ನೀರಾವರಿ ಬ್ಯಾಕ್‌ಲಾಗ್ ಹುದ್ದೆ ನೇಮಕದಲ್ಲೂ ಗೋಲ್‌ಮಾಲ್?
ಪಿಎಸ್‌ಐ ಆಯ್ತು, ಇದೀಗ ನೀರಾವರಿ ಇಲಾಖೆಯ ನೇಮಕಾತಿಯಲ್ಲೂ ಅಕ್ರಮದ ಆರೋಪಗಳು ಕೇಳಿಬರುತ್ತಿವೆ.
ಆನಂದ್ ಎಂ. ಸೌದಿ
ಯಾದಗಿರಿ(ಡಿ.18): ಪಿಎಸ್‌ಐ ಆಯ್ತು, ಇದೀಗ ನೀರಾವರಿ ಇಲಾಖೆಯ ನೇಮಕಾತಿಯಲ್ಲೂ ಅಕ್ರಮದ ಆರೋಪಗಳು ಕೇಳಿಬರುತ್ತಿವೆ. ಜಲಸಂಪನ್ಮೂಲ ಇಲಾಖೆಯಲ್ಲಿನ ಗ್ರೂಪ್-ಸಿ ವೃಂದದ ಪರಿಶಿಷ್ಟ ಜಾತಿ ಬ್ಯಾಕ್‌ಲಾಗ್ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಯ ಅರ್ಹತಾ ಪಟ್ಟಿಯಲ್ಲಿ ಅನರ್ಹರಿಗೆ ಆದ್ಯತೆ ನೀಡಲಾಗಿದೆ ಎಂದು ನೊಂದ ಅಭ್ಯರ್ಥಿಗಳು ದೂರಿದ್ದು, ಭಾರೀ ಅಕ್ರಮದ ಶಂಕೆ ವ್ಯಕ್ತವಾಗಿದೆ. ಅಭ್ಯರ್ಥಿಗಳು ತಾವು ಪಿಯುಸಿಯ ಗರಿಷ್ಠ ಅಂಕಗಳನ್ನೇ ತಿರುಚಿ ಅಕ್ರಮ ನಡೆಸಿದ್ದಾರೆ ಎನ್ನಲಾಗಿದೆ.
ಜಲಸಂಪನ್ಮೂಲ ಇಲಾಖೆಯಲ್ಲಿನ ಗ್ರೂಪ್-ಸಿ ವೃಂದದ ಪರಿಶಿಷ್ಟಜಾತಿ ಬ್ಯಾಕ್‌ಲಾಗ್ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗಾಗಿ ಸೆ.23ರಂದು ಅಧಿಸೂಚನೆ ಹೊರಡಿಸಿ, ಸೆ.25ರಿಂದ ಅ.25ರವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಒಟ್ಟು 182 ಹುದ್ದೆಗಳಿಗೆ 1.12 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿ, ಡಿ.5ರಂದು 364 ಅಭ್ಯರ್ಥಿಗಳ ಅರ್ಹತಾ ಪಟ್ಟಿಪ್ರಕಟಿಸಲಾಗಿತ್ತು. ಆದರೆ, ಈ ಅರ್ಹತಾ ಪಟ್ಟಿಯಲ್ಲಿ ಅರ್ಹರಿಗೆ ಅನ್ಯಾಯವಾಗಿದೆ ಎಂಬುದು ನೊಂದವರ ಆರೋಪ.
ಎಫ್‌ಡಿಎ, ಎಸ್‌ಡಿಎ ನೇಮಕಾತಿ ಅಕ್ರಮದ ತನಿಖೆಗೆ ಸರ್ಕಾರ ಮೀನಾಮೇಷ..!
ಕೆಲ ಅಭ್ಯರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ತಾವು ಪಡೆದ ಅಂಕಗಳಷ್ಟೇ ಗರಿಷ್ಠ ಅಂಕಗಳನ್ನು ಅರ್ಜಿಯಲ್ಲಿ ನಮೂದಿಸಿದ್ದರಿಂದ ಶೇ.100ಕ್ಕೆ ನೂರರಷ್ಟು ಅಂಕ ಪಡೆದಿದ್ದೇವೆಂದು ತೋರಿಸಿ, ಮೆರಿಟ್ ಮೂಲಕ ಅಕ್ರಮವಾಗಿ ನುಸುಳುವ ಯತ್ನ ನಡೆಸಿದಂತಿದೆ. ಉದಾಹರಣೆಗೆ, ಪಿಯುಸಿಯಲ್ಲಿ ಒಟ್ಟು ಗರಿಷ್ಠ ಅಂಕ 600. ಆದರೆ, ಇಲ್ಲಿ 221 ಅಂಕ ಪಡೆದ ಅಭ್ಯರ್ಥಿಯು ಗರಿಷ್ಠ ಅಂಕಗಳನ್ನು 221 ಎಂದೇ ನಮೂದಿಸಿದ್ದಾನೆ. ಇದರಿಂದ ಶೇಕಡಾವಾರು ನೂರಕ್ಕೆ ನೂರರಷ್ಟುಅಂಕಗಳನ್ನು ಪಡೆದಿದ್ದೇನೆಂದು ಬಿಂಬಿಸಿದ್ದಾನೆ. ಈ ಮೂಲಕ ಅರ್ಹತಾ ಪಟ್ಟಿಯಲ್ಲಿ ಆತನ ಸ್ಥಾನ ಮೊದಲ ಸ್ಥಾನದಲ್ಲಿರುವಂತೆ ನೋಡಿಕೊಳ್ಳಲಾಗಿದೆ.
ಪರಿಶಿಷ್ಟಜಾತಿಗೆ ಮೀಸಲಾದ ಈ ಬ್ಯಾಕ್‌ಲಾಗ್ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಯೇತರರ ಹೆಸರೂ ಪರಿಶೀಲನಾ ಪಟ್ಟಿಯಲ್ಲಿದೆ. ಒಂದೇ ಹೆಸರು ಪಟ್ಟಿಯಲ್ಲಿ ಮೂರ್ನಾಲ್ಕು ಬಾರಿ ಕಂಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಪಿಎಸ್‌ಐ ಅಕ್ರಮ: ಕಲ್ಯಾಣ ಕರ್ನಾಟಕದ ಮೊದಲ ರ‍್ಯಾಂಕ್ ವಿಜೇತೆ ಸೆರೆ
ಇಂಥ ಪ್ರಮಾದಗಳ ಬಗ್ಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಾಗ, ಮೂಲ ದಾಖಲಾತಿಗಳ ಪರಿಶೀಲನೆ ಹಂತದಲ್ಲಿ ಪಟ್ಟಿ ಪರಿಷ್ಕೃತಗೊಳಿಸಿರುವುದಾಗಿ ಹೇಳಿದ್ದಾರೆ. ಆದರೆ, ತಪ್ಪು ಅಂಕ ನಮೂದಿಸಿದ ಅರ್ಜಿಗಳನ್ನು ಆರಂಭದಲ್ಲೇ ತಿರಸ್ಕೃತಗೊಳಿಸುವ ಬದಲು ಅರ್ಹತಾ ಪಟ್ಟಿವರೆಗೂ ಮುಂದುವರಿಸಿಕೊಂಡು ಬಂದಿರುವುದು ತೀವ್ರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಅಂತ ಯಾದಗಿರಿ ಮಲ್ಲಿಕಾರ್ಜುನ ಕುರಕುಂದಾ ತಿಳಿಸಿದ್ದಾರೆ.
ಹೇಗೆ ಅಕ್ರಮ?
- ಜಲಸಂಪನ್ಮೂಲ ಇಲಾಖೆ ಗ್ರೂಪ್ ಸಿ ವೃಂದದ ಎಸ್‌ಸಿ ಬ್ಯಾಕ್‌ಲಾಗ್ ಹುದ್ದೆಗೆ ದ್ವಿತೀಯ ದರ್ಜೆ ಸಹಾಯಕರ ನೇಮಕ
- ಮೂಲ ವಿದ್ಯಾರ್ಹತೆ ಪಿಯುಸಿ ಪಡೆದ ಅಂಕಗಳು
- ನೇರ ನೇಮಕಾತಿ ಮೂಲಕ ಅಭ್ಯರ್ಥಿಗಳ ಆಯ್ಕೆ
- ಪಿಯುಸಿಯಲ್ಲಿ ಗರಿಷ್ಠ ಅಂಕ 600 ಇದ್ದರೂ ತಾವು ಪಡೆದ ಅಂಕವನ್ನೇ ಗರಿಷ್ಠ ಅಂಕವೆಂದು ತೋರಿಸಿ ಕೆಲವರಿಂದ ಅಕ್ರಮ