- ಬಿರುಬೇಸಿಗೆ ಇದೆ, ಜೂ.15ರವರೆಗೆ ರಜೆ ವಿಸ್ತರಿಸಿ: ಸಿಎಂಗೆ ಎಂಎಲ್ಸಿಗಳ ಪತ್ರ- ಪೋಷಕರು, ಶಿಕ್ಷಕರಿಂದ ವಿರೋಧ- ಇದು ಶಿಕ್ಷಕರ ಓಲೈಕೆ ಯತ್ನ: ತಜ್ಞರು 

ಬೆಂಗಳೂರು (ಮೇ. 5): ಕೋವಿಡ್‌ನಿಂದಾಗಿ (Covid-19) ಕಳೆದ ಎರಡು ವರ್ಷಗಳಲ್ಲಿ ಶಾಲಾ ವಿದ್ಯಾರ್ಥಿಗಳು (School Students) ಎದುರಿಸುತ್ತಿರುವ ಕಲಿಕಾ ಕೊರತೆ ಸರಿದೂಗಿಸಲು ಶಿಕ್ಷಣ ಇಲಾಖೆ (Education Department) ಈ ಬಾರಿ 15 ದಿನ ಮೊದಲೇ ಅಂದರೆ ಮೇ 16ರಿಂದಲೇ ಶಾಲೆ ಆರಂಭಿಸಿ ‘ಕಲಿಕಾ ಚೇತರಿಕೆ’ ಕಾರ್ಯಕ್ರಮ ನಡೆಸಲು ಸಜ್ಜಾಗಿದೆ. 

ಈ ನಡುವೆ ಕೆಲ ವಿಧಾನ ಪರಿಷತ್‌ ಸದಸ್ಯರು ಬೇಸಿಗೆ ತಾಪಮಾನದ ನೆಪದಲ್ಲಿ ಬೇಸಿಗೆ ರಜೆಯನ್ನು (Summer Vacation) ಒಂದು ತಿಂಗಳ ಕಾಲ ವಿಸ್ತರಿಸುವಂತೆ ಮುಖ್ಯಮಂತ್ರಿಯವರನ್ನು ಕೋರಿರುವುದು ವಿದ್ಯಾರ್ಥಿ ಹಾಗೂ ಪೋಷಕರ ವಲಯದಲ್ಲಿ ಗೊಂದಲ ಹುಟ್ಟುಹಾಕಿದೆ. ಜತೆಗೆ, ರಜೆ ವಿಸ್ತರಿಸಬೇಕು ಎಂಬ ಶಾಸಕರ ಕೋರಿಕೆಗೆ ಶಿಕ್ಷಣ ತಜ್ಞರು ಹಾಗೂ ಶಿಕ್ಷಕರ ವಲಯದಿಂದಲೂ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಜೂ.15ರವರೆಗೆ ರಜೆ ನೀಡಿ- ಆಗ್ರಹ: ವಿಧಾನ ಪರಿಷತ್‌ನ ಜೆಡಿಎಸ್‌ ಸದಸ್ಯ ಭೋಜೇಗೌಡ (Bhojegowda) ಸೇರಿದಂತೆ ಕೆಲ ಮೇಲ್ಮನೆ ಸದಸ್ಯರು ಈ ಬಾರಿ ಬಿಸಿಲ ಬೇಗೆಯ ತಾಪಮಾನ ತೀವ್ರವಾಗಿ ಹೆಚ್ಚಾಗಿರುವುದರಿಂದ ಮೇ 15ಕ್ಕೆ ಶಾಲೆ ಆರಂಭಿಸುವ ನಿರ್ಧಾರ ಕೈಬಿಟ್ಟು ಜೂನ್‌ 15ರ ವರೆಗೂ ಬೇಸಿಗೆ ರಜೆ ವಿಸ್ತರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಪೋಷಕ, ಶಿಕ್ಷಕರ ವಿರೋಧ: ಇದಕ್ಕೆ ಪೋಷಕರ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದರೆ, ಶಿಕ್ಷಣ ತಜ್ಞರು ಪರಿಷತ್‌ ಸದಸ್ಯರ ನಡೆ ಸರಿಯಲ್ಲ ಎಂದು ಖಂಡಿಸಿದ್ದಾರೆ. ಶಿಕ್ಷಕರು ಕೂಡ ‘ಕಲಿಕಾ ಕೊರತೆ ಎದುರಿಸುತ್ತಿರುವ ಮಕ್ಕಳ ಹಿತದೃಷ್ಟಿಯಿಂದ 15 ದಿನ ಮೊದಲೇ ಶಾಲೆ ಆರಂಭಿಸುವ ಸರ್ಕಾರದ ಕ್ರಮಕ್ಕೆ ನಾವು ಮೊದಲೇ ಒಪ್ಪಿಗೆ ನೀಡಿದ್ದೇವೆ. ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅದರಂತೆ ಸರ್ಕಾರ ಶಾಲೆ ಆರಂಭಿಸಿದ ದಿನದಿಂದಲೇ ಬಂದು ಬೋಧನಾ ಕಾರ್ಯದಲ್ಲಿ ತೊಡಗಲು ಸಿದ್ಧರಿದ್ದೇವೆ’ ಎಂದು ಹೇಳಿದ್ದಾರೆ.

ಈ ಸಂಬಂಧ ‘ಕನ್ನಡಪ್ರಭ’ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಅವರನ್ನು ಸಂಪರ್ಕಿಸಿದಾಗ, ರಜೆ ವಿಸ್ತರಿಸಿ ಎಂಬ ಬೇಡಿಕೆಯ ಹಿಂದೆ ಕೆಲ ವಿಧಾನ ಪರಿಷತ್‌ ಸದಸ್ಯರ ಪಟ್ಟಭದ್ರ ಹಿತಾಸಕ್ತಿ ಇದೆಯೇ ಹೊರತು ಇದರಲ್ಲಿ ಮಕ್ಕಳ ಹಿತಾಸಕ್ತಿ ಏನೂ ಇಲ್ಲ. ಜೂನ್‌ನಲ್ಲಿ ಕೆಲ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ ಸದಸ್ಯರ ಸ್ಥಾನಗಳು ಖಾಲಿಯಾಗಲಿದ್ದು ಚುನಾವಣೆ ನಡೆಯಲಿದೆ. ಶಿಕ್ಷಕರು ಅವರ ವೋಟ್‌ ಬ್ಯಾಂಕ್‌ ಆಗಿರುವುದರಿಂದ ಅವರನ್ನು ಓಲೈಸಲು ಇಂತಹ ಬೇಡಿಕೆ ಇಡುವುದು ಸರಿಯಲ್ಲ. ಶಿಕ್ಷಕರಿಗೆ ರಜೆ ಕೊಡಿಸುವುದು, ವೇತನ, ಇನ್ನಿತರೆ ಸೌಲಭ್ಯ ಹೆಚ್ಚಿಸುವುದು ಬಿಟ್ಟರೆ ಮಕ್ಕಳ ಶಿಕ್ಷಣದ ಅನುಕೂಲದ ವಿಚಾರವಾಗಿ ಅವರು ಎಂದೂ ಧ್ವನಿ ಎತ್ತಿದ್ದು ಕಾಣುವುದಿಲ್ಲ. ಸರ್ಕಾರ ಇದಕ್ಕೆಲ್ಲಾ ಮಣಿಯಬಾರದು ಎಂದು ಹೇಳುತ್ತಾರೆ.

ಕಳೆದ ಎರಡು ವರ್ಷ ಶಾಲೆಗಳು ಸರಿಯಾಗಿ ನಡೆಯದ ಕಾರಣ ಈ ಬಾರಿ ಮೇ ಆರಂಭದಿಂದಲೇ ಶಾಲೆಗಳನ್ನು ಆರಂಭಿಸಿದ್ದರೆ ಇನ್ನೂ ಒಳ್ಳೆಯದಿತ್ತು. ಏಕೆಂದರೆ ಕಲಿಕಾ ಚೇತರಿಕೆಯಂತಹ ಕಾರ್ಯಕ್ರಮ ಮೂಲಕ ಮಕ್ಕಳಿಗೆ ಹಿಂದಿನ ವರ್ಷಗಳ ಕಲಿಕೆಯನ್ನು ಬೋಧಿಸಲು ಕೇವಲ 15 ದಿನ ಸಾಲದು, ಕನಿಷ್ಠ 4 ತಿಂಗಳಾದರೂ ಬೇಕು ಎಂದು ವಿವರಿಸುತ್ತಾರೆ.

PSI Recruitment Scam: ಕಲಬುರಗಿ, ಬೆಂಗ್ಳೂರಿಂದ ಪಿಎಸ್‌ಐ ಪ್ರಶ್ನೆಪತ್ರಿಕೆ ಲೀಕ್‌

ಬೇಸಿಗೆ ಅಷ್ಟಿಲ್ಲ- ಪೋಷಕರು: ಪೋಷಕರ ವಲಯದಲ್ಲೂ, ‘ರಜೆ ವಿಸ್ತರಿಸುವ ಯಾವುದೇ ಅಗತ್ಯವಿಲ್ಲ. ಶಾಲೆ ಆರಂಭವಾಗಲು ಇನ್ನೂ 10 ದಿನ ಸಮಯವಿದೆ. ರಾಜ್ಯದಲ್ಲಿ ಆಗಲೇ ಮಳೆ ಆರಂಭವಾಗಿದೆ. ತಾಪಮಾನ ಕಡಿಮೆಯಾಗುತ್ತಿದೆ. ಅಲ್ಲದೆ, ಮಕ್ಕಳು ಬೆಳಗ್ಗೆ ತಾಪಮಾನ ಕಡಿಮೆ ಇದ್ದಾಗ ಶಾಲೆಗೆ ಬಂದು ಸಂಜೆ ವಾಪಸ್ಸಾಗುತ್ತಾರೆ. ಎರಡು ವರ್ಷದಿಂದ ಸರಿಯಾಗಿ ಶಿಕ್ಷಣ ದೊರೆಯದೆ ಮಕ್ಕಳು ಶೈಕ್ಷಣಿಕವಾಗಿ ಸಾಕಷ್ಟುಸಮಸ್ಯೆ ಅನುಭವಿಸುತ್ತಿದ್ದಾರೆ. ನಿಗದಿಗೂ 15 ದಿನ ಮೊದಲೇ ಶಾಲೆ ಆರಂಭಿಸುತ್ತಿರುವ ಇಲಾಖೆ ಕ್ರಮ ಸ್ವಾಗತಾರ್ಹ’ ಎಂಬುದು ಪೋಷಕರ ಅಭಿಪ್ರಾಯವಾಗಿದೆ.

PSI Recruitment Scam: ಬೆಂಗ್ಳೂರಿನ ಮಲ್ಲೇಶ್ವರದಲ್ಲೂ ಪಿಎಸ್‌ಐ ಪರೀಕ್ಷೆ ಗೋಲ್ಮಾಲ್‌?

ಇನ್ನು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಅಭಿಪ್ರಾಯ ಕೂಡ ಇದೇ ಆಗಿದೆ. ಆದರೆ, ವಿಧಾನ ಪರಿಷತ್‌ ಸದಸ್ಯರ ಪತ್ರಕ್ಕೆ ವಿರೋಧ ಅಥವಾ ಪರ ಯಾವುದೇ ಅಭಿಪ್ರಾಯಕ್ಕೆ ಅವರು ಸಿದ್ಧವಿಲ್ಲ. ಸರ್ಕಾರ 15 ದಿನ ಮೊದಲೇ ಶಾಲೆ ಆರಂಭಿಸಲು ನಮ್ಮ ಅಭಿಪ್ರಾಯ ಪಡೆದಿತ್ತು. ಅದಕ್ಕೆ ನಾವು ಒಪ್ಪಿದ್ದೆವು. ಅದರಂತೆ ಸರ್ಕಾರ ಮೇ 16ರಿಂದ ಶಾಲೆ ಆರಂಭಿಸಿದರೆ ನಾವು ಕರ್ತವ್ಯಕ್ಕೆ ಹಾಜರಾಗುತ್ತೇವೆ ಎಂದು ಶಿಕ್ಷಕರ ಸಂಘದ ಹೆಸರಳಲಿಚ್ಛಿಸದ ವಿವಿಧ ಪ್ರತಿನಿಧಿಗಳು ತಿಳಿಸಿದ್ದಾರೆ.


16ರಂದೇ ಶಾಲೆ ಶುರು
ಶಾಲೆ ರಜೆ ವಿಸ್ತರಣೆ ಮಾಡಬೇಕು ಎಂಬ ಬಗ್ಗೆ ಕೆಲ ಶಾಸಕರು ಆಗ್ರಹ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ. ಆದರೆ, ಕೊರೋನಾ ಹಿನ್ನೆಲೆಯಲ್ಲಿ ’ಕಲಿಕಾ ಚೇತರಿಕೆ’ ಕಾರ್ಯಕ್ರಮ ರೂಪಿಸಿ 15 ದಿನ ಮೊದಲೇ ಶಾಲೆ ಆರಂಭಿಸಲು ನಿರ್ಧರಿಸಲಾಗಿತ್ತು. ಅದರಲ್ಲಿ ಯಾವುದೇ ಬದಲಾವಣೆಯಿಲ್ಲ. ಪೂರ್ವ ನಿರ್ಧಾರದಂತೆ ಶಾಲೆಗಳು ಆರಂಭವಾಗಲಿವೆ.

- ಬಿ.ಸಿ.ನಾಗೇಶ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ