ಬೆಂಗಳೂರು(ಫೆ.19): ಆಸ್ತಿ ವಿವರ ಸಲ್ಲಿಕೆಯಲ್ಲಿ ತಪ್ಪು ಮಾಹಿತಿ ನೀಡಿರುವ ಆರೋಪದ ಮೇರೆಗೆ ಕೆ.ಆರ್‌.ಪೇಟೆ ಕ್ಷೇತ್ರದ ಶಾಸಕರೂ ಆಗಿರುವ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ವಿರುದ್ಧ ಖಾಸಗಿ ದೂರು ದಾಖಲಿಸಲು ಅನುಮತಿ ನೀಡುವ ಮನವಿಯನ್ನು ರಾಜ್ಯಪಾಲರು ಸೂಕ್ತ ಕ್ರಮಕ್ಕಾಗಿ ಸರ್ಕಾರಕ್ಕೆ ವರ್ಗಾಯಿಸಿದ್ದಾರೆ. 

ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಳ್ಳಿ ಅವರು ಸಚಿವರ ವಿರುದ್ಧ ದೂರು ದಾಖಲಿಸಲು ರಾಜ್ಯಪಾಲರಿಗೆ ಅನುಮತಿ ನೀಡುವಂತೆ ಪತ್ರ ಬರೆದಿದ್ದರು. ಸಚಿವ ನಾರಾಯಣಗೌಡ 2013ರ ಸಾರ್ವತ್ರಿಕ ಚುನಾವಣೆ ವೇಳೆಯ ಆಸ್ತಿ ವಿವರ ಮತ್ತು 2018ರ ಉಪಚುನಾವಣೆಯಲ್ಲಿ ನಮೂದಿಸಿರುವ ಆಸ್ತಿ ವಿವರಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಸಚಿವರು ತಪ್ಪು ಮಾಹಿತಿ ನೀಡಿದ್ದು, ಅಕ್ರಮ ಆಸ್ತಿ ಗಳಿಸಿದ್ದಾರೆ. ತಮ್ಮ ಆಸ್ತಿಯ ವಾಸ್ತವಾಂಶವನ್ನು ಮರೆಮಾಚಿದ್ದಾರೆ. ಹೀಗಾಗಿ ದೂರು ದಾಖಲಿಸಲು ಅನುಮತಿ ನೀಡಬೇಕು ಎಂದು ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ನಾರಾಯಣಗೌಡ, ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲಿ ಬ್ಲಾಸ್ಟ್ : ಇಲ್ಲಿ ಎಚ್ಚೆತ್ತುಕೊಂಡ ಸಚಿವ ನಾರಾಯಣಗೌಡ ವಾರ್ನಿಂಗ್

ದಿನೇಶ್‌ ಅವರ ಮನವಿಯನ್ನು ಪುರಸ್ಕರಿಸಿದ ರಾಜ್ಯಪಾಲ ವಜುಭಾಯಿ ವಾಲಾ ಅವರ ಕಚೇರಿಯಿಂದ ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಳ್ಳಿ, 2013ರ ಚುನಾವಣೆ ಮತ್ತು 2018ರ ಚುನಾವಣೆ ವೇಳೆ ನಾರಾಯಣಗೌಡ ಅವರು ಸಲ್ಲಿಕೆ ಮಾಡಿರುವ ಆಸ್ತಿ ವಿವರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ದೂರು ನೀಡಲು ರಾಜ್ಯಪಾಲರ ಅನುಮತಿಗಾಗಿ ಪತ್ರ ಬರೆದಿದ್ದೆ. ಈಗ ರಾಜ್ಯಪಾಲರಿಂದ ಅನುಮತಿ ನೀಡಲಾಗಿದ್ದು, ಜನಪ್ರತಿನಿಧಿಗಳ ನ್ಯಾಯಾಲಯ ಅಥವಾ ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.

ತನಿಖೆಗೆ ಆದೇಶಿಸಿಲ್ಲ-ಸಚಿವರ ಸ್ಪಷ್ಟನೆ:

ಈ ನಡುವೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿಲ್ಲ ಎಂದು ಸಚಿವ ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಳ್ಳಿ ಎಂಬುವವರು ರಾಜ್ಯಪಾಲರಿಗೆ ಖಾಸಗಿ ದೂರು ನೀಡಿದ್ದು, ಅದನ್ನು ರಾಜ್ಯಪಾಲರ ಕಚೇರಿಯಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮುಂದಿನ ಕ್ರಮಕ್ಕಾಗಿ ಎಂದು ವರ್ಗಾಯಿಸಿದ್ದಾರೆ. ಹೀಗಾಗಿ ರಾಜ್ಯಪಾಲರಿಂದ ತನಿಖೆಗೆ ಆದೇಶ ಎಂದು ತಪ್ಪು ಮಾಹಿತಿ ಹರಿದಾಡುತ್ತಿದೆ. ಇದು ಸತ್ಯಕ್ಕೆ ದೂರವಾದುದು ಎಂದು ಸಚಿವರು ಪ್ರಕಟಣೆ ನೀಡಿದ್ದಾರೆ.