'ಪ್ರತಿಷ್ಠಿತ ರಾಜಕೀಯ ಕುಟುಂಬದ ಅಣ್ಣ-ತಂಗಿಯಿಂದ ಕುತಂತ್ರ : ಸರ್ಕಾರಕ್ಕೆ ಸ್ವಾಮಿಜಿ ಡೆಡ್ ಲೈನ್
- ಸರ್ಕಾರಕ್ಕೆ ಅ.1 ರ ಒಳಗಾಗಿ ಪಂಚಮಸಾಲಿಗೆ 2ಎ ಮೀಸಲಾತಿ ನೀಡಬೇಕು ಎಂದು ಜಯಮೃತ್ಯುಂಜಯ ಸ್ವಾಮೀಜಿ ಡೆಡ್ ಲೈನ್
- ಯಡಿಯೂರಪ್ಪ ಸರ್ಕಾರದಲ್ಲಿ ಪಂಚಮಸಾಲಿಗೆ 2ಎ ಮೀಸಲಾತಿ ಆಗಬೇಕಾಗಿತ್ತು. ಆದರೆ ಮಾತು ಕೊಟ್ಟು ತಪ್ಪಿದ್ದಾರೆಂದ ಸ್ವಾಮೀಜಿ
ಯಾದಗಿರಿ (ಸೆ.16): ಸರ್ಕಾರಕ್ಕೆ ಅ.1 ರ ಒಳಗಾಗಿ ಪಂಚಮಸಾಲಿಗೆ 2ಎ ಮೀಸಲಾತಿ ನೀಡಬೇಕು ಎಂದು ಜಯಮೃತ್ಯುಂಜಯ ಸ್ವಾಮೀಜಿ ಡೆಡ್ ಲೈನ್ ನೀಡಿದ್ದಾರೆ.
ಯಾದಗಿರಿಯಲ್ಲಿಂದು ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ ಯಡಿಯೂರಪ್ಪ ಸರ್ಕಾರದಲ್ಲಿ ಪಂಚಮಸಾಲಿಗೆ 2ಎ ಮೀಸಲಾತಿ ಆಗಬೇಕಾಗಿತ್ತು. ಆದರೆ ಮಾತು ಕೊಟ್ಟು ತಪ್ಪಿದ್ದಾರೆ. ಸೆ.15 ರ ಒಳಗಾಗಿ ಮೀಸಲಾತಿ ನೀಡುತ್ತೇವೆ ಎಂದು ಹೇಳಿದ್ದರು. ಅದು ನಿನ್ನೆಗೆ ಮುಗಿದಿದೆ ಎಂದರು.
ಈ ಹಿನ್ನಲೆಯಲ್ಲಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಸಮಾವೇಶ ಮಾಡುತ್ತಿದ್ದೇವೆ. ರಾಜ್ಯಾದ್ಯಂತ 224 ವಿಧಾನಸಭಾ ಕ್ಷೇತ್ರಗಳಲ್ಲೂ ಜಾಗೃತಿ ಸಮಾವೇಶ ಮಾಡಲಾಗುವುದು. ಅಕ್ಟೋಬರ್ 1ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಹೋರಾಟ ಮಾಡುವ ಮುಂಚೆ ಸಿಎಂ ಕೊಟ್ಟ ಮಾತು ಈಡೇರಿಸಬೇಕು. ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
ಮೀಸಲಾತಿ ನೀಡದಿದ್ದರೆ ಮತ್ತೆ ಹೋರಾಟ: ಕೂಡಲ ಶ್ರೀ
ಸರ್ಕಾರ ಇದಕ್ಕೆ ಮಣಿಯದಿದ್ದರೆ 5ನೇ ಹಂತದ ಹೋರಾಟ ಮಾಡಲಾಗುವುದು. ಪಂಚಮಸಾಲಿ ಸಮಾಜದ ಹೋರಾಟವನ್ನ ಹತ್ತಿಕ್ಕುವ ಕುತಂತ್ರ ನಡೆದಿದೆ. ಹಾಗೆ ಪಂಚಮಸಾಲಿ ಸಮುದಾಯದ ನಾಯಕರನ್ನು ತುಳಿಯುವ ಪ್ರಯತ್ನ ನಡೆದಿದೆ. ಹಳೆ ಮೈಸೂರು ಭಾಗದಲ್ಲಿ ಸಮಾಜ ಸಂಘಟನೆ ಮಾಡಲು ಹೋದಾಗ ತೊಂದರೆ ಮಾಡಿದ್ದಾರೆ. ಅದು ಒಂದು ಪ್ರತಿಷ್ಠಿತ ರಾಜಕೀಯ ಕುಟುಂಬದಿಂದ ನಡೆದಿದೆ. ಆ ಕುಟುಂಬದ ಹೊಟ್ಟೆ ಕಿಚ್ಚಿನ ಬೆಂಕಿಯಿಂದ ನಾನು ಹೊರ ಬಂದಿದ್ದೇನೆ ಎಂದರು.
ಒಂದೇ ಕುಟುಂಬದ ಅಣ್ಣ-ತಂಗಿಯಿಂದ ಹತ್ತಿಕ್ಕುವ ಯತ್ನ ನಡೆದಿದೆ. ಅ.1 ರಂದು ಎಲ್ಲಿ, ಯಾರು ತೊಂದರೆ ಕೊಟ್ಟರು ಎಂದು ಬಹಿರಂಗಪಡಿಸುತ್ತೇನೆ. ಪ್ರತಿಷ್ಠಿತ ಕುಟುಂಬದ ವಿರುದ್ಧ ಜಯಮೃತ್ಯುಂಜಯ ಸ್ವಾಮೀಜಿ ಆಕ್ರೋಶ ಹೊರಹಾಕಿದರು.