ನವದೆಹಲಿ [ಜ.12]:  ವಿಶ್ವದಾದ್ಯಂತ ವಿಧ್ವಂಸಕ ಕೃತ್ಯ ಎಸಗುತ್ತಿರುವ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರವಾದಿ ಸಂಘಟನೆ, ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳುತ್ತಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಇತ್ತೀಚೆಗೆ ರಾಷ್ಟ್ರ ರಾಜಧಾನಿಯಲ್ಲಿ ದಿಲ್ಲಿ ಪೊಲೀಸರಿಂದ ಬಂಧಿತರಾದ ಮೂವರು ಶಂಕಿತ ಐಸಿಸ್‌ ಉಗ್ರರ ವಿಚಾರಣೆ ವೇಳೆ ಈ ಮಾಹಿತಿ ಬಹಿರಂಗಗೊಂಡಿದೆ.

ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಕರ್ನಾಟಕ ಮತ್ತು ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಐಸಿಸ್‌ ಸೇರಿದಂತೆ ವಿವಿಧ ಉಗ್ರ ಸಂಘಟನೆಗಳ ಜಾಲದ ಬಗ್ಗೆ ಮಾಹಿತಿ ಹೊರಬೀಳುತ್ತಲೇ ಇದ್ದು, ಇದೀಗ ದೆಹಲಿಯಲ್ಲಿ ಸಿಕ್ಕಿ ಬಿದ್ದ ಶಂಕಿತ ಉಗ್ರರು ನೀಡಿರುವ ಮಾಹಿತಿ, ಉಗ್ರ ಜಾಲದ ವಿಸ್ತರಣೆಯನ್ನು ಮತ್ತಷ್ಟು ಖಚಿತಪಡಿಸಿದೆ.

ಈ ಹಿಂದೆ 2014ರಲ್ಲಿ ಐಸಿಸ್‌ ಪರವಾದ ಟ್ವೀಟರ್‌ ಖಾತೆ ನಡೆಸುತ್ತಿದ್ದ ಎನ್ನಲಾದ ಎಂಜಿನಿಯರ್‌ ಮೆಹ್ದಿ ಮಸ್ರೂರ್‌ ಬಿಸ್ವಾಸ್‌ ಎಂಬಾತನನ್ನು ಬೆಂಗಳೂರಿನ ಜಾಲಹಳ್ಳಿಯಲ್ಲಿ ಬಂಧಿಸಲಾಗಿತ್ತು. ಇನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಕರ್ನಾಟಕದ ಕರಾವಳಿಯಲ್ಲಿ ಐಸಿಸ್‌ ಉಗ್ರರು ದಾಳಿಗೆ ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಮಾಹಿತಿ ಲಭಿಸಿತ್ತು. ಜೊತೆಗೆ ಬೆಂಗಳೂರು ಹಾಗೂ ಮೈಸೂರಿನಲ್ಲಿ ಉಗ್ರರ ಸ್ಲೀಪರ್‌ ಸೆಲ್‌ಗಳಿವೆ ಎಂದು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕರ್ನಾಟಕದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದರು. ಅಲ್ಲದೆ 3 ದಿನಗಳ ಹಿಂದಷ್ಟೇ ತಮಿಳುನಾಡಿನ ಕ್ಯು ಬ್ರ್ಯಾಂಚ್‌ ಪೊಲೀಸರು, ಜಿಹಾದಿ ಗುಂಪೊಂದರ ಜೊತೆ ನಂಟು ಹೊಂದಿದ್ದ ಕರ್ನಾಟಕ ಮೂವರು ಸೇರಿದಂತೆ 8 ಶಂಕಿತ ಉಗ್ರರನ್ನು ಬಂಧಿಸಿದ್ದರು. ಇದೆಲ್ಲರದ ನಡುವೆಯೇ ಇದೀಗ ಕರ್ನಾಟಕದಲ್ಲಿ ತನ್ನ ಜಾಲ ವಿಸ್ತರಿಸಿಕೊಳ್ಳಲು ಐಸಿಸ್‌ ಯತ್ನಿಸುತ್ತಿರುವ ವಿಷಯವು ಬೆಳಕಿಗೆ ಬಂದಿದೆ.

ದಕ್ಷಿಣದಲ್ಲಿ ಜಾಲ:  ದೆಹಲಿಯಲ್ಲಿ ಬಂಧಿತ ಮೂವರು ಉಗ್ರರ ಕುರಿತು ದಿಲ್ಲಿ ಪೊಲೀಸ್‌ ಮೂಲಗಳು ಆಂಗ್ಲ ಟೀವಿ ಮಾಧ್ಯಮವೊಂದರ ಜತೆ ಮಾತನಾಡಿ, ‘ಬಂಧಿತ ಮೂವರು ಶಂಕಿತರ ವಿಚಾರಣೆ ವೇಳೆ ಭಾರತದ ಅನೇಕ ರಾಜ್ಯಗಳು, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಐಸಿಸ್‌ ತನ್ನ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ ಹಾಗೂ ತಮಿಳುನಾಡಿನಲ್ಲಿ ತಾವು ಸಭೆ ನಡೆಸಿದ್ದಾಗಿ ಈ ಮೂವರೂ ಒಪ್ಪಿಕೊಂಡಿದ್ದಾರೆ’ ಎಂದು ತಿಳಿಸಿವೆ. ಐಸಿಸ್‌ ಜತೆ ನಂಟು ಹೊಂದಿದ್ದಕ್ಕಾಗಿ 11 ಜನರನ್ನು ಈವರೆಗೆ ದಿಲ್ಲಿ ಪೊಲೀಸರು ಗುರುತಿಸಿದ್ದು, ಅವರನ್ನು ಶೀಘ್ರ ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದಲ್ಲಿದ್ದ ಜಿಹಾದಿಗಳ ಪತ್ತೆಗೆ ಸಿಸಿಬಿ ಬಲೆ...

ಐಸಿಸ್‌ನಿಂದ ಸ್ಫೂರ್ತಿ ಪಡೆದಿದ್ದ ನಾಲ್ವರು ಶಂಕಿತ ಭಯೋತ್ಪಾದಕರನ್ನು ದಿಲ್ಲಿ ಹಾಗೂ ಗುಜರಾತ್‌ನಲ್ಲಿ 3 ದಿನಗಳ ಹಿಂದೆ ಬಂಧಿಸಲಾಗಿತ್ತು. ದಿಲ್ಲಿಯಲ್ಲಿ ಖಾಜಾ ಮೊಯಿದೀನ್‌ (52), ಅಬ್ದುಲ್‌ ಸಮದ್‌ (28) ಹಾಗೂ ಸಯ್ಯದ್‌ ಅಲಿ ನವಾಜ್‌ (32) ಹಾಗೂ ಗುಜರಾತ್‌ನ ವಡೋದರಾದಲ್ಲಿ ಜಾಫರ್‌ ಅಲಿ ಎಂಬುವರು ಸೆರೆ ಸಿಕ್ಕಿದ್ದರು. ಬಂಧಿತರೆಲ್ಲರೂ ತಮಿಳುನಾಡಿನವರು. ಈ ಪೈಕಿ ಬೆಂಗಳೂರಿನ ವಿವೇಕನಗರದ ಪಿಜಿಯಲ್ಲಿದ್ದ ಖಾಜಾ ಮೊಯಿದೀನ್‌ ಹಾಗೂ ಆತನ ಸಹಚರರು ಕೆಲವು ದಿನಗಳ ಹಿಂದಷ್ಟೇ ಉತ್ತರ ಭಾರತಕ್ಕೆ ಪರಾರಿಯಾಗಿದ್ದರು.

ಈ ನಡುವೆ, ಶಮೀಂ ಮತ್ತು ತೌಫೀಕ್‌ ಎಂಬ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲು ಬಲೆ ಬೀಸಿದ್ದೇವೆ. ಇವರು ತಮಿಳುನಾಡಿನಲ್ಲಿ ಒಬ್ಬ ಪೊಲೀಸ್‌ ಇನ್ಸ್‌ಪೆಕ್ಟರ್‌ರನ್ನು ಹತ್ಯೆ ಮಾಡಿದ್ದರು ಎಂದು ಮೂಲಗಳು ಹೇಳಿವೆ. ಈ ನಡುವೆ ಬಂಧಿತರನ್ನು ವಿಚಾರಿಸಲು ಉತ್ತರಪ್ರದೇಶ, ಮಹಾರಾಷ್ಟ್ರ ಪೊಲೀಸರು ಕೂಡ ದಿಲ್ಲಿಗೆ ಆಗಮಿಸುವ ಸಾಧ್ಯತೆ ಇದೆ.