ಬೆಂಗಳೂರು(ಜೂ.02): ಕೋವಿಡ್‌ನಿಂದ ಸಂಕಷ್ಟ ಎದುರಿಸುತ್ತಿರುವ ಕೈಗಾರಿಕಾ ವಲಯದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಭರವಸೆ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಕಾಸಿಯಾ, ಎಫ್‌ಐಸಿಸಿಐ ಮತ್ತು ಎಫ್‌ಕೆಸಿಸಿಐನ ಅಧ್ಯಕ್ಷರು ಸಚಿವರನ್ನು ಭೇಟಿ ಮಾಡಿ ಕೈಗಾರಿಕಾ ವಲಯ ಎದುರಿಸುತ್ತಿರುವ ಹಲವರು ಸಮಸ್ಯೆಗಳನ್ನು ವಿವರಿಸಿ ಪರಿಹಾರಕ್ಕಾಗಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ರಾಜ್ಯದ ಮತ್ತು ದೇಶದ ಆರ್ಥಿಕತೆಗೆ ಸಾಕಷ್ಟು ಕೊಡುಗೆ ನೀಡುವ ಕೈಗಾರಿಕೋದ್ಯಮಗಳು ಲಾಕ್‌ಡೌನ್‌ನಿಂದ ತೊಂದರೆಗೀಡಾಗಿವೆ. ಈ ಸಂಬಂಧ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ಲಾಕ್‌ಡೌನ್‌ ಕುರಿತು ಕಾದು ನೋಡಿ ನಿರ್ಧಾರ: ಜಗದೀಶ್‌ ಶೆಟ್ಟರ್‌

ಇದೇ ವೇಳೆ ಸಂಘಟನೆಗಳ ಅಧ್ಯಕ್ಷರು ವಿದ್ಯುತ್‌, ತೆರಿಗೆ ಸೇರಿದಂತೆ ಕೆಲವು ರಿಯಾಯತಿ ನೀಡುವಂತೆ ಮನವಿ ಮಾಡಿದರು. ಎಫ್‌ಐಸಿಸಿಐ ರಾಜ್ಯಾಧ್ಯಕ್ಷ ಉಲ್ಲಾಸ್‌ ಕಾಮತ್‌, ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಲ್‌.ಎಂ.ಸುಂದರ, ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ ಉಪಸ್ಥಿತರಿದ್ದರು.