* ಹೊಸಪೇಟೆಯಲ್ಲಿ 2 ದಿನ ಮಹತ್ವದ ಬೈಠಕ್‌* ಬಿಜೆಪಿ ಹೈ ವೋಲ್ಟೇಜ್‌ ಕಾರ‍್ಯಕಾರಿಣಿ ಇಂದಿನಿಂದ* ಚುನಾವಣೆ ಸಿದ್ಧತೆ, ಸಂಪುಟ ವಿಸ್ತರಣೆ ಚರ್ಚೆ

ಬೆಂಗಳೂರು(ಏ.16): ರಾಜ್ಯದ ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಅರಂಭಿಸುವುದಕ್ಕೆ ಪೂರಕವಾಗಿ ಪಕ್ಷದ ಸಂಘಟನೆ ಬಲಪಡಿಸುವ ಹಿನ್ನೆಲೆಯಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಚಿಂತನ-ಮಂಥನ ನಡೆಯಲಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕಾರಿಣಿಯಲ್ಲಿ ಪಕ್ಷದ ಬಲವರ್ಧನೆಗೆ ಅವಶ್ಯಕ ಇರುವ ಬದಲಾವಣೆಗಳ ಕುರಿತು ಚರ್ಚೆಗಳು ನಡೆಯಲಿವೆ. ಜತೆಗೆ ಸಾಕಷ್ಟುಕುತೂಹಲ ಮೂಡಿಸಿರುವ ಸಂಪುಟ ಕಸರತ್ತು ಹಾಗೂ ನಿಗಮ ಮಂಡಳಿಗಳ ನೇಮಕ ಕುರಿತಂತೆಯೂ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಹುಬ್ಬಳ್ಳಿಗೆ ಆಗಮಿಸಿದ ಬಿಜೆಪಿ ಉಸ್ತುವಾರಿ, ಶಾಸಕ ಬೆಲ್ಲದ ಶಕ್ತಿ ಪ್ರದರ್ಶನ

ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಜೆ.ಪಿ.ನಡ್ಡಾ ಅವರು ಹುಬ್ಬಳಿಗೆ ಆಗಮಿಸಿ, ಅಲ್ಲಿಂದ ಹೊಸಪೇಟೆಗೆ ತೆರಳಲಿದ್ದಾರೆ. ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್‌, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ…, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಸೇರದಂತೆ ಸಚಿವರು, ಪ್ರಮುಖ ಮುಖಂಡರು, ಶಾಸಕರು, ಸಂಸದರು ಭಾಗವಹಿಸಲಿದ್ದಾರೆ.

ಮುಜುಗರದಿಂದ ಪಾರು:

ಶೇ.40ರಷ್ಟುಕಮಿಷನ್‌ ವಿವಾದದಿಂದಾಗಿ ಪಕ್ಷದ ವರ್ಚಸ್ಸಿಗೆ ಪೆಟ್ಟಾಗಿದ್ದು, ಅದನ್ನು ಸರಿಪಡಿಸಿಕೊಂಡು ವರ್ಚಸ್ಸು ಹೆಚ್ಚಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಯಲಿದೆ. ಗುತ್ತಿಗೆದಾರ ಸಂತೋಷ್‌ ಪಾಟೀಲ… ಆತ್ಮಹತ್ಯೆ ಪ್ರಕರಣದಿಂದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸ್ವಲ್ಪಮಟ್ಟಿಗೆ ಪ್ರತಿಪಕ್ಷಗಳ ಟೀಕಾಸ್ತ್ರದಿಂದ ಬಚಾವ್‌ ಆಗಲು ಸಹಕಾರಿಯಾಗಿದೆ. ಇಲ್ಲದಿದ್ದರೆ ಪಕ್ಷವು ತೀವ್ರ ಮುಜುಗರ ಅನುಭವಿಸಬೇಕಾಗಿತ್ತು. ಸದ್ಯಕ್ಕೆ ಅದರಿಂದ ತಪ್ಪಿಸಿಕೊಂಡಂತಾಗಿದೆ. 2023ಕ್ಕೆ ಸಾರ್ವತ್ರಿಕ ಚುನಾವಣೆ ಎದುರಾಗುವ ಹಿನ್ನೆಲೆಯಲ್ಲಿ ಕೈಗೊಳ್ಳಬಹುದಾದ ರಾಜಕೀಯ ತಂತ್ರಗಾರಿಕೆ ಕುರಿತು ಚರ್ಚೆಗಳು ನಡೆಯಲಿವೆ. ಸ್ವಂತಬಲದ ಮೇಲೆ ಅಧಿಕಾರಕ್ಕೆ ಬರಲು ಬೇಕಾದ ಕಾರ್ಯತಂತ್ರಗಳ ಕುರಿತು ಕಾರ್ಯಕಾರಿಣಿಯಲ್ಲಿ ಸಮಾಲೋಚನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಸಂತೋಷ್‌ ಆತ್ಮ​ಹತ್ಯೆ ಕೇಸ್‌: ವಿವರಣೆ ಪಡೆದ ಪ್ರಧಾನಿ ಮೋದಿ

ನಿರ್ಣಯ ಅಂಗೀಕಾರ:

ಅಲ್ಲದೆ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವಿಚಾರಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಣಯಗಳನ್ನು ಅಂಗೀಕರಿಸುವ ಸಾಧ್ಯತೆ ಇದೆ. ಪಕ್ಷದ ಸಂಘಟನೆ ಗಟ್ಟಿಗೊಳಿಸಿ ಚುನಾವಣೆಗೆ ಅಣಿಗೊಳಿಸುವುದೇ ಸಭೆಯ ಪ್ರಮುಖ ಉದ್ದೇಶವಾಗಿದೆ. ಪಕ್ಷ ಮತ್ತು ಸರ್ಕಾರ ವರ್ಚಸ್ಸಿಗೆ ಯಾವುದೇ ರೀತಿಯಲ್ಲಿಯೂ ಧಕ್ಕೆ ಬಾರದಂತೆ ಯಾವುದೇ ಲೋಪದೋಷವಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವ ಕುರಿತು ಮಹತ್ವದ ಚರ್ಚೆಗಳು ನಡೆಯಲಿವೆ. ಈಗಾಗಲೇ ಕೆ.ಎಸ್‌.ಈಶ್ವರಪ್ಪ ಘಟನೆಯಿಂದ ಪಕ್ಷ ಮತ್ತು ಸರ್ಕಾರ ವರ್ಚಸ್ಸಿಗೆ ಧಕ್ಕೆಯಾಗಿದೆ. ಇದನ್ನು ಸರಿಪಡಿಸಿಕೊಂಡು ಮುಂದಿನ ದಿನದಲ್ಲಿ ಯಾವ ರೀತಿ ಸುಧಾರಣೆಯಾಗಬೇಕು ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಹೇಗೆ ಮೂಡಿಸಬೇಕು ಎಂಬುದರ ಬಗ್ಗೆಯೂ ಕಾರ್ಯಕಾರಿಣಿಯಲ್ಲಿ ಸಮಾಲೋಚನೆ ನಡೆಯಲಿದೆ.

ನಡ್ಡಾ ಕಿವಿಮಾತು:

ಪ್ರತಿಪಕ್ಷ ಕಾಂಗ್ರೆಸ್‌ ಟೀಕೆಗೆ ಪಕ್ಷದಲ್ಲಿ ಒಗ್ಗಟ್ಟಾಗಿ ಹೇಗೆ ತಿರುಗೇಟು ನೀಡಬೇಕು ಮತ್ತು ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಯಾವ ರೀತಿ ಕಾರ್ಯೋನ್ಮುಖವಾಗಬೇಕು ಎಂಬುದರ ಬಗ್ಗೆ ಜೆ.ಪಿ.ನಡ್ಡಾ ಅವರು ರಾಜ್ಯದ ಮುಖಂಡರಿಗೆ ಸಲಹೆ-ಸೂಚನೆಗಳನ್ನು ನೀಡಲಿದ್ದಾರೆ ಎನ್ನಲಾಗಿದೆ.

Chikkamagaluru: ಸಂತೋಷ್‌ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಪಾತ್ರ ಕಂಡುಬಂದಿಲ್ಲ: ಸಿ.ಟಿ.ರವಿ

ಸಂಪುಟ ಕಸರತ್ತು:

ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಕೆ.ಎಸ್‌.ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಐದು ಸ್ಥಾನಗಳು ಖಾಲಿ ಇರಲಿವೆ. ಒಂದೆರಡು ಸಚಿವರ ರಾಜೀನಾಮೆ ಪಡೆದು 6-7 ಸಚಿವ ಸ್ಥಾನಗಳಿಗೆ ಹೊಸ ಮುಖಗಳಿಗೆ ಅವಕಾಶ ನೀಡುವ ಕುರಿತು ಮುಖಂಡರು ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.