* ಪರೀಕ್ಷೆ ಬರೆದ ಅಭ್ಯರ್ಥಿ ಪೇದೆಯಿಂದ ಅಕ್ರಮ: ಸಿಐಡಿ ಶಂಕೆ* ಮಲ್ಲೇಶ್ವರ ಪರೀಕ್ಷಾ ಕೇಂದ್ರದ ವಿವಾದ* ಇಲಾಖೆಯ ಕೆಲವರ ನೆರವು ಪಡೆದು ಡೀಲ್ ನಡೆಸಿರಬಹುದು
ಬೆಂಗಳೂರು(ಮೇ.04): ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ(PSI Recruitment Scam) ಬೆಂಗಳೂರಿನ(Bengaluru) ಮಲ್ಲೇಶ್ವರ ಸಮೀಪ ಖಾಸಗಿ ಶಾಲೆಯೊಂದರ ಪಾತ್ರದ ಬಗ್ಗೆ ರಾಜ್ಯ ಅಪರಾಧ ತನಿಖಾ ದಳ ಶಂಕೆ ವ್ಯಕ್ತಪಡಿಸಿದೆ.
ಈ ಪ್ರಕರಣ ಸಂಬಂಧ ಬೆಂಗಳೂರ ನಗರ ದಕ್ಷಿಣ ವಿಭಾಗದ ಸಿಇಎನ್ ಠಾಣೆ ಹೆಡ್ ಕಾನ್‌ಸ್ಟೇಬಲ್ ಗಜೇಂದ್ರ ವಿಚಾರಣೆ ವೇಳೆ ಮಲ್ಲೇಶ್ವರ(Malleshwaram) ಶಾಲೆ ಹೆಸರು ಪ್ರಸ್ತಾಪವಾಗಿದ್ದು, ಈ ಬಗ್ಗೆ ತನಿಖೆ ನಡೆದಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಪರೀಕ್ಷೆ ಹಾಜರಾಗದಿದ್ದರೂ ಪಿಎಸ್‌ಐ ಆಗಿ ನೇಮಕ?
ಮಲ್ಲೇಶ್ವರ ಪರೀಕ್ಷಾ ಕೇಂದ್ರದ ವಿವಾದ:
2007ರಲ್ಲಿ ಪೊಲೀಸ್ ಇಲಾಖೆಗೆ(Derpartment of Police) ಸೇರಿದ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಗಜೇಂದ್ರ, ಆನಂತರ ಜಯನಗರ, ಕುಮಾರಸ್ವಾಮಿ ಹಾಗೂ ತಲಘಟ್ಪಪುರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದ. ಬಳಿಕ ಹೆಡ್ ಕಾನ್‌ಸ್ಟೇಬಲ್ ಆಗಿ ಮುಂಬಡ್ತಿ ಪಡೆದಿದ್ದ. ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಜೇಂದ್ರ, ಐದು ತಿಂಗಳಿಂದ ಅಪರಾಧ ಪ್ರಕರಣವೊಂದರ ತನಿಖೆ ಸಲುವಾಗಿ ಕೋಣನಕುಂಟೆ ಠಾಣೆಯಲ್ಲಿ ಆತ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಕರ್ನಾಟಕದಲ್ಲಿ 'ಸಿಂಘಂ'ನಂಥ ಅಧಿಕಾರಿಗಳಿದ್ರೂ ಪಿಎಸ್‌ಐ ಅಕ್ರಮ ಹೇಗಾಯ್ತು?: ಡಿ. ರೂಪಾ ಪ್ರಶ್ನೆ
ಪಿಎಸ್‌ಐ ಆಗುವ ಕನಸು ಕಂಡಿದ್ದ ಗಜೇಂದ್ರ, ಇದಕ್ಕಾಗಿ ಕಾರ್ಯದೊತ್ತಡದ ನಡುವೆಯೇ ಬಿಡುವು ಮಾಡಿಕೊಂಡು ಅಧ್ಯಯನ ಮಾಡುತ್ತಿದ್ದ. ಈ ಹಿಂದೆ ಎರಡ್ಮೂರು ಬಾರಿ ಸಾಮಾನ್ಯ ಅಭ್ಯರ್ಥಿಯಾಗಿ ಪಿಎಸ್‌ಐ ಬಾರಿ ಪರೀಕ್ಷೆ ಬರೆದು ವಿಫಲನಾಗಿದ್ದ ಗಜೇಂದ್ರ, ಪ್ರಸಕ್ತ ಸಾಲಿನಲ್ಲಿ ಇನ್ ಸರ್ವೀಸ್ ಕೋಟಾದಡಿ ಹುದ್ದೆ ಪಡೆಯಲು ಯತ್ನಿಸಿದ್ದ. ಮಲ್ಲೇಶ್ವರ ಸಮೀಪದ ಖಾಸಗಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಗಜೇಂದ್ರ ಪರೀಕ್ಷೆ ಬರೆದಿದ್ದ. ಈ ಮಲ್ಲೇಶ್ವರದ ಆ ಪರೀಕ್ಷಾ ಕೇಂದ್ರಕ್ಕೆ ಸಿಐಡಿ(CID) ತನಿಖೆ ಬಿಸಿ ತಟ್ಟಲಿದೆ ಎನ್ನಲಾಗಿದೆ.
ಕೃಷಿ ಹಿನ್ನೆಲೆಯ ಗಜೇಂದ್ರ ಕುಟುಂಬವು ಆರ್ಥಿಕವಾಗಿ ಸ್ಥಿತಿವಂತರು. ಸರ್ಕಾರಿ ಹುದ್ದೆಗೆ .50ರಿಂದ .60 ಲಕ್ಷ ವ್ಯಯಿಸುವಷ್ಟು ಗಜೇಂದ್ರ ಆರ್ಥಿಕವಾಗಿ ಸಾಮರ್ಥ್ಯ ಹೊಂದಿದ್ದ. ಈ ಬಾರಿ ಹೇಗಾದರೂ ಮಾಡಿ ಪಿಎಸ್‌ಐ ಆಗಲೇಬೇಕು. ಇದು ನನಗೆ ಕೊನೆಯ ಅವಕಾಶವಾಗಿದ್ದು, ಮುಂದೆ ನೇಮಕಾತಿ ಪ್ರಕಟಣೆ ಹೊರಡಿಸುವ ವೇಳೆಗೆ ವಯೋಮಿತಿ ಮೀರಿರುತ್ತದೆ ಎಂದು ಭಾವಿಸಿದ ಆತ, ಇಲಾಖೆಯ ಕೆಲವರ ನೆರವು ಪಡೆದು ಡೀಲ್ ನಡೆಸಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
