ಬೆಂಗಳೂರು (ಅ.16):  ಥಲಸ್ಸೀಮಿಯಾ ರೋಗದಿಂದ ಬಳಲುತ್ತಿದ್ದ ಮಗುವಿನ ಜೀವ ಉಳಿಸಲು ಐವಿಎಫ್‌ (ಪ್ರನಾಳ ಶಿಶು ತಂತ್ರಜ್ಞಾನ) ಮೂಲಕ ಮತ್ತೊಂದು ಮಗುವಿಗೆ (ಸೇವಿಯರ್‌ ಸಿಬ್ಲಿಂಗ್‌) ಜನ್ಮ ಕೊಟ್ಟು ಆ ಮಗುವಿನ ಅಸ್ಥಿಮಜ್ಜೆ ಬಳಸಿ ಮೊದಲ ಮಗುವನ್ನು ಉಳಿಸುವ ಪ್ರಯತ್ನದಲ್ಲಿ ವೈದ್ಯಕೀಯ ಲೋಕ ಯಶಸ್ವಿಯಾಗಿದೆ.

ದೇಶದಲ್ಲೇ ಮೊದಲು ಎನ್ನಲಾದ ಈ ವೈದ್ಯಕೀಯ ಪ್ರಯತ್ನ ಅಹಮದಾಬಾದ್‌ನಲ್ಲಿ ನಡೆದಿದ್ದು, ಥಲಸ್ಸೀಮಿಯಾ ರೋಗಿಗಳಲ್ಲಿ ಹೊಸ ಆಶಾಕಿರಣವೊಂದು ಮೂಡಿದೆ. ಥಲಸ್ಸೀಮಿಯಾ ಅಂದರೆ ರಕ್ತದಲ್ಲಿ ಹಿಮೋಗ್ಲೋಬಿನ್‌ ಉತ್ಪತ್ತಿಯಾಗದೆ ಅನಾರೋಗ್ಯ ಉಂಟಾಗುವುದು. ಈ ಸಮಸ್ಯೆ ಇರುವವರಿಗೆ ಪದೇಪದೇ ರಕ್ತ ಮರುಪೂರಣ (ರಕ್ತ ಬದಲಾವಣೆ) ಚಿಕಿತ್ಸೆ ನೀಡಬೇಕಾಗುತ್ತದೆ. ನಂತರವೂ ಇವರು ದೀರ್ಘಕಾಲ ಬದುಕುವ ಸಾಧ್ಯತೆ ಕಡಿಮೆಯಿರುತ್ತದೆ.

ಕೊರೋನಾ ಲಸಿಕೆ ಹಾಗೂ ಸಂಶೋಧನೆ ಕುರಿತು ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ! ..

ಹೈದರಾಬಾದ್‌ ನಿವಾಸಿಗಳಾದ ಸಹದೇವ್‌ ಸಿಂಗ್‌ ಸೋಲಂಕಿ ಮತ್ತು ಅಲ್ಪಾ ಸೋಲಂಕಿಯ ಪುತ್ರ ಅಭಿಜಿತ್‌ಗೆ ಥಲಸ್ಸೀಮಿಯಾ ತೊಂದರೆ ಕಾಣಿಸಿಕೊಂಡಿತ್ತು. ಆರು ವರ್ಷದ ಈ ಪುಟ್ಟಬಾಲಕನಿಗೆ ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟ್‌ (ಅಸ್ಥಿಮಜ್ಜೆ ಕಸಿ) ನಡೆಸಲು ದಾನಿಗಳ ಕೊರತೆ ಎದುರಾಗಿತ್ತು.

ಐವಿಎಫ್‌ ಮೂಲಕ ಮತ್ತೊಂದು ಮಗು ಪಡೆದರೆ ಈ ಅಭಿಜಿತ್‌ನನ್ನು ಉಳಿಸಲು ಸಾಧ್ಯ ಎಂದು ವೈದ್ಯರು ಸಲಹೆ ನೀಡಿದರು. ಅದಕ್ಕೆ ದಂಪತಿ ಒಪ್ಪಿದರು. ಅದರಂತೆ ಅಭಿಜಿತ್‌ನ ರಕ್ತದ ಗುಂಪಿಗೆ ಹೊಂದಾಣಿಕೆಯಾಗುವ ವ್ಯಕ್ತಿಗಳ ನೆರವಿನಿಂದ ಪ್ರನಾಳ ಶಿಶು ತಂತ್ರಜ್ಞಾನದಲ್ಲಿ ಸೇವಿಯರ್‌ ಸಿಬ್ಲಿಂಗ್‌ (ಜೀವ ಉಳಿಸುವ ಒಡಹುಟ್ಟಿದವರು) ಮಗುವೇ ಕಾವ್ಯ. ಈ ಮಗುವಿಗೆ ಒಂದು ವರ್ಷವಾದ ನಂತರ ಇದರ ಅಸ್ಥಿಮಜ್ಜೆಯನ್ನು ಅಭಿಜಿತ್‌ಗೆ ಕಸಿ ಮಾಡಲಾಯಿತು. ತನ್ಮೂಲಕ ಇದೇ ಮೊದಲ ಬಾರಿಗೆ ಐವಿಎಫ್‌ ಮೂಲಕ ಸೇವಿಯರ್‌ ಸಿಬ್ಲಿಂಗ್‌ ಕ್ರಮದಲ್ಲಿ ಸಹೋದರಿಯಿಂದ ಪುಟ್ಟಬಾಲಕನ ಜೀವ ಉಳಿಸಲಾಗಿದೆ ಎಂದು ನೋವಾ ಐವಿಎಫ್‌ ಫರ್ಟಿಲಿಟಿ ಸೆಂಟರ್‌ನ ವೈದ್ಯಕೀಯ ನಿರ್ದೇಶಕ ಡಾ.ಮನೀಶ್‌ ಬ್ಯಾಂಕರ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಂದೇ ದಿನ 13 ಮಕ್ಕಳಿಗೆ ಕೊರೋನಾ ವದಂತಿ: ಜನರಲ್ಲಿ ಆತಂಕ

ಥಲಸ್ಸೀಮಿಯಾ ರೋಗಿಗೆ ಅಸ್ಥಿಮಜ್ಜೆ ಕಸಿ ಶಾಶ್ವತ ಪರಿಹಾರ ಒದಗಿಸುತ್ತದೆ. ಕುಟುಂಬದ ಸದಸ್ಯರು ಅಥವಾ ಇತರೆ ದಾನಿಗಳ ಮೂಲಕ ಅಸ್ಥಿಮಜ್ಜೆ ವರ್ಗಾವಣೆ ಮಾಡಿಕೊಳ್ಳಬಹುದು. ತಮ್ಮ ವಂಶದವರಿಂದಲೇ ಕಸಿಗೆ ದಾನ ಪಡೆಯುವುದಕ್ಕೆ ಸೇವಿಯರ್‌ ಸಿಬ್ಲಿಂಗ್‌ ಎನ್ನಲಾಗುತ್ತದೆ. ಬೋನ್‌ಮ್ಯಾರೋ ಕಸಿಯನ್ನು ಪೀಡಿತ ಮಗುವಿಗೆ ಸಿಐಎಂಎಸ್‌ ಆಸ್ಪತ್ರೆಯಲ್ಲಿ ನಡೆಸಲಾಗಿದೆ ಎಂದರು.

ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ಮಗುವಿನ ಪೋಷಕರು, ಸಿಐಎಂಎಸ್‌ ಹಾಸ್ಪಿಟಲ್‌ನ ಸಂಕಲ್ಪ್‌ ಸಿಐಎಂಎಸ್‌ ಬಿಎಂಟಿ ಘಟಕದ ಕಾರ್ಯಕ್ರಮ ನಿರ್ದೇಶಕಿ ಡಾ.ದೀಪಾ ತ್ರಿವೇದಿ ಇನ್ನಿತರರು ಇದ್ದರು.

ಏನಿದು ಸಾಹಸ?

ಥಲಸ್ಸೀಮಿಯಾ ರೋಗಿ ಮಗುವಿಗೆ ಕಸಿ ಮಾಡಲು ಅಸ್ಥಿಮಜ್ಜೆ ಬೇಕಾಗಿತ್ತು. ಆದರೆ, ನಿರ್ದಿಷ್ಟವರ್ಗದ ಅಸ್ಥಿಮಜ್ಜೆ ಲಭ್ಯವಿರಲಿಲ್ಲ. ಹೀಗಾಗಿ ಮಗುವಿನ ರಕ್ತಕ್ಕೆ ಹೊಂದುವ ಅಸ್ಥಿಮಜ್ಜೆಯ ಇನ್ನೊಂದು ಶಿಶುವನ್ನು ಪ್ರನಾಳ ಶಿಶು ತಂತ್ರಜ್ಞಾನದ ಮೂಲಕ ದಂಪತಿ ಪಡೆದರು. ಎರಡನೇ ಮಗುವಿಗೆ ಒಂದು ವರ್ಷವಾದ ನಂತರ ವೈದ್ಯರು ಅದರ ಅಸ್ಥಿಮಜ್ಜೆಯನ್ನು ಮೊದಲ ಮಗುವಿಗೆ ಕಸಿ ಮಾಡಿ ಥಲಸ್ಸೀಮಿಯಾ ರೋಗ ಗುಣಪಡಿಸಿದರು. ಐವಿಎಫ್‌ ಮೂಲಕ ಮಗು ಹುಟ್ಟಿಸಿ ಅದರ ಅಸ್ಥಿಮಜ್ಜೆ ಬಳಸಿ ಮೊದಲ ಮಗುವನ್ನು ಉಳಿಸಿದ ದೇಶದ ಮೊದಲ ಪ್ರಕರಣ ಇದು ಎನ್ನಲಾಗಿದೆ.