ಮುಡಾ ಹಗರಣದ ಸಿಬಿಐ ತನಿಖೆಗೆ ಹೈಕೋರ್ಟ್ ತಡೆ ನೀಡಿದ್ದು, ಸಿಎಂ ಸಿದ್ದರಾಮಯ್ಯನವರಿಗೆ ರಾಜಕೀಯ ರಿಲೀಫ್ ಸಿಕ್ಕಿದೆ. ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಸಿಬಿಐ ತನಿಖೆ ಅರ್ಜಿ ವಜಾಗೊಂಡಿದೆ. ವಾಮಾಚಾರ ಆರೋಪದ ಹಿನ್ನೆಲೆಯಲ್ಲಿ ಈ ತೀರ್ಪು ಚರ್ಚೆಗೆ ಗ್ರಾಸವಾಗಿದೆ. ಲೋಕಾಯುಕ್ತದಲ್ಲೇ ತನಿಖೆ ಮುಂದುವರಿಯಲಿದೆ.
ಬೆಂಗಳೂರು (ಫೆ.7): ಮುಡಾ ಹಗರಣ (MUDA Scam) ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ದೇವಿಯ ಆಶೀರ್ವಾದ ಸಿಕ್ಕಿದೆ. ಈ ಹಗರಣದಲ್ಲಿ ಬಿಗ್ ರಿಲೀಫ್ ಸಿಕ್ಕಿದ್ದು, ಸಿಬಿಐ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಲೋಕಾಯುಕ್ತದಲ್ಲೇ ತನಿಖೆ ನಡೆಯಲಿ ಎಂಬುದು ನ್ಯಾಯಾಲಯದ ಅಭಿಪ್ರಾಯ. ಈ ಮೂಲಕ ಸಿಎಂ ವಿರುದ್ಧ ಸಿಬಿಐ ತನಿಖೆ ನಡೆಯಲೇಬೇಕು ಎಂದು ಹೋರಾಡಿದ್ದ ಸ್ನೇಹಮಯಿ ಕೃಷ್ಣಗೆ ಹಿನ್ನೆಡೆಯಾಗಿದೆ.
ಮಾತ್ರವಲ್ಲ ಮುಡಾ ಪ್ರಕರಣ ಹೊರಗೆ ಬರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಇದು ಮೊದಲ ಹಿನ್ನೆಡೆಯಾಗಿದೆ.
ಆರ್‌ಟಿಐ ಕಾರ್ಯಕರ್ತರಾದ ಟಿ. ಜೆ. ಅಬ್ರಹಾಂ, ಸ್ನೇಹಮಯಿ ಕೃಷ್ಣ, ಪ್ರದೀಪ್ ಕುಮಾರ್ ದೂರಿನ ಅನ್ವಯ ಕಳೆದ ಆಗಸ್ಟ್ ನಲ್ಲಿ ರಾಜ್ಯಪಾಲರು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17- ಎ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ- 2023ರ ಸೆಕ್ಷನ್ 218ರ ಅಡಿಯಲ್ಲಿ ಸಿದ್ದರಾಮಯ್ಯ ವಿರುದ್ಧದ ಆರೋಪ ತನಿಖೆಗೆ ಅನುಮತಿ ನೀಡಿ ಆರು ಪುಟಗಳ ಆದೇಶವನ್ನು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಕಳುಹಿಸಿ. ತನಿಖೆಗೆ ಆದೇಶಿಸಿದ್ದರು.
Breaking: ಮುಡಾ ಕೇಸ್‌ನಲ್ಲಿ ಸಿಎಂ ಸಿದ್ಧರಾಮಯ್ಯಗೆ ಬಿಗ್ ರಿಲೀಫ್
ಹೀಗಾಗಿ ಕಳೆದ ಆಗಸ್ಟ್‌ನಿಂದ ಕಾನೂನು ಹೋರಾಟದಲ್ಲಿ ಒಡ್ಡಾಡುತ್ತಿದ್ದ ಸಿಎಂ ಸಿದ್ದರಾಮಯ್ಯಗೆ ಪ್ರಕರಣದಲ್ಲಿ ಮೊದಲ ಗೆಲುವಾಗಿದೆ. ಮುಡಾ ಕೇಸ್ ನಲ್ಲಿ ಮುಜುಗರಕ್ಕೆ ಒಳಗಾಗಿದ್ದ ಸಿದ್ದರಾಮಯ್ಯಗೆ ಹೈಕೋರ್ಟ್ ಆದೇಶದಿಂದ ರಾಜಕೀಯ ಆಡಳಿತಕ್ಕೆ ರಿಲೀಫ್ ಸಿಕ್ಕಿದೆ.
ಸಿಬಿಐ ತನಿಖೆ ನಡೆಸಬೇಕು ಎಂದು ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿರುವುದು ಅವರ ಹೋರಾಟಕ್ಕೆ ಶ್ರುಕ್ರವಾರ ದೇವಿಯ ಆಶೀರ್ವಾದ ಸಿಕ್ಕಿಲ್ಲವೇ ಎಂಬುದು ಈಗ ಎದ್ದಿರುವ ಚರ್ಚೆ. ಈ ಚರ್ಚೆಗೆ ಬಲವಾದ ಕಾರಣವೂ ಇದೆ. ಅದೆಲ್ಲೋ ನಡೆದ ದುಷ್ಟಶಕ್ತಿಯ ಪ್ರಭಾವವೂ ಸಿದ್ದರಾಮಯ್ಯ ಅವರಿಗೆ ಬಲ ನೀಡಿ ಸ್ನೇಹಮಯಿಗೆ ಹಿನ್ನಡೆ ತಂದುಕೊಟ್ಟಿತಾ?
ಈ ತಿಂಗಳ ಮೊದಲವಾರ, ಮುಡಾ ಹಗರಣದಲ್ಲಿ ಹೋರಾಟ ಮಾಡುತ್ತಿರುವುದರಿಂದ ನನ್ನ ವಿರುದ್ಧ ಮಂಗಳೂರಲ್ಲಿ ವಾಮಾಚಾರ ಮಾಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದರು. ನನಗೆ ಭೀತಿಯಿಲ್ಲ, ನನ್ನ ಹೋರಾಟವನ್ನು ಹತ್ತಿಕ್ಕಲು ಆಗುವುದಿಲ್ಲ. ಮುಖ್ಯಮಂತ್ರಿ ಹಾಗೂ ಅವರ ಪತ್ನಿ ಈ ಹಗರಣದಲ್ಲಿ ಪಾತ್ರವಹಿಸಿದ್ದಾರೆ, ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಮತ್ತೊಮ್ಮೆ ಒತ್ತಿ ಹೇಳಿದ್ದರು.
6 ತಿಂಗಳ ಅಂತರದಲ್ಲಿ ನಾಲ್ವರ ನಡುವೆ ಬದಲಾದ ಆಸ್ತಿ, ಸಿಎಂ ಸಿದ್ದರಾಮಯ್ಯಗೆ ಸುತ್ತಿಕೊಳ್ಳುತ್ತಾ ಮತ್ತೊಂದು ಭೂಚಕ್ರ?
ಪ್ರಸಾದ್ ಅತ್ತಾವರ ಎಂಬುವವರು 2004-05ರಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದಾಗ ಅನುಕೂಲ ಪಡೆದಿದ್ದಾರೆ. ಈಗ ನಾನು ಹಗರಣದ ವಿರುದ್ಧ ಹೋರಾಡುತ್ತಿರುವುದಕ್ಕೆ ನನ್ನ ವಿರುದ್ಧ ದುರುದ್ದೇಶದಿಂದ ವಾಮಾಚಾರ ಮಾಡಿ, ನನ್ನ ವಶೀಕರಣಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದರು.
ಪ್ರಕರಣ ಬಯಲಾಗಿದ್ದು ಹೇಗೆ?
ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಎಂಬುವವರ ವಿರುದ್ಧ ಪ್ರಾಣಿ ರಕ್ತ ಬಲಿ ನೀಡಿ ವಾಮಾಚಾರ ಮಾಡಿದ್ದಾರೆ ಎನ್ನಲಾಗಿತ್ತು. ಮಂಗಳೂರಿನಲ್ಲಿ ಜ.23ರಂದು ನಡೆದ ಮಸಾಜ್ ಪಾರ್ಲರ್ ದಾಳಿಯಲ್ಲಿ ಪ್ರಸಾದ್ ಅತ್ತಾವರ ಮತ್ತು ಇತರೆ 13 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಪ್ರಸಾದ್ ಅತ್ತಾವರ ಬಳಿ ಇದ್ದ ಎರಡು ಮೊಬೈಲ್ ಫೋನ್‌ಗಳ ಮೆಸೇಜ್‌ಗಳನ್ನು ಪರಿಶೀಲಿಸಿದಾಗ ವಾಮಾಚಾರದ ವಿಚಾರ ಬೆಳಕಿಗೆ ಬಂದಿತ್ತು.
ಪ್ರಸಾದ್ ಅತ್ತಾವರ ಮತ್ತು ಅನಂತ ಭಟ್ ಎಂಬವರ ನಡುವೆ ಹಲವು ವಿಚಾರಗಳ ಸಂವಹನ ನಡೆದಿದ್ದು, ವಾಮಾಚಾರದ ವಿಡಿಯೋಗಳು ಕೂಡ ಪರಸ್ಪರ ರವಾನೆಯಾಗಿ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರ ಫೋಟೋಗಳನ್ನು ಮುಂದಿರಿಸಿ ಐದು ಕುರಿಗಳನ್ನು ಬಲಿ ಕೊಡಲಾಗಿದೆ. ಇವರ ಫೋಟೋಗಳಿಗೆ ರಕ್ತತರ್ಪಣ ಮಾಡಿ ಮತ್ತಷ್ಟು ಶಕ್ತಿ ತುಂಬುವ ಪ್ರಯತ್ನ ಮಾಡಿರುವ ರೀತಿಯ ವಿಡಿಯೋಗಳು ಮೊಬೈಲ್‌ನಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮಿಷನರ್ ಅನುಪಮ ಅಗರ್‌ವಾಲ್ ಸೂಚನೆ ಮೇರೆಗೆ ಬರ್ಕೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿದ್ದಾರೆ.
ಕುರಿ ಬಲಿ ಕೊಟ್ಟಿರುವುದು ಪತ್ತೆ: ಪ್ರಸಾದ್ ಅತ್ತಾವರನನ್ನು ಬಂಧಿಸಿ ಮೊಬೈಲ್ ರಿಟ್ರೀಟ್ ಮಾಡಿದಾಗ ಆತ ದೇವಸ್ಥಾನವೊಂದರಲ್ಲಿ ಕುರಿಗಳನ್ನು ಬಲಿಕೊಡುವ ದೃಶ್ಯ ಪತ್ತೆಯಾಗಿದೆ. ಐದು ಕುರಿಗಳನ್ನು ಬಲಿ ಕೊಡುತ್ತಿರುವ ವಿಡಿಯೋ ಇತ್ತು. ಈ ಕುರಿತು ವಾಟ್ಸ್‌ಆ್ಯಪ್ ಚಾಟ್‌ನಲ್ಲೂ ಉಲ್ಲೇಖಿಸಿರುವುದು ಗೊತ್ತಾಗಿದೆ ಎಂದು ಪೊಲೀಸ್ ಕಮಿಷನರ್ ಅನುಪಮ ಅಗರ್‌ವಾಲ್ ಸುದ್ದಿಗಾರರಿಗೆ ತಿಳಿಸಿದ್ದರು.
ವಾಮಾಚಾರ ನಡೆಸಿದ್ದಕ್ಕೆ ಪ್ರತಿಯಾಗಿ ಅನಂತ ಭಟ್ ಅವರಿಗೆ ಹಣದ ಕಂತೆಯನ್ನು ರವಾನೆ ಮಾಡಿರುವ ರೀತಿ ಕವರ್‌ವೊಂದರ ವಿಡಿಯೋ ಹಾಕಲಾಗಿದೆ. ಹಣದ ಚೀಲವನ್ನು ಸುಮ ಆಚಾರ್ಯ, ಪ್ರಶಾಂತ ಬಂಗೇರ ಹಾಗೂ ಹರ್ಷ ಮೈಸೂರು ಅವರು ಅನಂತ ಭಟ್‌ಗೆ ತಲುಪಿಸಿರುವುದಕ್ಕೆ ಸಾಕ್ಷಿ ಎನ್ನುವಂತೆ ವಾಟ್ಸ್‌ಆ್ಯಪ್ ನಂಬರಿಗೆ ಫೋಟೋ ರವಾನೆ ಮಾಡಲಾಗಿದೆ.
ಈ ಪ್ರಕರಣದಲ್ಲಿ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರಿಗೆ ಬಲ ತುಂಬಲು ಪ್ರಾಣಿ ಬಲಿ ನಡೆದಿದೆ ಎಂಬುದು ಪೊಲೀಸರು ಹೇಳಿಕೆಯಲ್ಲಿದೆ. ಆದರೆ ಬಲ ತುಂಬುಲು ಎಂಬುದಾದರೆ ವ್ಯಕ್ತಿಗಳಿಬ್ಬರ ಫೋಟೋವನ್ನು ಶಕ್ತಿಯ ಮುಂದಿಟ್ಟು ಕುರಿಗಳ ಬಲಿ ಕೊಟ್ಟಿದ್ದನ್ನು ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರಿಗೆ ತಿಳಿಸಬಹುದಿತ್ತಲ್ಲ ಎಂಬುದು ಸೋಷಿಯಲ್ ಮೀಡಿಯಾದಲ್ಲಿ ಚರ್ಚಿತ ವಿಷಯವಾಗಿದೆ.

