ರಾಜಶೇಖರ ರೆಡ್ಡಿ ಹತ್ಯೆ ಪ್ರಕರಣ ಮತ್ತು ತಮ್ಮ ಮೇಲಿನ ಹತ್ಯೆ ಸಂಚಿನ ಬಗ್ಗೆ ಶಾಸಕ ಗಾಲಿ ಜನಾರ್ಧನ ರೆಡ್ಡಿ ಸಿಬಿಐ ತನಿಖೆಗೆ ಆಗ್ರಹ. ರಾಜ್ಯ ಸರ್ಕಾರದ ಸಿಐಡಿ ತನಿಖೆ ತಿರಸ್ಕರಿಸಿರುವ ಅವರು, ಜ. 17 ರಂದು ಬೃಹತ್ ಪಾದಯಾತ್ರೆ, ಸ್ಮಶಾನಕ್ಕೆ ಸಂಬಂಧಿಸಿದ ಸ್ಫೋಟಕ ವಿಡಿಯೋ ಬಿಡುಗಡೆ ಮಾಡುವುದಾಗಿ ಘೋಷಣೆ!

ಬಳ್ಳಾರಿ (ಜ.10): ಬಳ್ಳಾರಿ ರಾಜಕೀಯದಲ್ಲಿ ಮತ್ತೆ ಸಂಚಲನ ಶುರುವಾಗಿದೆ. ರಾಜಶೇಖರ ರೆಡ್ಡಿ ಹತ್ಯೆ ಪ್ರಕರಣ ಹಾಗೂ ತಮ್ಮ ಮೇಲಿನ ದಾಳಿ, ಹತ್ಯೆ ಸಂಚು ವಿಚಾರವಾಗಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಸಿಐಡಿ ತನಿಖೆಯನ್ನು ನಂಬದ ರೆಡ್ಡಿ, ಈಗ ನೇರವಾಗಿ ಸಿಬಿಐ ತನಿಖೆಗೆ ಆಗ್ರಹಿಸಿ ಬೃಹತ್ ಪಾದಯಾತ್ರೆಗೆ ಸಜ್ಜಾಗಿದ್ದಾರೆ.

ಜ. 17ಕ್ಕೆ ಬೃಹತ್ ಪಾದಯಾತ್ರೆ: ಬಿಜೆಪಿ ಹೈಕಮಾಂಡ್ ಸಾಥ್

ಬಳ್ಳಾರಿ ಜಿಲ್ಲೆಯ ಇತ್ತೀಚಿನ ಆಘಾತಕಾರಿ ಘಟನಾವಳಿಗಳ ಬಗ್ಗೆ ಇಂದು ಪಕ್ಷದ ಪ್ರಮುಖರೊಂದಿಗೆ ಜನಾರ್ಧನ ರೆಡ್ಡಿ ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಅವರು, 'ಇದೇ ತಿಂಗಳು 17 ರಂದು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಮತ್ತು ಪಾದಯಾತ್ರೆ ನಡೆಸಲಾಗುವುದು. ಕೇಂದ್ರ ನಾಯಕರು ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದು, ಪಾದಯಾತ್ರೆಯ ಸಂಪೂರ್ಣ ರೂಪರೇಷೆಗಳನ್ನು ಇನ್ನೆರಡು ದಿನಗಳಲ್ಲಿ ಪ್ರಕಟಿಸಲಾಗುವುದು' ಎಂದು ತಿಳಿಸಿದರು. ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಮತ್ತು ಸರ್ಕಾರದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸಿಐಡಿ ಮೇಲೆ ನಂಬಿಕೆ ಇಲ್ಲ, ಸಿಬಿಐ ತನಿಖೆಗೆ ರೆಡ್ಡಿ ಆಗ್ರಹ

ರಾಜಶೇಖರ ರೆಡ್ಡಿ ಹತ್ಯೆ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿರುವುದಕ್ಕೆ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. CID ಇರೋದು ರಾಜ್ಯ ಸರ್ಕಾರದ ಅಧೀನದಲ್ಲಿದೆ. ಭರತ್ ರೆಡ್ಡಿ ನಮ್ಮ ಮನೆಮುಂದೆ ಬಂದಾಗ ರಾಜಶೇಖರ ರೆಡ್ಡಿ ಹತ್ಯೆ ಮಾಡಿದ್ರು. ಟರ್ಬನ್ ಹಾಕಿರೋರು ರಾಜಶೇಖರ ರೆಡ್ಡಿ ಸುತ್ತಲೇ ಓಡಾಡ್ತಿದ್ರು. ಲಾಠಿ ಚಾರ್ಜ್ ಆದ್ರೂ ಅವನ ಹಿಂದೆಯೇ ಇದ್ರೂ. ಈ ಘಟನೆಯಲ್ಲಿ ಪೊಲೀಸರೇ ಟ್ರಾನ್ಸ್‌ಫರ್ ಆದ್ರೂ, ನಿಜವಾದ ಅಪರಾಧಿಗಳನ್ನ ಬಂಧನ ಮಾಡಿಲ್ಲ. ಇಂಥ ಸರ್ಕಾರ ಪ್ರಕರಣವನ್ನು ಸಿಐಡಿಗೆ ಕೊಟ್ರೆ ಏನು ಆಕಾಶದಿಂದ ಸತ್ಯ ಹೊರಬರುತ್ತಾ ಜನಾರ್ದನ ರೆಡ್ಡಿಗೆ ಸೆಕ್ಯುರಿಟಿ ಅಮೆರಿಕಾದಿಂದ ತನ್ನಿ ಅಂತ ಡಿಸಿಎಂ ಹೇಳಿದ್ದಾರೆ. ಜೊತೆಗೆ ಬುಲೆಟ್ ಇಲ್ಲಿಗೆ ಹೇಗೆ ಬಿತ್ತು ಅನ್ನೋದನ್ನ ಹೇಳಿದ್ದಾರೆ. ಇಂಥ ಸರ್ಕಾರದಲ್ಲಿ CID ತನಿಖೆ ಇಂದ ನ್ಯಾಯ ಸಿಗಲಿದೆ ಅನ್ನೋದು ನನಗೆ ನಂಬಿಕೆ ಇಲ್ಲ ಸಿಬಿಐ ತನಿಖೆಯೇ ಆಗಬೇಕು ಎಂದು ಆಗ್ರಹಿಸಿದರು.

ಶ್ರೀರಾಮುಲು ಗೈರುಹಾಜರಿ ಬಗ್ಗೆ ಸ್ಪಷ್ಟನೆ

ಸಭೆಯಲ್ಲಿ ಮಾಜಿ ಸಚಿವ ಶ್ರೀರಾಮುಲು ಹಾಗೂ ಸೋಮಶೇಖರ್ ರೆಡ್ಡಿ ಕಾಣಿಸಿಕೊಳ್ಳದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರೆಡ್ಡಿ, ಬಳ್ಳಾರಿಯಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೂ ನೂರಾರು ಜನರು ಭೇಟಿ ನೀಡುತ್ತಿದ್ದಾರೆ. ಆ ಜನರನ್ನು ಅಟೆಂಡ್ ಮಾಡಲು ಶ್ರೀರಾಮುಲು ಮತ್ತು ಸೋಮಶೇಖರ್ ರೆಡ್ಡಿ ಅಲ್ಲೇ ಉಳಿದುಕೊಂಡಿದ್ದಾರೆ. ಹೀಗಾಗಿ ನಾನು ಮಾತ್ರ ಇಲ್ಲಿಗೆ ಸಭೆಗೆ ಬಂದಿದ್ದೇನೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ,' ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ತಮ್ಮ ಬೆಂಬಲಕ್ಕೆ ನಿಂತ ದೇವೇಗೌಡರು ಹಾಗೂ ಕುಮಾರಸ್ವಾಮಿ ಕುಟುಂಬಕ್ಕೆ ಧನ್ಯವಾದ ಅರ್ಪಿಸಿದರು.

ನಾಳೆ ಹೊಸ ವಿಡಿಯೋ ಬಾಂಬ್ ಸಿಡಿಸಲಿರುವ ರೆಡ್ಡಿ!

ಸಂದರ್ಶನದ ಕೊನೆಯಲ್ಲಿ ಜನಾರ್ಧನ ರೆಡ್ಡಿ ಅತ್ಯಂತ ಸ್ಪೋಟಕ ಮಾಹಿತಿಯೊಂದನ್ನು ನೀಡಿದ್ದಾರೆ. 'ನಾಳೆ ಬಳ್ಳಾರಿಯಲ್ಲಿ ಸ್ಮಶಾನಕ್ಕೆ ಸಂಬಂಧಿಸಿದ ಶಾಕಿಂಗ್ ವಿಡಿಯೋ ದಾಖಲೆ ಬಿಡುಗಡೆ ಮಾಡುತ್ತೇನೆ. ಸ್ಮಶಾನದಲ್ಲಿ ಗುಂಡಿ ತೆಗೆದು ಮುಚ್ಚಿಸಿರುವ ಹಾಗೂ ಜನರನ್ನು ಬೆದರಿಸಿರುವ ದೃಶ್ಯಗಳು ಅದರಲ್ಲಿವೆ. ಶ್ರೀರಾಮುಲು ಹಾಗೂ ನನ್ನ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದ ವಿಡಿಯೋ ಕೂಡ ನನ್ನ ಬಳಿಯಿದೆ' ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ನಡುಕ ಹುಟ್ಟಿಸಿದ್ದಾರೆ.