ಕಡಬ ತಾಲೂಕಿನ ಸವಣೂರು ಗ್ರಾಮದ ಅರೇಲ್ತಾಡಿ ಶ್ರೀ ಉಲ್ಲಾಕ್ಳು, ಕೆಡೆಂಜೊಡಿತ್ತಾಯಿ ದೇವಳದಲ್ಲಿ ನಡೆದ ನೇಮೋತ್ಸವದಲ್ಲಿ ದೈವ ನುಡಿದಂತೆ ಜನಾರ್ಧನ ರೆಡ್ಡಿ 27 ದಿನದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ದೈವವು 'ಒಂದು ತಿಂಗಳೊಳಗೆ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ' ಎಂದು ನುಡಿದಿತ್ತು.
ದಕ್ಷಿಣ ಕನ್ನಡ (ಜೂ. 14): ಕಾಲ ಬದಲಾಯಿಸುವ ಶಕ್ತಿ ದೇವರಿಗಿದೆ ಎಂಬ ನಂಬಿಕೆ ಇನ್ನೊಂದು ಬಾರಿ ಸತ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಗ್ರಾಮದ ಪ್ರಸಿದ್ಧ ದೈವಸ್ಥಾನ ಅರೇಲ್ತಾಡಿ ಶ್ರೀ ಉಲ್ಲಾಕ್ಳು, ಕೆಡೆಂಜೊಡಿತ್ತಾಯಿ ದೇವಳದಲ್ಲಿ ನಡೆದ ನೇಮೋತ್ಸವ ಕಾರ್ಯಕ್ರಮದ ವೇಳೆ ನುಡಿದ ದೇವರ ನುಡಿಯು ಸತ್ಯವಾಗಿದೆ ಎಂಬುದಕ್ಕೆ ರಾಜಕಾರಣಿ ಜನಾರ್ಧನ ರೆಡ್ಡಿ ಅವರು ಜೈಲಿನಿಂದ ಬಿಡುಗಡೆಯಾದ ಘಟನೆಯು ಪ್ರತ್ಯಕ್ಷ ಸಾಕ್ಷ್ಯವಾಗಿದೆ.
ಮೇ 13ರಂದು ಇಲ್ಲಿ ನಡೆಯಬೇಕಿದ್ದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಭಾಗವಹಿಸಬೇಕಿತ್ತು. ಆದರೆ, ಗಣಿ ಹಗರಣದ ಕೇಸಿನಲ್ಲಿ ಜಾಮೀನು ರದ್ದುಗೊಂಡು ಜನಾರ್ಧನ ರೆಡ್ಡಿ ಅವರು ಜೈಲಿನಲ್ಲಿ ಬಂಧನವಾಗಿದ್ದರು. ಹೀಗಾಗಿ, ಜೈಲಿನಲ್ಲಿದ್ದ ಜನಾರ್ಧನ ರೆಡ್ಡಿ ನೇಮೋತ್ಸವ ಧಾರ್ಮಿಕ ಕಾರ್ಯಕ್ರಮಕ್ಕೆ ಹಾಜರಾಗಲಾಗಿಲ್ಲ. ಆದರೆ ಮೇ 15ರಂದು ನಡೆದ ನೇಮೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಸ್ಥಳೀಯರು ದೈವದ ಬಳಿ 'ರೆಡ್ಡಿಯವರ ಬಿಡುಗಡೆ ಬಗ್ಗೆ' ಕೇಳಿದಾಗ, ದೈವವು ಸ್ಪಷ್ಟವಾಗಿ 'ಇಂದಿನಿಂದ ಒಂದು ತಿಂಗಳೊಳಗೆ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ' ಎಂದು ನುಡಿದಿತ್ತು.
ದೈವದ ನುಡಿಯಂತೆ ವಿಸ್ಮಯಕಾರಿಯಾಗಿ ಶಾಸಕ ಜನಾರ್ಧನ ರೆಡ್ ಅವರು ಜೈಲು ಸೇರಿದ ಸರಿಯಾಗಿ 27ನೇ ದಿನವೇ ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾರೆ. ಇದನ್ನು ಅವರು ಸ್ವತಃ ಶಾಸಕ ಜನಾರ್ಧನ ರೆಡ್ಡಿಯವರೇ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಇದು ಕಾರ್ಣಿಕ ದೈವ ಕೆಡೆಂಜೊಡಿತ್ತಾಯಿ ದೇವಿಯ ಅನುಗ್ರಹ' ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಜನಾರ್ಧನ ರೆಡ್ಡಿ ಪೋಸ್ಟ್‌ಗೆ ಮಾರುತಿ ವಾಲಿಕಾರ್ ಎನ್ನುವವರು ಕಾಮೆಂಟ್ ಮಾಡಿದ್ದು, 'ನೀವು ಬಿಡುಗಡೆ ಆಗಿದ್ದಕ್ಕೆ ಅಭಿನಂದನೆಗಳು ಸರ್. ಆದರೆ ನಿಮ್ಮ ಸಹೋದರರ (ಸೋಮಶೇಖರ್ ರೆಡ್ಡಿ, ಕರುಣಾಕರ ರಡಡ್ಡಿ) ಹಾಗೂ ಆತ್ಮೀಯ ಗೆಳೆಯನ (ಶ್ರೀರಾಮುಲು) ಸಂಬಂಧಗಳು ಮತ್ತೆ ಮೊದಲಿನ ತರ ಆಗಬೇಕು ಸರ್' ಎಂಬ ಭಾವನಾತ್ಮಕ ಕಾಮೆಂಟ್ ಮಾಡಿದ್ದಾರೆ.
