ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ವಿಮಾನ ಹಾರಾಟಗಳು ಸ್ಥಗಿತಗೊಂಡ ಪರಿಣಾಮ, ಅಧ್ಯಯನ ಪ್ರವಾಸಕ್ಕೆ ತೆರಳಿದ್ದ 19 ಮಂದಿ ಕನ್ನಡಿಗರು ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಭಾರತೀಯ ವಿದೇಶಾಂಗ ಇಲಾಖೆ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸ್ಥಳೀಯ ಭಾರತೀಯರೊಂದಿಗೆ ನಿರಂತರ ಸಂಪರ್ಕದಲ್ಲಿದೆ.

ಇರಾನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡ ಪರಿಣಾಮ, ಅಂತರರಾಷ್ಟ್ರೀಯ ವಿಮಾನ ಹಾರಾಟಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಯನ ಪ್ರವಾಸಕ್ಕೆ ಇಸ್ರೇಲ್‌ಗೆ ತೆರಳಿದ್ದ 19 ಮಂದಿ ಕನ್ನಡಿಗರು ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಕಳೆದ ಒಂದು ವಾರದ ಹಿಂದೆ ಈ ಅಧ್ಯಯನ ತಂಡ ಇಸ್ರೇಲ್‌ಗೆ ಪ್ರಯಾಣ ಬೆಳೆಸಿತ್ತು. ಅವರು ಟೆಕ್ನಿಕಲ್ ಸೆಂಟರ್‌ಗಳ ಅಧ್ಯಯನಕ್ಕಾಗಿ ತೆರಳಿದ್ದಾಗ, ವಿಮಾನ ಸೇವೆಗಳು ಸ್ಥಗಿತಗೊಳ್ಳುತ್ತಿದ್ದಂತೆ ತಾತ್ಕಾಲಿಕವಾಗಿ ಅಲ್ಲಿಯೇ ಉಳಿದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ.

ನಿನ್ನೆ ಮಧ್ಯಾಹ್ನ ಬೆಂಗಳೂರಿಗೆ ವಾಪಸ್ ಆಗಬೇಕಾಗಿದ್ದ ತಂಡ, ಆದರೆ ವಿಮಾನ ಸ್ಥಗಿತಗೊಳಿಸಲಾಗಿದೆ. ಆದರೆ ಹಾರಾಟ ಮುಂದೂಡುವ ಸಾಧ್ಯತೆ ಇಲ್ಲದ ಕಾರಣ ದಿಕ್ಕುತೋಚದ ಸ್ಥಿತಿಗೆ ಒಳಗಾಗಿದೆ. ಈ ತಂಡದಲ್ಲಿ ಕಾಂಗ್ರೆಸ್ ವಕ್ತಾರ ನಟರಾಜ್ ಗೌಡ ಸೇರಿದಂತೆ 19 ಮಂದಿ ಕನ್ನಡಿಗರು ಸೇರಿದ್ದಾರೆ. ನಿರೀಕ್ಷೆಯಂತೆ ವಿಮಾನ ಸೇವೆಗಳು ಪುನರಾರಂಭವಾಗುವವರೆಗೆ ಅವರು ಇಸ್ರೇಲ್‌ನಲ್ಲಿ ಉಳಿಯಬೇಕಾಗುತ್ತದೆ.

ಭಾರತೀಯ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ:

ಇರಾನ್ ಮತ್ತು ಇಸ್ರೇಲ್ ನಡುವಿನ ಇತ್ತೀಚಿನ ಸಂಘರ್ಷಾತ್ಮಕ ಬೆಳವಣಿಗೆಗಳ ಕುರಿತು ಭಾರತೀಯ ವಿದೇಶಾಂಗ ಇಲಾಖೆಯು ತೀವ್ರ ಕಳವಳ ವ್ಯಕ್ತಪಡಿಸಿದೆ. ವಿಶೇಷವಾಗಿ, ಪರಮಾಣು ತಾಣಗಳ ಮೇಲಿನ ದಾಳಿ ಕುರಿತು ಕಾಣಿಸಿಕೊಂಡಿರುವ ವರದಿಗಳನ್ನು ಗಂಭೀರವಾಗಿ ಗಮನಿಸಲಾಗುತ್ತಿದೆ.

ಭಾರತವು ಎರಡೂ ದೇಶಗಳನ್ನು ಉದ್ವಿಗ್ನ ಮತ್ತು ದ್ವೇಷಾತ್ಮಕ ಕ್ರಮಗಳಿಂದ ದೂರವಿರಲು ತೀವ್ರವಾಗಿ ಒತ್ತಾಯಿಸಿದೆ. ಸಮಸ್ಯೆಗಳ ಶಮನ ಮತ್ತು ಪರಿಸ್ಥಿತಿಯ ಉಲ್ಬಣವನ್ನು ತಡೆಯಲು, ಅಸ್ತಿತ್ವದಲ್ಲಿರುವ ರಾಜತಾಂತ್ರಿಕ ಚಾನಲ್‌ಗಳನ್ನು ಬಳಸಿಕೊಳ್ಳುವಂತೆ ಭಾರತ ಮನವಿ ಮಾಡಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಭಾರತವು ಇರಾನ್ ಹಾಗೂ ಇಸ್ರೇಲ್ ಎರಡೂ ದೇಶಗಳೊಂದಿಗೆ ಸ್ನೇಹಪರ ಸಂಬಂಧ ಹೊಂದಿದ್ದು, ಯಾವುದೇ ಶಾಂತಿಯುತ ಪರಿಹಾರ ಕಾರ್ಯಾಚರಣೆಗೆ ಬೇಕಾದ ಸಹಕಾರ ನೀಡಲು ಸದಾ ಸಿದ್ಧವಾಗಿದೆ.

ಇರಾನ್ ಮತ್ತು ಇಸ್ರೇಲ್ ದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳು ಸ್ಥಳೀಯ ಭಾರತೀಯ ಸಮುದಾಯದೊಂದಿಗೆ ನಿರಂತರ ಸಂಪರ್ಕದಲ್ಲಿವೆ. ಈ ನಡುವೆ, ಅಲ್ಲಿನ ಭಾರತೀಯರು ಎಚ್ಚರಿಕೆಯಿಂದ ವರ್ತಿಸಬೇಕು ಹಾಗೂ ಸ್ಥಳೀಯ ಭದ್ರತಾ ಸಂಸ್ಥೆಗಳ ಮಾರ್ಗದರ್ಶನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದೆ.

ಇರಾನ್-ಇಸ್ರೇಲ್ ಯುದ್ಧ: ಬೊಮ್ಮಾಯಿ ಪ್ರತಿಕ್ರಿಯೆ

ಇರಾನ್-ಇಸ್ರೇಲ್ ಯುದ್ಧದ ಬಗ್ಗೆ ರಾಜ್ಯದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಅತ್ಯಂತ ಆಘಾತಕಾರಿ ಘಟನೆ. ಇಡೀ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಈ ಉದ್ವಿಗ್ನತೆ ಜಗತ್ತಿನಾದ್ಯಂತ ಆತಂಕವನ್ನು ಉಂಟುಮಾಡಿದೆ. ಇಸ್ರೇಲ್ ಮತ್ತು ಇರಾನ್ ನಡುವೆ ಉಂಟಾಗಿರುವ ಯುದ್ಧ ಮುಂದಿನ ದಿನಗಳಲ್ಲಿ ಯಾವ ತೀವ್ರತೆಗೆ ತಲುಪುತ್ತದೆ ಎಂಬುದು ಈಗಲೂ ಅಸ್ಪಷ್ಟವಾಗಿದೆ.

ರಷ್ಯಾ-ಯುಕ್ರೇನ್ ಯುದ್ಧದಂತೆಯೇ, ಇರಾನ್ ಮತ್ತು ಇಸ್ರೇಲ್ ಕೂಡ ಜಗತ್ತಿಗೆ ಪ್ರಮುಖ ತೈಲ ಹಾಗೂ ಇಂಧನವನ್ನು ಪೂರೈಸುವ ರಾಷ್ಟ್ರಗಳಾಗಿವೆ. ಇಂತಹ ರಾಷ್ಟ್ರಗಳ ನಡುವೆ ನಡೆಯುವ ಯುದ್ಧದಿಂದ ವಿಶ್ವದ ಆರ್ಥಿಕತೆಯ ಮೇಲೆ ಭಾರೀ ಹೊಡೆತ ಬೀಳುವುದು ಅನಿವಾರ್ಯ. ಆದ್ದರಿಂದ, ಇಡೀ ವಿಶ್ವದ ನಾಯಕರೂ ಈ ಯುದ್ಧವನ್ನು ತಡೆಯುವ ಹಾಗೂ ಶಾಂತಿಯನ್ನು ಸ್ಥಾಪಿಸುವ ದಿಕ್ಕಿನಲ್ಲಿ ತಕ್ಷಣ ಕೈಜೋಡಿಸಬೇಕಾಗಿದೆ.