ಬೆಂಗಳೂರು (ಜ.28):  ಬೆಳಗಾವಿ ಮರಾಠಿಗರದ್ದಲ್ಲ, ವೀರ ಕನ್ನಡಿಗರದ್ದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ  ಹೇಳಿದ್ದಾರೆ.

ಬೆಳಗಾವಿಯನ್ನು 2ನೇ ರಾಜಧಾನಿಯನ್ನಾಗಿ ಮಾಡಿ, ವಿಧಾನಸೌಧ ನಿರ್ಮಿಸಿ ಅಧಿವೇಶನ ನಡೆಸಿರುವುದನ್ನು ತಪ್ಪು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರುವ ಯಾವುದೇ ಪಕ್ಷ ಬೆಳಗಾವಿ ವಿಚಾರದಲ್ಲಿ ಸಲ್ಲದ ಕಿತಾಪತಿ ಮಾಡುತ್ತವೆ ಎಂಬುದನ್ನು ಅರಿತೇ ನನ್ನ ಸರ್ಕಾರದ ಅವಧಿಯಲ್ಲಿ ಬೆಳಗಾವಿಯಲ್ಲಿ ವಿಧಾನಸೌಧ ನಿರ್ಮಿಸಲಾಯಿತು. ಅಧಿವೇಶನವನ್ನೂ ನಡೆಸಲಾಯಿತು. ಬೆಳಗಾವಿಯ ಸುವರ್ಣಸೌಧ ಮಹಾರಾಷ್ಟ್ರದ ವಿಸ್ತರಣಾವಾದವನ್ನು ವಿರೋಧಿಸಿ ನಿಂತಿರುವ ಕನ್ನಡಿಗರ ಸ್ವಾಭಿಮಾನದ ಸೌಧ ಎಂದು ತಿಳಿಸಿದ್ದಾರೆ.

ಮತ್ತೆ ಠಾಕ್ರೆ ಉದ್ಧಟತನ; 'ಯಾರೇ ಬಂದರೂ ದೌರ್ಜನ್ಯ ಮಾಡ್ತಾರಂತೆ! .

ಶಿವಸೇನೆಯೊಂದಿಗೆ ಅಧಿಕಾರ ಹಂಚಿಕೊಂಡಿರುವ ಕಾಂಗ್ರೆಸ್‌ ಪಕ್ಷ ಗಡಿ ವಿಚಾರದಲ್ಲಿ ಠಾಕ್ರೆಗೆ ಬುದ್ಧಿ ಹೇಳಬೇಕು. ರಾಜ್ಯ ಕಾಂಗ್ರೆಸ್‌ ನಾಯಕರು ಬಾಯಿ ಉಪಚಾರಕ್ಕೆ ಠಾಕ್ರೆ ಮಾತುಗಳನ್ನು ಖಂಡಿಸಿದರೆ ಸಾಲದು. ಬದಲಿಗೆ ಬೆಳಗಾವಿ ನಮ್ಮದೇ ಎಂಬುದನ್ನು ಮನದಟ್ಟು ಮಾಡಬೇಕು. ಬೆಳಗಾವಿ ಬಗ್ಗೆ ಠಾಕ್ರೆಗೆ ಇರುವ ಭ್ರಮೆಗೆ ಚಿಕಿತ್ಸೆ ಕೊಡಿಸಬೇಕು. ಚರಿತ್ರೆ ಓದಿದ್ದರೆ ಮಹಾರಾಷ್ಟ್ರವು ಕನ್ನಡದ ಅರಸರಿಂದ ಅಳಿಸಿಕೊಂಡ ನಾಡು ಎಂಬುದು ಅವರಿಗೂ ತಿಳಿಯುತ್ತಿತ್ತು. ಅವರು ಓದಿದಂತೆ ಕಾಣುತ್ತಿಲ್ಲ. ಚರಿತ್ರೆ ಓದಿ ಎಂದು ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.