Asianet Suvarna News Asianet Suvarna News

ಗಂಗಾವತಿ ದರ್ಗಾಕ್ಕೆ 6 ಕೋಟಿ ಅನುದಾನ: ಜನಾರ್ದನ ರೆಡ್ಡಿ ಭರವಸೆ

ಇಲ್ಲಿಯ ಫಿರ್ಜಾದ್‌ ಓಣಿಯಲ್ಲಿರುವ ಖಲೀಲ್‌ ಉಲ್ಲಾ ಖಾದ್ರಿ ಹೈದರ ದರ್ಗಾದ ಕಲ್ಚರಲ್‌ ಹಾಲ್‌ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡುವುದಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ ಭರವಸೆ ನೀಡಿದ್ದಾರೆ.

Janardhan reddy signed for dargah development project in gangavathi gvd
Author
First Published Dec 24, 2022, 12:47 PM IST

ಗಂಗಾವತಿ (ಡಿ.24): ಇಲ್ಲಿಯ ಫಿರ್ಜಾದ್‌ ಓಣಿಯಲ್ಲಿರುವ ಖಲೀಲ್‌ ಉಲ್ಲಾ ಖಾದ್ರಿ ಹೈದರ ದರ್ಗಾದ ಕಲ್ಚರಲ್‌ ಹಾಲ್‌ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡುವುದಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ ಭರವಸೆ ನೀಡಿದ್ದಾರೆ. ಖಲೀಲ್‌ ಉಲ್ಲಾ ಖಾದ್ರಿ ಹೈದರ ದರ್ಗಾಕ್ಕೆ ಭೇಟಿ ನೀಡಿ ಕಲ್ಚರಲ್‌ ಹಾಲ್‌ ಕಾಮಗಾರಿಯನ್ನು ವೀಕ್ಷಿಸಿದ ಜನಾರ್ದನ ರೆಡ್ಡಿ, ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರೆಡ್ಡಿ ಅವರು, ನನಗೆ ಈ ದರ್ಗಾವು ಬಳ್ಳಾರಿಯಲ್ಲಿದ್ದ ವೇಳೆಯಿಂದಲೂ ಸಂಪರ್ಕ ಇದೆ. ನಾನು ರಾಜಕೀಯದಲ್ಲಿ ಇರಲಿ, ಬಿಡಲಿ. ದರ್ಗಾಕ್ಕೆ 6 ಕೋಟಿ ನೀಡುತ್ತೇನೆ. ಈ ಕುರಿತು ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ದರ್ಗಾದ ಸೈಯದ್‌ ಖಧೀರ್‌ ಉಲ್ಲಾ ಇದ್ದರು.

25ರಂದು ಬೆಂಗಳೂರಿನಲ್ಲಿ ನಿಲುವು ಪ್ರಕಟ: ಇದೇ ತಿಂಗಳು ಡಿ. 25ರಂದು ನನ್ನ ರಾಜಕೀಯ ನಿಲುವಿನ ಬಗ್ಗೆ ಬೆಂಗಳೂರಿನಲ್ಲಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮಾಜಿ ಸಚಿವ ಜನಾರ್ದಾನ ರೆಡ್ಡಿ ತಿಳಿಸಿದರು. ಗ್ರಾಮದೇವತೆ ದುರ್ಗಾದೇವಿ ದರ್ಶನಕ್ಕೆ ಆಗಮಿಸಿದ್ದ ಜನಾರ್ದನ ರೆಡ್ಡಿ ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ನಂತರ ಶ್ರೀ ಚೆನ್ನಬಸವಸ್ವಾಮಿ ಮಠಕ್ಕೆ ತೆರಳಿ ದರ್ಶನ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಾಗಲೇ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರಕಟಿಸಿದ್ದೇನೆ. ಆದರೂ ಅಂತಿಮ ತೀರ್ಮಾನ ಬೆಂಗಳೂರಿನಲ್ಲಿ ಮಾಧ್ಯಮದವರಿಗೆ ಘೋಷಿಸುವುದಾಗಿ ತಿಳಿಸಿದರು.

ಗಂಗಾವತಿಯಲ್ಲಿ ನೂತನ ಮನೆ ಗೃಹ ಪ್ರವೇಶ ಮಾಡಿದ ಜನಾರ್ಧನ ರೆಡ್ಡಿ: ಪತ್ನಿ ಅರುಣಾ ಲಕ್ಷ್ಮೀ ಹೇಳಿದ್ದೇನು?

ಗಂಗಾವತಿ ನಗರ ನನಗೆ ಅಚ್ಚುಮೆಚ್ಚಿನ ತಾಣ. ಇದೇ ನಗರದಲ್ಲಿ ಜೀವಮಾನದವರಿಗೂ ಇರುವೆ. ಬಳ್ಳಾರಿ ಜಿಲ್ಲೆ ಮತ್ತು ಕೊಪ್ಪಳ ಜಿಲ್ಲೆಯ ಅದರಲ್ಲೂ ಗಂಗಾವತಿ ಜನತೆಯ ಬಗ್ಗೆ ಪ್ರೀತಿ, ವಿಶ್ವಾಸ ಇದೆ ಎಂದರು. ಬಳ್ಳಾರಿಯಲ್ಲಿ ಗ್ರಾಮದೇವತೆ ದುರ್ಗಾದೇವಿ ನಮಗೆ ಆಶೀರ್ವಾದ ಮಾಡಿದ್ದಾರೆ. ಅದರಂತೆ ಗಂಗಾವತಿ ಗ್ರಾಮ ದೇವತೆ ದುರ್ಗಾದೇವಿ ಜಾತ್ರೆ ನಡೆಯುತ್ತಿದ್ದು, ಈ ದೇವಿಯ ಆಶೀರ್ವಾದ ಪಡೆಯುತ್ತಿರುವುದಾಗಿ ಹೇಳಿದರು. ನನಗೆ ಅಂಜನಾದ್ರಿ ಆಂಜನೇಯಸ್ವಾಮಿ ಆಶೀರ್ವಾದವಿದೆ. ಇಂತಹ ಪುಣ್ಯಭೂಮಿಯಲ್ಲಿ ಇರುವುದು ಪುಣ್ಯದ ಕೆಲಸವಾಗಿದೆ. ಕಳೆದವಾರ ಗಂಗಾವತಿ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ನಿಮ್ಮ ಬೆಂಬಲವಾಗಿದ್ದರು. ಈಗ ಮರೆಯಾಗಿದ್ದಾರೆ ಎಂಬ ಪ್ರಶ್ನೆಗೆ, ಎಲ್ಲರೂ ನಮ್ಮವರೇ. ಬರುವ ದಿನಗಳಲ್ಲಿ ಎಲ್ಲರೂ ನಮ್ಮ ಜತೆ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗಂಗಾವತಿಯಲ್ಲೇ ನನ್ನ ಸ್ಪರ್ಧೆ, ರೆಡ್ಡಿ ಕಣಕ್ಕಿಳಿದರೆ ಭಯವಿಲ್ಲ: ಶಾಸಕ ಪರಣ್ಣ

ಮುಗಿಬಿದ್ದ ಅಭಿಮಾನಿಗಳು: ಗಾಲಿ ಜನಾರ್ದನರೆಡ್ಡಿ ಗಂಗಾವತಿ ನಗರಕ್ಕೆ ಆಗಮಿಸುತ್ತಿದ್ದಾರೆಂಬ ಸುದ್ದಿ ತಿಳಿಯುತ್ತಲೆ ಅಭಿಮಾನಿಗಳು ರೆಡ್ಡಿ ಅವರ ನಿವಾಸದ ಮುಂದೆ ಜಮಾಯಿಸಿದ್ದರು. ನಗರ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ರೆಡ್ಡಿಗೆ ಶಾಲು, ಹೂವಿನ ಹಾರ, ತುರಾಯಿ ಹಾಕಿ ಸತ್ಕರಿಸಿದರು. ಈ ಸಂದರ್ಭದಲ್ಲಿ ರೆಡ್ಡಿ ಅವರು ಅಭಿಮಾನಿಗಳಿಗೆ ಪರಸ್ಪರ ಶುಭ ಕೋರಿ ಬರುವ ದಿನಗಳಲ್ಲಿ ನಿಮ್ಮ ಜತೆ ಇರುವುದಾಗಿ ತಿಳಿಸಿದರು.

Follow Us:
Download App:
  • android
  • ios