Asianet Suvarna News Asianet Suvarna News

ಪರಂ ಆಪ್ತನ ಮನೆ ಮೇಲೆ ದಾಳಿ, ವಿಚಾರಣೆ: ಉಲ್ಟಾ ಹೊಡೆದ ಐಟಿ ಇಲಾಖೆ!

ಪರಂ ಆಪ್ತನ ವಿಚಾರಣೆ: ಐಟಿ ಇಲಾಖೆ ಉಲ್ಟಾ| ವಿಚಾರಣೆ ನಡೆಸಿದ್ದೆವು, ಹೆಚ್ಚಿನ ವಿಚಾರಣೆಗೆ ಕಚೇರಿಗೆ ಬರಲು ಸೂಚಿಸಿದ್ದೆವು| ಯಾವುದೇ ರೀತಿಯ ಒತ್ತಡ ಹೇರಿಲ್ಲ: ತೆರಿಗೆ ಇಲಾಖೆ| ರಮೇಶ್‌ ಮನೆ ಮೇಲೆ ದಾಳಿ ನಡೆಸಿಲ್ಲ ಎಂದಿದ್ದ ಐಟಿ| ಆತ್ಮಹತ್ಯೆಗೂ ಮುನ್ನ ದಾಳಿ ನಡೆಸಿದ್ದೆವು ಎಂದು ಈಗ ಪೊಲೀಸರಿಗೆ ಹೇಳಿಕೆ

IT Officers Admits They Conducted Raid On Dr G Parameshwar PA Ramesh Before Commiting Suicide
Author
Bangalore, First Published Dec 29, 2019, 8:14 AM IST

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು[ಡಿ.29]: ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಆಪ್ತ ಸಹಾಯಕ ರಮೇಶ್‌ ಆತ್ಮಹತ್ಯೆ ನಡೆದು ಎರಡೂವರೆ ತಿಂಗಳ ಬಳಿಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮ್ಮ ಹೇಳಿಕೆಯಿಂದ ಹಿಂದೆ ಸರಿದು ಉಲ್ಟಾಹೊಡೆದಿದ್ದಾರೆ.

‘ಆತ್ಮಹತ್ಯೆಗೂ ಮುನ್ನ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಆಪ್ತ ಸಹಾಯಕ ರಮೇಶ್‌ ಅವರನ್ನು ವೈದ್ಯಕೀಯ ಸೀಟು ಬ್ಲಾಕ್‌ ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ್ದೆವು. ಕಾನೂನು ಪ್ರಕಾರ ಅನುಮತಿ ಪಡೆದು ಅವರ ಮನೆಯಲ್ಲೂ ಸಹ ತಪಾಸಣೆ ನಡೆಸಲಾಗಿತ್ತು’ ಎಂದು ಪೊಲೀಸರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ರಮೇಶ್‌ ಆತ್ಮಹತ್ಯೆ ನಡೆದ ದಿನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಐಟಿ ಇಲಾಖೆ, ನಾವು ರಮೇಶ್‌ನನ್ನು ವಿಚಾರಣೆ ನಡೆಸಿಲ್ಲ. ಆತನ ಮನೆಯಲ್ಲೂ ಕೂಡಾ ತಪಾಸಣೆ ನಡೆಸಿಲ್ಲವೆಂದು ಹೇಳಿತ್ತು. ಈ ಮಾತಿಗೆ ಮೃತರ ಕುಟುಂಬದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಅಂತಿಮವಾಗಿ ಐಟಿ ಇಲಾಖೆಯು ರಮೇಶ್‌ನ ವಿಚಾರಣೆ ನಡೆಸಿರುವುದನ್ನು ಒಪ್ಪಿಕೊಂಡಿದೆ.

ರಮೇಶ್‌ ಆತ್ಮಹತ್ಯೆ ಘಟನೆ ನಡೆದು ಎರಡೂವರೆ ತಿಂಗಳ ಬಳಿಕ ಐಟಿ ಅಧಿಕಾರಿಗಳು ಪ್ರಕರಣದ ಕುರಿತು ತನಿಖಾಧಿಕಾರಿಗಳಿಗೆ ಲಿಖಿತ ಹೇಳಿಕೆ ನೀಡಿದ್ದಾರೆ. ಅಲ್ಲದೆ, ತಮ್ಮ ವಾದಕ್ಕೆ ಪೂರಕವಾಗಿ ಕೆಲವು ದಾಖಲೆಗಳನ್ನು ಸಹ ಐಟಿ ಸಲ್ಲಿಸಿದೆ ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ತಮ್ಮ ಸೋದರನ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಕಿರುಕುಳ ಕಾರಣ ಎಂದು ಆರೋಪಿಸಿ ಜ್ಞಾನಭಾರತಿ ಠಾಣೆ ಪೊಲೀಸರಿಗೆ ಮೃತ ರಮೇಶ್‌ ಸೋದರ ದೂರು ದಾಖಲಿಸಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಐಟಿ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಎರಡು ಬಾರಿ ನೋಟಿಸ್‌ ಜಾರಿಗೊಳಿಸಿದ್ದರು. ಆದರೆ ಆರಂಭದಲ್ಲಿ ಐಟಿ ಅಧಿಕಾರಿಗಳು ಸೂಕ್ತವಾಗಿ ಪ್ರತಿಕ್ರಿಯಿಸಲಿಲ್ಲ. ಇದಕ್ಕೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತು ಐಟಿ ಇಲಾಖೆಯು ಪ್ರಕರಣದ ಕುರಿತು ಹೇಳಿಕೆ ನೀಡಿದೆ ಎಂದು ತಿಳಿದು ಬಂದಿದೆ.

ರಮೇಶ್‌ ಕುರಿತು ಐಟಿ ಹೇಳಿದ್ದೇನು:

ಹಲವು ವರ್ಷಗಳಿಂದ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಬಳಿ ರಮೇಶ್‌ ಆಪ್ತ ಸಹಾಯಕರಾಗಿದ್ದರು. ಹಾಗಾಗಿ ಪರಮೇಶ್ವರ್‌ ಅವರಿಗೆ ಸಂಬಂಧಿಸಿದ ಆರ್ಥಿಕ ವ್ಯವಹಾರಗಳು ರಮೇಶ್‌ಗೆ ಗೊತ್ತಿತ್ತು. ಈ ಕಾರಣಕ್ಕೆ ಪರಮೇಶ್ವರ್‌ ವಿರುದ್ಧ ಕೇಳಿಬಂದಿದ್ದ ವೈದ್ಯಕೀಯ ಸೀಟು ಬ್ಲಾಕ್‌ ಪ್ರಕರಣದಲ್ಲಿ ಅವರ ಆಪ್ತ ಸಹಾಯಕನನ್ನು ಪ್ರಶ್ನಿಸಲಾಗಿತ್ತು. ಅಲ್ಲದೆ ಪರಮೇಶ್ವರ್‌ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲೇ ರಮೇಶ್‌ ನಿವಾಸದಲ್ಲೂ ತಪಾಸಣೆ ನಡೆಸಲಾಗಿತ್ತು ಎಂದು ಪೊಲೀಸರಿಗೆ ಆದಾಯ ತೆರಿಗೆ ಇಲಾಖೆ ಡಿಜಿ ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಕಾನೂನು ಪ್ರಕಾರ ಒಪ್ಪಿಗೆ ಪಡೆದು ಅ.10ರಂದು ಪರಮೇಶ್ವರ್‌ ಹಾಗೂ ಅವರ ಆಪ್ತರ ಮನೆಗಳ ಮೇಲೆ ದಾಳಿ ನಡೆಸಲಾಯಿತು. ಅಂದು ದಾಳಿ ವೇಳೆ ಪರಮೇಶ್ವರ್‌ ಜೊತೆಯಲ್ಲೇ ರಮೇಶ್‌ ಸಹ ಇದ್ದರು. ಆನಂತರ ಅವರನ್ನು ವಶಕ್ಕೆ ಪಡೆದು ಪ್ರಾಥಮಿಕ ಹಂತದ ವಿಚಾರಣೆ ನಡೆಸಲಾಯಿತು. ಹೆಚ್ಚಿನ ವಿಚಾರಣೆಗೆ ಕಚೇರಿಗೆ ಬರುವಂತೆ ಸೂಚಿಸಲಾಯಿತು. ಆದರೆ ನಾವು ಯಾವುದೇ ರೀತಿಯ ಒತ್ತಡ ಹೇರಿಲ್ಲ ಎಂದು ಐಟಿ ಅಧಿಕಾರಿಗಳು ಸ್ಪಷ್ಟಪಡಿಸಿರುವುದಾಗಿ ತಿಳಿದು ಬಂದಿದೆ.

Follow Us:
Download App:
  • android
  • ios