ಪಿಸ್ತೂಲ್ ಇಲ್ಲದೆ ಬರೀ ಗುಂಡು ಇಟ್ಟುಕೊಳ್ಳುವುದು ತಪ್ಪಲ್ಲ: ಹೈಕೋರ್ಟ್
ಜಾನ್ ಜೋಸೆಫ್ ಫರ್ನಾಂಡೀಜ್ ಎಂಬುವರು ಮಂಗಳೂರು ವಿಮಾನ ನಿಲ್ದಾಣದಿಂದ ಮುಂಬೈಗೆ ಹೋಗುವ ಮುನ್ನ ಅವರ ಬ್ಯಾಗ್ ಪರಿಶೀಲಿಸಿದಾಗ ಎರಡು ಜೀವಂತ ಗುಂಡು ಪತ್ತೆ ಪ್ರಕರಣ
ವೆಂಕಟೇಶ್ ಕಲಿಪಿ
ಬೆಂಗಳೂರು(ಆ.17): ಪಿಸ್ತೂಲ್ ಅಥವಾ ರಿವಾಲ್ವಾರ್‌ನಂತಹ ಪೂರಕ ವಸ್ತುಗಳು ಇಲ್ಲದೇ, ಜೀವಂತ ಗುಂಡುಗಳನ್ನು ಹೊಂದಿರುವ ಅಥವಾ ಒಯ್ಯುವುದು ಭಾರತೀಯ ಸಶಸ್ತ್ರ ಕಾಯ್ದೆಯಡಿ ಅಪರಾಧ ಕೃತ್ಯವಾಗುವುದಿಲ್ಲ ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ಈ ತೀರ್ಪು ನೀಡಿದೆ. ವಿಮಾನ ಪ್ರಯಾಣ ವೇಳೆ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ವೇಳೆ ಬ್ಯಾಗಿನಲ್ಲಿ ಎರಡು ಜೀವಂತ ಗುಂಡುಗಳು ಪತ್ತೆಯಾದ ಕಾರಣಕ್ಕೆ ಮಂಗಳೂರಿನ ಜೋಸೆಫ್ ಫರ್ನಾಂಡೀಸ್ ಅವರ ವಿರುದ್ಧ ಭಾರತೀಯ ಸಶಸ್ತ್ರ ಕಾಯ್ದೆ-1959ರ ಸೆಕ್ಷನ್ 39(1) ಮತ್ತು 25(1)(ಎ) ಅಡಿಯಲ್ಲಿ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ಮತ್ತು ಪೊಲೀಸರು ದಾಖಲಿಸಿದ್ದ ದೋಷಾರೋಪ ಪಟ್ಟಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಚಂದನಗೌಡ ರದ್ದುಪಡಿಸಿದ್ದಾರೆ.
ಬ್ಯಾಗಲ್ಲಿ ಗುಂಡು ಪತ್ತೆ:
ದಕ್ಷಿಣ ಕನ್ನಡ ಜಿಲ್ಲೆಯ ತಿರುವೈಲು ಗ್ರಾಮದ ನಿವಾಸಿ ಜಾನ್ ಜೋಸೆಫ್ ಫರ್ನಾಂಡೀಜ್ ಮಂಗಳೂರು ವಿಮಾನ ನಿಲ್ದಾಣದಿಂದ ಮುಂಬೈಗೆ ಹೋಗುವ ಮುನ್ನ ಅವರ ಬ್ಯಾಗ್ ಪರಿಶೀಲಿಸಿದಾಗ ಎರಡು ಜೀವಂತ ಗುಂಡು ಪತ್ತೆಯಾಗಿದ್ದವು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಬಜ್ಪೆ ಠಾಣಾ ಪೊಲೀಸರು, ಫರ್ನಾಂಡೀಸ್ ವಿರುದ್ಧ ಭಾರತೀಯ ಸಶಸ್ತ್ರ ಕಾಯ್ದೆ ಅಡಿ ದೋಷಾರೋಪಪಟ್ಟಿಸಲ್ಲಿಸಿದ್ದರು. ಪ್ರಕರಣ ಸಂಬಂಧ ಮಂಗಳೂರಿನ ಎರಡನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ನಡೆಸುತ್ತಿದ್ದ ವಿಚಾರಣೆ ರದ್ದುಪಡಿಸುವಂತೆ ಕೋರಿ ಫರ್ನಾಂಡೀಸ್ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
ACB ಎತ್ತಂಗಡಿಗೆ ಹೈಕೋರ್ಟ್‌ಗೆ ಇದ್ದ ಕಾರಣಗಳೇನು? ಎಸಿಬಿಯಲ್ಲಿ ಹೇಗಿರುತ್ತೆ ಬಿ ರಿಪೋರ್ಟ್ ಹಂಗಾಮ?
ಫರ್ನಾಂಡೀಸ್ ಪರ ವಕೀಲರು, ‘ಅರ್ಜಿದಾರರ ಬಳಿ ಎರಡು ಜೀವಂತ ಗುಂಡುಗಳು ಪತ್ತೆಯಾಗಿವೆ ಎಂಬ ಏಕೈಕ ಕಾರಣಕ್ಕೆ ಅವರ ವಿರುದ್ಧ ಭಾರತೀಯ ಸಶಸ್ತ್ರ ಕಾಯ್ದೆಯಡಿ ಆರೋಪ ಹೊರಿಸಲಾಗದು. ಬ್ಯಾಗಿನಲ್ಲಿ ಜೀವಂತ ಗುಂಡುಗಳು ಇರುವುದು ಅವರಿಗೆ ಅರಿವಿಗೆ ಇರಲಿಲ್ಲ. ಜೀವಂತ ಗುಂಡುಗಳು ಯಾವುದೇ ಶಸ್ತ್ರದ ಭಾಗವಾಗಿರಲಿಲ್ಲ. ಬ್ಯಾಗಿನಲ್ಲಿ ಯಾವುದೇ ಪಿಸ್ತೂಲ್ ಮತ್ತು ರಿವಾಲ್ವರ್ ತೆಗೆದುಕೊಂಡು ಹೋಗುತ್ತಿರಲಿಲ್ಲ’ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಸರ್ಕಾರದ ಪರ ವಕೀಲರು ವಾದ ಮಾಡಿ, ಸಶಸ್ತ್ರ ಕಾಯ್ದೆಯ ಸೆಕ್ಷನ್ 8ರ ಪ್ರಕಾರ ನಿಗದಿತ ಪರವಾನಗಿ ಇಲ್ಲದೆ ಜೀವಂತ ಗುಂಡುಗಳನ್ನು ತೆಗೆದುಕೊಂಡು ಹೋಗುವುದು ಅಪರಾಧ, ಆದ್ದರಿಂದ ಪೊಲೀಸರು ತನಿಖೆ ನಡೆಸಿ ದೋಷರೋಪ ಪಟ್ಟಿಸಲ್ಲಿಸಿರುವುದು ಸೂಕ್ತವಾಗಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು.
ವಾದ -ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಸಶಸ್ತ್ರ ಕಾಯ್ದೆಯ ಸೆಕ್ಷನ್ 45(ಡಿ) ಪ್ರಕಾರ ಪಿಸ್ತೂಲ್ ಅಥವಾ ರಿವಾಲ್ವಾರ್‌ನಂತಹ ಅಸ್ತ್ರಗಳಿಲ್ಲದೇ ಹಾಗೂ ಬಳಸುವ ಉದ್ದೇಶವಿಲ್ಲದೆ ಸಶಸ್ತ್ರಗಳ ಸಣ್ಣ ಭಾಗಗಳನ್ನು ಹೊಂದಿದ್ದರೆ ಅದು ಸಶಸ್ತ್ರ ಕಾಯ್ದೆಯಡಿ ಅಪರಾಧ ಕೃತ್ಯವಾಗುವುದಿಲ್ಲ. ಪತ್ತೆಯಾದ ಜೀವಂತ ಗುಂಡುಗಳಿಗೆ ಪೂರಕವಾಗಿ ಯಾವುದೇ ಪಿಸ್ತೂಲ್ ಅಥವಾ ರಿವಾಲ್ವರ್ ತೆಗೆದುಕೊಂಡು ಹೋಗುತ್ತಿರಲಿಲ್ಲ. ಆದ್ದರಿಂದ ಅರ್ಜಿದಾರರ ವಿರುದ್ಧ ಸಶಸ್ತ್ರ ಕಾಯ್ದೆ ಅಡಿಯಲ್ಲಿ ವಿಚಾರಣೆ ನಡೆಸುವುದು ನ್ಯಾಯಯುತವಲ್ಲ’ ಎಂದು ಅಭಿಪ್ರಾಯಪಟ್ಟು ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿತು.
ಹತ್ತು ವರ್ಷ ಶಿಕ್ಷೆಗೆ ಅವಕಾಶ
ಭಾರತೀಯ ಸಶಸ್ತ್ರ ಕಾಯ್ದೆ-1959ರ ಸೆಕ್ಷನ್ 3 (1) ಪ್ರಕಾರ ನಿಗದಿತ ಪರವಾನಗಿ ಇಲ್ಲದೆ ಯಾವುದೇ ವ್ಯಕ್ತಿ ಬಂದೂಕು ಅಥವಾ ಮದ್ದುಗುಂಡುಗಳನ್ನು ಹೊಂದಿರುವುದು ಅಥವಾ ಸಾಗಿಸುವುದು ಅಪರಾಧ ಕೃತ್ಯವಾಗುತ್ತದೆ. ಈ ಅಪರಾಧ ಕೃತ್ಯಕ್ಕೆ ಸೆಕ್ಷನ್ 25(1) (ಎ) ಅಡಿಯಲ್ಲಿ ದಂಡ ಸಹಿತ ಐದು ವರ್ಷಗಳಿಂದ ಹತ್ತು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ನ್ಯಾಯಾಲಯಕ್ಕೆ ಅವಕಾಶವಿದೆ.