಳಿ ಕುರಿತು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕಾಡಾನೆಗಳ ಹಾವಳಿಯಿಂದ ಉಂಟಾಗಿರುವ ಹಾನಿಗೆ ಶೀಘ್ರವೇ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು. ಪ್ರವಾಹ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಪ್ರವಾಹದಿಂದ ನಾಗರಿಕರು, ರೈತರು ಸಾಕಷ್ಟುಹಾನಿಗೊಳಗಾಗಿದ್ದಾರೆ. ಅವರಿಗೆ ಸಮರ್ಪಕವಾದ ಪರಿಹಾರ ಕೊಡಿಸಿಕೊಡುವಲ್ಲಿ ಸರ್ಕಾರವು ಕೇಂದ್ರದ ಒತ್ತಡ ಹೇರಬೇಕು ಎಂದು ಒತ್ತಾಯಿಸಲಾಗಿದೆ.