ಬೆಂಗಳೂರು(ಸೆ.26): ಸರ್ಕಾರ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್‌ ಯಾವ ಕಾರಣಕ್ಕಾಗಿ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೋ ಗೊತ್ತಿಲ್ಲ. ಪ್ರಚಾರಕ್ಕಾಗಿ ಅವಿಶ್ವಾಸ ನಿರ್ಣಯ ಮಂಡಿಸಿರಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟಾಂಗ್‌ ನೀಡಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅವಿಶ್ವಾಸ ನಿರ್ಣಯ ಕುರಿತು ಕಾಂಗ್ರೆಸ್‌ ಪಕ್ಷದವರು ನಮ್ಮ ಜತೆ ಚರ್ಚೆ ಮಾಡಿಲ್ಲ. ಚರ್ಚೆ ಮಾಡಿದರೆ ನೋಡೋಣ. ವಿಪತ್ತು ಇರುವ ಈ ಸಮಯದಲ್ಲಿ ಗೊಂದಲ ಮೂಡಿಸುವ ನಡೆಗಳು ಬೇಕಾ? ಅವರು ಯಾಕೆ ನಿರ್ಣಯ ಮಂಡಿಸಿದ್ದಾರೋ ಗೊತ್ತಿಲ್ಲ ಎಂದು ತಿಳಿಸಿದರು.

ಸದನದಲ್ಲಿ ನೆರೆ ಹಾವಳಿ, ಕೋವಿಡ್‌ನಿಂದ ಎದುರಾಗಿರುವ ಕೆಟ್ಟಪರಿಸ್ಥಿತಿಯನ್ನು ಎಲ್ಲಾ ಜನಪ್ರತಿನಿಧಿಗಳು ಜತೆಯಾಗಿ ಎದುರಿಸಬೇಕಾಗಿದೆ. ಭೂ ಸುಧಾರಣಾ ಕಾಯ್ದೆ ಕುರಿತು ಚರ್ಚೆ ನಡೆಸಬೇಕು. ಸರ್ಕಾರ ಏನೇ ಮಾಡಿದರೂ ನಡೆಯುತ್ತದೆ ಎಂಬ ಧೋರಣೆ ಸರಿಯಲ್ಲ. ಎಪಿಎಂಸಿ ಮತ್ತು ಭೂಸುಧಾರಣಾ ಕಾಯ್ದೆಯ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವ ಅವಶ್ಯಕತೆ ಏನಿತ್ತು? ಈ ಎರಡೂ ಕಾಯ್ದೆಗಳನ್ನು ವಿರೋಧಿಸಿ ಜೆಡಿಎಸ್‌ ಎಲ್ಲಾ ಜಿಲ್ಲಾಕೇಂದ್ರದಲ್ಲಿಯೂ ಪ್ರತಿಭಟನೆ ನಡೆಸಲಿದೆ. ಆದರೆ ತಾವು ಶಸ್ತ್ರತ್ಯಾಗ ಮಾಡಿಲ್ಲ. ಈ ಕಾಯ್ದೆಯಲ್ಲಿರುವ ಸಾಧಕ-ಬಾಧಕಗಳ ಬಗ್ಗೆ ರೈತರು, ಶಾಸಕರ ಜತೆ ಚರ್ಚೆ ಮಾಡಬೇಕಾಗಿತ್ತು. ಇದರಿಂದ ರೈತರಿಗೆ ಯಾವ ರೀತಿ ಅನುಕೂಲವಾಗುತ್ತದೆ. ಯಾವ ಉದ್ದೇಶಕ್ಕಾಗಿ ಈ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ ಎಂಬುದನ್ನು ಸರ್ಕಾರ ಬೆಳಕು ಚೆಲ್ಲಬೇಕಾಗಿತ್ತು ಎಂದು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕಾರಣಿಗಳ ಮೇಲೆ ಭ್ರಷ್ಟಾಚಾರದ ಆರೋಪ ಬರುವುದು ಸಹಜ. ಯಾರ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿಲ್ಲ ಹೇಳಿ? ಭ್ರಷ್ಟಾಚಾರ ವಿಷಯಗಳ ತಾರ್ಕಿಕ ಅಂತ್ಯ ಎಲ್ಲಿಗೆ ಹೋಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದರು.