Asianet Suvarna News Asianet Suvarna News

ಲಂಚ ಕೇಳಿದ್ರೆ ತಪ್ಪಲ್ಲ, ಅದನ್ನು ಸ್ವೀಕರಿಸಿದರೆ ತಪ್ಪು: ಹೈಕೋರ್ಟ್‌

ಸರ್ಕಾರಿ ನೌಕರರು ತಮ್ಮ ಕರ್ತವ್ಯ ನಿರ್ವಹಿಸಲು ಸಾರ್ವಜನಿಕರಿಂದ ಹಣಕ್ಕೆ ಬೇಡಿಕೆಯಿಟ್ಟು, ಅದನ್ನು ಸ್ವೀಕರಿಸದೇ ಇದ್ದ ಸಂದರ್ಭದಲ್ಲಿ ಅದನ್ನು ಲಂಚದ ಪ್ರಕರಣವೆಂದು ಪರಿಗಣಿಸಲಾಗದು ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. 

It is not wrong to ask for a bribe but it is wrong to accept it says karnataka high court gvd
Author
First Published Dec 5, 2022, 3:00 AM IST

ವೆಂಕಟೇಶ್‌ ಕಲಿಪಿ

ಬೆಂಗಳೂರು (ಡಿ.05): ಸರ್ಕಾರಿ ನೌಕರರು ತಮ್ಮ ಕರ್ತವ್ಯ ನಿರ್ವಹಿಸಲು ಸಾರ್ವಜನಿಕರಿಂದ ಹಣಕ್ಕೆ ಬೇಡಿಕೆಯಿಟ್ಟು, ಅದನ್ನು ಸ್ವೀಕರಿಸದೇ ಇದ್ದ ಸಂದರ್ಭದಲ್ಲಿ ಅದನ್ನು ಲಂಚದ ಪ್ರಕರಣವೆಂದು ಪರಿಗಣಿಸಲಾಗದು ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಸ್ಥಿರಾಸ್ತಿಯೊಂದರ ಅಡಮಾನ ಕ್ರಯ ನೋಂದಣಿಗೆ ಹಣಕ್ಕೆ ಬೇಡಿಕೆ ಇಟ್ಟ ಸರ್ಕಾರಿ ನೌಕರನೊಬ್ಬ ಹಣ ಸ್ವೀಕರಿಸದೇ ಇದ್ದರೂ ಆತನ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟಹಾಗೂ ಲಂಚ ಸ್ವೀಕಾರ ಆರೋಪದಡಿ ದಾಖಲಾಗಿದ್ದ ದೂರು ರದ್ದುಪಡಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಪ್ರಕರಣದ ವಿವರ: ಪಿ.ಮಂಜುನಾಥ್‌ ಎಂಬುವರು ಚಿತ್ರದುರ್ಗದ ಮುದ್ರಾಂಕ ಶುಲ್ಕ ಮತ್ತು ನೋಂದಣಿ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಹೊಸದುರ್ಗದ ಡಿ.ಎಚ್‌.ಗುರುಪ್ರಸಾದ್‌ ಅವರು ಸಹಕಾರ ಸಂಘದಿಂದ 18 ಲಕ್ಷ ರು. ಸಾಲ ಪಡೆದಿದ್ದರು. ಭದ್ರತೆಗಾಗಿ ತಮಗೆ ಸೇರಿದ ಸ್ಥಿರಾಸ್ತಿಯನ್ನು ಅಡಮಾನ ಕ್ರಯವಾಗಿ ನೋಂದಣಿ ಮಾಡಿಕೊಡಲು ಕೋರಿದ್ದರು. ಅದರಂತೆ 2022ರ ಫೆ.24ರಂದು ಸ್ವತ್ತನ್ನು ಅಡಮಾನ ಕ್ರಯವಾಗಿ ನೋಂದಣಿ ಮಾಡಲಾಗಿತ್ತು. ಇದಾದ 7 ದಿನಗಳ ನಂತರ ಗುರುಪ್ರಸಾದ್‌ ಎಸಿಬಿಗೆ ದೂರು ನೀಡಿ, ಅಡಮಾನ ಕ್ರಯ ನೋಂದಣಿ ಮಾಡಿಕೊಡಲು ಮಂಜುನಾಥ್‌ ಐದು ಸಾವಿರ ರು. ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಿದ್ದರು.

3368 ಆ್ಯಂಬುಲೆನ್ಸ್‌ಗೆ ಜಿಪಿಎಸ್‌: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಅದನ್ನು ಆಧರಿಸಿ ಚಿತ್ರದುರ್ಗದ ಎಸಿಬಿ ಪೊಲೀಸರು (ಲೋಕಾಯುಕ್ತ ಪೊಲೀಸರು) ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರ ಸೆಕ್ಷನ್‌ 7(ಎ) ಅಡಿ ಮಂಜುನಾಥ್‌ ವಿರುದ್ಧ 2022ರ ಮಾ.2ರಂದು ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಎಸಿಬಿ ನಾಲ್ಕು ಸಾವಿರ ರು. ಮೊತ್ತದ ನೋಟುಗಳನ್ನು ಗುರುಪ್ರಸಾದ್‌ಗೆ ನೀಡಿ, ಅವುಗಳನ್ನು ಮಂಜುನಾಥ್‌ಗೆ ನೀಡಲು ಸೂಚಿಸಿತ್ತು. 2022ರ ಮಾ.2ರಂದು ಮಂಜುನಾಥ್‌ ಕಚೇರಿಯಲ್ಲಿ ಇರದ ಕಾರಣ ದಾಳಿ ನಡೆಸುವ ಪ್ರಯತ್ನ ವಿಫಲವಾಗಿತ್ತು.

ಅದಾದ ಎರಡು ತಿಂಗಳ ಬಳಿಕ ಮತ್ತೆ ದಾಳಿಗೆ ಯೋಜಿಸಲಾಗಿತ್ತು. 2022ರ ಏ.4ರಂದು ಮಂಜುನಾಥ್‌ ಅವರ ಟೇಬಲ್‌ ಮೇಲೆ ಗುರುಪ್ರಸಾದ್‌ ನಾಲ್ಕು ಸಾವಿರು ರು. ಇಟ್ಟಿದ್ದರು. ಆಗ ಎಸಿಬಿ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿತ್ತು. ಈ ಪ್ರಕರಣ ರದ್ದು ಕೋರಿ ಮಂಜುನಾಥ್‌ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌, ಲಂಚ ಸ್ವೀಕಾರ ಅಥವಾ ಲಂಚಕ್ಕೆ ಬೇಡಿಕೆಯಿಟ್ಟಪ್ರಕರಣದಲ್ಲಿ ಸರ್ಕಾರಿ ನೌಕರ ಕಾರ್ಯನಿರ್ವಹಿಸಲು ಲಂಚ ಸ್ವೀಕರಿಸಿರಬೇಕು. ಪ್ರಕರಣದಲ್ಲಿ ಹಣವನ್ನು ದೂರುದಾರರು ಮಂಜುನಾಥ್‌ರ ಟೇಬಲ್‌ ಮೇಲಿಟ್ಟಿದ್ದಾರೆ. ಹಣ ಸ್ವೀಕರಿಸುವಾಗ ಮಂಜುನಾಥ್‌ ಎಸಿಬಿಗೆ ಪ್ರತ್ಯಕ್ಷವಾಗಿ ಸಿಕ್ಕಿಬಿದ್ದಿಲ್ಲ. ಹಾಗಾಗಿ, ದಾಳಿ ವಿಫಲವಾಗಿದೆ ಎಂದರ್ಥ ಎಂದು ಅಭಿಪ್ರಾಯಪಟ್ಟಿತು.

ಇನ್ನು ಟೇಬಲ್‌ ಮೇಲೆ ಹಣ ಪತ್ತೆಯಾಗಿದೆ ಎಂಬ ಆಧಾರದ ಮೇಲೆ ತನಿಖಾಧಿಕಾರಿಗಳು, ಹಣ ಸ್ವೀಕರಿಸಿದ ಆರೋಪದಲ್ಲಿ ಮಂಜುನಾಥ್‌ ಅವರನ್ನು ದೋಷಿಯನ್ನಾಗಿಸಿದ್ದಾರೆ. ಆದರೆ 2022ರ ಫೆ.24ರಂದು ಅಡಮಾನ ಕ್ರಯ ನೋಂದಣಿ ಮಾಡಿದ್ದು, ಅಂದೇ ದಾಖಲೆ ಕಳುಹಿಸಿಕೊಡಲಾಗಿದೆ. ನಂತರ ಮಂಜುನಾಥ್‌ ಮುಂದೆ ಯಾವುದೇ ಕೆಲಸ ಬಾಕಿಯಿರಲಿಲ್ಲ. ಇದಾದ 15 ದಿನಗಳ ನಂತರ ದೂರು ದಾಖಲಿಸಲಾಗಿದೆ ಎಂದು ತಿಳಿಸಿದೆ.

ರೀ, ನಿಮ್ಮ ಕಥೆ, ಚಿತ್ರಕಥೆ, ಸಂಭಾಷಣೆ ಬೇಡ: ಸಂಸದ ಪ್ರಜ್ವಲ್‌ಗೆ ಹೈಕೋರ್ಟ್‌ ಚಾಟಿ

ಅಲ್ಲದೆ, ಆರೋಪ ಮಾಡಿದ ದಿನಾಂಕಗಳನ್ನು ಪರಿಶೀಲಿಸಿಕೊಳ್ಳದೆ ಎಸಿಬಿ ಕೂಡಲೇ ಸಾರ್ವಜನಿಕ ಕರ್ತವ್ಯ ನಿರ್ವಹಣೆಗೆ ಲಂಚ ಸ್ವೀಕರಿಸಿದ ಆರೋಪದಡಿ ಪ್ರಕರಣ ದಾಖಲಿಸಿದೆ. ಬೇಡಿಕೆಯಿಲ್ಲದ ಹಣ ಸ್ವೀಕರಿಸಿದಾಗ ಅಥವಾ ಬೇಡಿಕೆಯಿಟ್ಟಮೇಲೂ ಹಣ ಸ್ವೀಕರಿಸದೇ ಇದ್ದಾಗ ಲಂಚ ಸ್ವೀಕಾರ ಅಥವಾ ಲಂಚಕ್ಕೆ ಬೇಡಿಕೆಯಿಟ್ಟಪ್ರಕರಣವನ್ನು ಸಾಬೀತುಪಡಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಅರ್ಜಿದಾರರ ವಿರುದ್ಧದ ಪ್ರಕರಣ ಮುಂದುವರಿಸಿದರೆ ಕಾನೂನು ಪ್ರಕ್ರಿಯೆ ದುರ್ಬಳಕೆ ಮತ್ತು ನ್ಯಾಯದಾನ ವೈಫಲ್ಯ ಕಾಣುತ್ತದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌, ಮಂಜುನಾಥ್‌ ವಿರುದ್ಧದ ದೂರು ರದ್ದುಪಡಿಸಿದೆ.

Follow Us:
Download App:
  • android
  • ios