ರಾಜ್ಯದಲ್ಲಿ ತೀವ್ರ ಬರಗಾಲ ಇರುವಾಗ ಸಚಿವರಿಗೆ ಹೊಸ ಗೂಟದ ಕಾರು ಅಗತ್ಯವಿತ್ತೇ? : ವಿಜಯೇಂದ್ರ ಪ್ರಶ್ನೆ
ರಾಜ್ಯ ಕಾಂಗ್ರೆಸ್ ಸರ್ಕಾರವು ರೈತರಿಗೆ ಮಧ್ಯಂತರ ಪರಿಹಾರ ಕೊಡುವ ಬದಲಿಗೆ ತನ್ನ ಮಂತ್ರಿಗಳಿಗೆ ಹೊಸ ಗೂಟದ ಕಾರು ಕೊಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಬಿಜೆಪಿಯ ರಾಜ್ಯ ನಾಯಕ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದರು.
ಕುಷ್ಟಗಿ (ಅ.21) : ರಾಜ್ಯ ಕಾಂಗ್ರೆಸ್ ಸರ್ಕಾರವು ರೈತರಿಗೆ ಮಧ್ಯಂತರ ಪರಿಹಾರ ಕೊಡುವ ಬದಲಿಗೆ ತನ್ನ ಮಂತ್ರಿಗಳಿಗೆ ಹೊಸ ಗೂಟದ ಕಾರು ಕೊಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಬಿಜೆಪಿಯ ರಾಜ್ಯ ನಾಯಕ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದರು.
ಪಟ್ಟಣದ ಮಾರ್ಗವಾಗಿ ಲಿಂಗಸುಗೂರಿಗೆ ತೆರಳುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ ಹೊಸ ಅವಾಂತರಗಳು ಸೃಷ್ಟಿಯಾಗುತ್ತಿವೆ. ಸದ್ಯ ಭೀಕರ ಬರಗಾಲ ಇದೆ. ಮೆಕ್ಕೆಜೋಳ, ಜೋಳ, ರಾಗಿ ಸೇರಿದಂತೆ ಅನೇಕ ಬೆಳೆಗಳು ಸಂಪೂರ್ಣ ನಾಶವಾಗಿವೆ. ರಾಜ್ಯ ಸರ್ಕಾರ ರೈತರಿಗೆ ಮಧ್ಯಂತರ ಪರಿಹಾರ ಕೊಡುವಲ್ಲಿ ಇನ್ನೂ ಯೋಚಿಸುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಂತ್ರಿಗಳಿಗೆ ಗೂಟದ ಕಾರು ಕೊಡುವ ತೀರ್ಮಾನ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಈಗ ಅದರ ಅವಶ್ಯಕತೆ ಏನಿತ್ತು? ಎಂದರು.
ಅಂಬೇಡ್ಕರ್ ಜನ್ಮದಿನದ ಸಂಖ್ಯೆ ಹೊಂದಿರುವ ವಾಹನ ಪಡೆದ ಸಚಿವ ಸತೀಶ್ ಜಾರಕಿಹೊಳಿ!
ಈ ರಾಜ್ಯ ಸರ್ಕಾರಕ್ಕೆ ಬಡವರ ಅಭಿವೃದ್ಧಿ ಬೇಕಾಗಿಲ್ಲ. ಶಾಸಕರ ಅಭಿವೃದ್ಧಿಯ ಆದ್ಯತೆ ನೀಡುತ್ತಿದೆ. ಇದು ನಮ್ಮ ರಾಜ್ಯದ ದುರಾದೃಷ್ಟ. ಈಗ ಸರ್ಕಾರ ರಚನೆಯಾಗಿ ಕೇವಲ 5 ತಿಂಗಳಾಗಿದೆ. ಇತ್ತೀಚೆಗೆ ನಡೆದ ಐಟಿ ರೈಡ್‌ನಲ್ಲಿ ₹150 ಕೋಟಿಗೂ ಅಧಿಕ ಹಣ ಸಿಕ್ಕಿದೆ. ಇದು ಸ್ಯಾಂಪಲ್. ಮುಂದಿನ ದಿನಗಳಲ್ಲಿ ಇನ್ನಷ್ಟು ಪತ್ತೆಯಾಗಲಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುವಲ್ಲಿ ವಿಳಂಬವಾಗಿರಬಹುದು. ಆದರೆ ಅದನ್ನೇ ನಮ್ಮ ನಾಯಕರ ವಿಫಲ ಎಂದು ಹೇಳುವುದು ತಪ್ಪು. ಶೀಘ್ರದಲ್ಲಿ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ. ಕೇಂದ್ರ ಸರ್ಕಾರದ ಸಹಕಾರ ಬೇಕಾದರೆ ರಾಜ್ಯ ಸರ್ಕಾರ ಕೂಡ ಸಹಕಾರ ನೀಡಬೇಕು. ಆಗ ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗುತ್ತವೆ. ಕೇವಲ ದೂಷಿಸುವ ಕಾರ್ಯ ಮಾಡಬಾರದು ಎಂದರು.
ದೇಶದಲ್ಲಿ ಸದ್ಯ ಕಾಂಗ್ರೆಸ್ ಪರ ವಾತಾವರಣ ಇದೆ: ಮಾಜಿ ಕ್ರಿಕೆಟಿಗ, ಕಾಂಗ್ರೆಸ್ ಮುಖಂಡ ಮಹಮ್ಮದ್ ಅಜರುದ್ದೀನ್
ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಬಸವರಾಜ ಹಳ್ಳೂರು, ಯುವ ಮೋರ್ಚಾ ಅಧ್ಯಕ್ಷ, ಉಮೇಶ ಯಾಧವ. ಶರಣು ತಳ್ಳಿಕೇರಿ, ಮುತ್ತು ರಾಠೋಡ, ಪ್ರಕಾಶ ತಾಳಕೇರಿ, ಗವಿ ಶೆಟ್ಟರ ದೊಡ್ಡಬಸವ ಸುಂಕದ ಇದ್ದರು.