*  ಬೆಂಗಳೂರು, ದೆಹಲಿ ಸೇರಿ ವಿವಿಧೆಡೆ ಏಕಕಾಲಕ್ಕೆ ಶೋಧ ಕಾರ್ಯ*  ತೆರಿಗೆ ವಂಚನೆ, ಹಣಕಾಸು ಅವ್ಯವಹಾರದ ಬಗ್ಗೆ ಶಂಕೆ*  ಕಾನೂನಿಗೆ ಬದ್ಧವಾಗಿ ಕೆಲಸ: ಎಂಬೆಸ್ಸಿ ಸ್ಪಷ್ಟನೆ 

ಬೆಂಗಳೂರು(ಜೂ.02): ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಹೆಸರು ಮಾಡಿರುವ ಎಂಬೆಸ್ಸಿ ಗ್ರೂಪ್‌ನ ಮುಖ್ಯಸ್ಥರ ಕಚೇರಿ, ನಿವಾಸ ಸೇರಿದಂತೆ 30ಕ್ಕೂ ಹೆಚ್ಚಿನ ಕಡೆ ತೆರಿಗೆ ವಂಚನೆ ಆರೋಪ ಆಧರಿಸಿ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ಕರ್ನಾಟಕ-ಗೋವಾ ಐಟಿ ಅಧಿಕಾರಿಗಳ ತಂಡ ಬುಧವಾರ ಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿದ್ದು, ಕೋಟ್ಯಂತರ ರು. ವ್ಯವಹಾರಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆದಾಯ ತೆರಿಗೆ ಬಾಕಿ ಪಾವತಿಸದಿರುವುದು ಮತ್ತು ಆದಾಯ ಮರೆಮಾಚಿರುವ ಕುರಿತು ಬಂದ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆದಾಯ ತೆರಿಗೆ ಸಮರ್ಪಕವಾಗಿ ಪಾವತಿಸದಿರುವ ಬಗ್ಗೆ ದಾಖಲೆಗಳು ಸಿಕ್ಕಿದ್ದು, ಪರಿಶೀಲನೆ ನಡೆಸಿದ ಬಳಿಕ ವಿಚಾರಣೆಗೆ ಕರೆಯಲಾಗುತ್ತದೆ ಎಂದು ಐಟಿ ಮೂಲಗಳು ಹೇಳಿವೆ.

ಶ್ರೀಮಂತ ರಾಜಕಾರಣಿ ಕೆಜಿಎಫ್‌ ಬಾಬುಗೆ ಇ.ಡಿ. ಶಾಕ್‌: 1743 ಕೋಟಿ ಒಡೆಯನ ಮೇಲೆ ಬೆಳ್ಳಂಬೆಳಗ್ಗೆ ದಾಳಿ

ಎಂಬೆಸ್ಸಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಜಿತು ವಿರ್ವಾನಿ, ನಿರ್ದೇಶಕ ನರಪತ್‌ ಸಿಂಗ್‌ ಚರೋರಿಯಾ ಸೇರಿದಂತೆ ಇತರೆ ಮುಖ್ಯಸ್ಥರ ನಿವಾಸ, ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಬೆಂಗಳೂರು, ದೆಹಲಿಗೆ ಸೇರಿದಂತೆ ಸಂಸ್ಥೆ ಇರುವ ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಪತ್ತೆಯಾದ ಸಂಸ್ಥೆಯ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್‌ ಖಾತೆ ವಿವರಗಳು, ಹಣಕಾಸಿನ ವ್ಯವಹಾರದ ಆನ್‌ಲೈನ್‌ ಸಾಕ್ಷ್ಯಗಳನ್ನು ಐಟಿ ವಶಕ್ಕೆ ಪಡೆದುಕೊಂಡಿದೆ. ನರಪತ್‌ ಸಿಂಗ್‌ ಒಡೆತನ ಸದಾಶಿವನಗರದಲ್ಲಿನ ಎಂಬೆಸ್ಸಿ ಆರ್ಕೇಡ್‌ ಅಪಾರ್ಚ್‌ಮೆಂಟ್‌ನ ಫ್ಲಾಟ್‌ನಲ್ಲಿ ಪರಿಶೀಲನೆ ನಡೆಸಲಾಗಿದ್ದು, ಆಸ್ತಿ ಪತ್ರಗಳು ಸಿಕ್ಕಿವೆ. ಅವುಗಳನ್ನು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮೂಲ ಆದಾಯ ತೋರಿಸದೆ ತೆರಿಗೆ ವಂಚಿಸಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ.

ಕಾನೂನಿಗೆ ಬದ್ಧವಾಗಿ ಕೆಲಸ: ಎಂಬೆಸ್ಸಿ ಸ್ಪಷ್ಟನೆ

ಐಟಿ ದಾಳಿ ಬಗ್ಗೆ ಎಂಬೆಸ್ಸಿ ಗ್ರೂಪ್‌ ಸ್ಪಷ್ಟನೆ ನೀಡಿದ್ದು, ಇದು ವಾಡಿಕೆಯ ವಿಚಾರಣೆಯಾಗಿದೆ. ಕಂಪನಿಯು ಕಾರ್ಯನಿರ್ವಹಿಸುವಾಗ ಎಲ್ಲಾ ಕಾನೂನು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ. ಕಾನೂನು ಉಲ್ಲಂಘನೆ ಮಾಡದೆ ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತೇವೆ. ಸಂಪೂರ್ಣವಾಗಿ ಪಾರದರ್ಶಕವಾಗಿ ಕೆಲಸ ಮಾಡಲಾಗುತ್ತಿದೆ. ವ್ಯವಹಾರವು ಎಂದಿನಂತೆ ಮುಂದುವರಿಯುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.