Asianet Suvarna News Asianet Suvarna News

ಪೊಲೀಸರಿಗೆ ಧೈರ್ಯ ತುಂಬಿದ ಅಲೋಕ್‌ ಕುಮಾರ್‌!

ಪೊಲೀಸರಿಗೆ ಧೈರ್ಯ ತುಂಬಿದ ಅಲೋಕ್‌ ಕುಮಾರ್‌| ಆತ್ಮವಿಶ್ವಾಸ - ಕೊರೋನಾ ಸಶಸ್ತ್ರ ಮೀಸಲು ಪಡೆಯ ಪೊಲೀಸರಿಗೆ ಜಾಗೃತಿ ಮೂಡಿಸಿದ ಎಡಿಜಿಪಿ

IPS Alok Kumar Creates Awareness In KSRP Staffs
Author
Bangalore, First Published Jun 18, 2020, 10:44 AM IST

ಬೆಂಗಳೂರು(ಜೂ.18): ದಿನೇ ದಿನೆ ಕೊರೋನಾ ಸೋಂಕಿಗೆ ಸಿಬ್ಬಂದಿ ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ ಭೀತಿಗೊಂಡಿರುವ ಪೊಲೀಸರಿಗೆ ರಾಜ್ಯ ಸಶಸ್ತ್ರ ಮೀಸಲು ಪಡೆಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್‌ ಕುಮಾರ್‌ ಧೈರ್ಯ ತುಂಬಿದ್ದಾರೆ.

ಕೆಎಸ್‌ಆರ್‌ಪಿ ಮೈದಾನಕ್ಕೆ ಬುಧವಾರ ಬೆಳಗ್ಗೆ ಭೇಟಿ ನೀಡಿದ ಅಲೋಕ್‌ ಕುಮಾರ್‌, ಸಿಬ್ಬಂದಿಯ ಆರೋಗ್ಯ ಬಗ್ಗೆ ವಿಚಾರಿಸಿದರು.

ಕೊರೋನಾ ಪೀಡಿತ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವಾಗ ಎಚ್ಚರಿಕೆ ವಹಿಸಬೇಕು. ಹಾಗೆಯೇ ನಿಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವಂತೆ ಸಲಹೆ ನೀಡಿದ ಎಡಿಜಿಪಿ, ಯಾರು ಭಯಭೀತಿಗೊಳಗಾದದೆ ಒಗ್ಗೂಡಿ ಆತ್ಮವಿಶ್ವಾಸದ ಪ್ರಸುತ್ತ ಪರಿಸ್ಥಿತಿಯನ್ನು ನಿಭಾಯಿಸೋಣ ಎಂದು ಹೇಳಿದರು.

ಇದೇ ವೇಳೆ ಪೊಲೀಸರ ಸುರಕ್ಷತೆ ಬಗ್ಗೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಕಮಾಂಡೆಂಟ್‌ಗಳಿಗೆ ಸೂಚಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಕಂಟೈನ್ಮೆಂಟ್‌ ವಲಯದಲ್ಲಿ ಬಂದೋಬಸ್‌್ತಗೆ ನಿಯೋಜಿತರಾಗಿದ್ದ ಕೋರಮಂಗಲದ ಕೆಎಸ್‌ಆರ್‌ಪಿ 4ನೇ ಪಡೆಯ ಐವರು ಕಾನ್‌ಸ್ಟೇಬಲ್‌ಗಳಿಗೆ ಸೋಂಕು ಹರಡಿದೆ.

ನಿನ್ನೆ 8 ಮಂದಿ ಪೊಲೀಸರಿಗೆ ಸೋಂಕು

ಕೊರೋನಾ ಸೋಂಕು ಪೊಲೀಸರಿಗೆ ಮತ್ತಷ್ಟುವ್ಯಾಪ್ತಿಸಿದ್ದು, ಕೆಎಸ್‌ಆರ್‌ಪಿ ನಾಲ್ಕನೇ ಬೆಟಾಲಿಯನ್‌ನ ಐವರು ಸೇರಿದಂತೆ ಎಂಟು ಮಂದಿ ಪೊಲೀಸರಿಗೆ ಬುಧವಾರ ಸೋಂಕು ದೃಢಪಟ್ಟಿದೆ.

ಕಂಟೈನ್ಮೆಂಟ್‌ ವಲಯದಲ್ಲಿ ಕರ್ತವ್ಯ ನಿರ್ವಹಣೆ ಹಾಗೂ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಸಿಟಿ ಮಾರ್ಕೆಟ್‌ ಸಂಚಾರ ಠಾಣೆಯ ಎಎಸ್‌ಐ, ಇಬ್ಬರು ಕಾನ್‌ಸ್ಟೇಬಲ್‌ಗಳು ಹಾಗೂ ಕೆಎಸ್‌ಆರ್‌ಪಿ 4ನೇ ಬೆಟಾಲಿಯನ್‌ನ ಐವರು ಕಾನ್‌ಸ್ಟೇಬಲ್‌ಗಳಿಗೆ ಸೋಂಕು ಕಾಣಿಸಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಸೋಂಕಿತ ಪೊಲೀಸರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕ ಹೊಂದಿದ್ದ 30ಕ್ಕೂ ಹೆಚ್ಚು ಮಂದಿಯನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಸಿಟಿ ಮಾರುಕಟ್ಟೆಸಂಚಾರ ಠಾಣೆಯನ್ನು ಸ್ಯಾನಿಟೈಸರ್‌ನಿಂದ ಸ್ವಚ್ಛಗೊಳಿಸಿ ಸೀಲ್‌ಡೌನ್‌ ಮಾಡಲಾಗಿದೆ.

ಪೊಲೀಸ್‌ ಚೌಕಿಯಲ್ಲಿ ಹರಡಿದ ಸೋಂಕು:

ಮಾರ್ಕೆಟ್‌ ಆವರಣದ ಪೊಲೀಸ್‌ ಚೌಕಿಯಲ್ಲಿ ವಿಶ್ರಾಂತಿ ಪಡೆದ ಪರಿಣಾಮ ಸಿ.ಟಿ.ಮಾರ್ಕೆಟ್‌ ಸಂಚಾರ ಠಾಣೆ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ (ಎಎಸ್‌ಐ) ಹಾಗೂ ಇಬ್ಬರು ಕಾನ್‌ಸ್ಟೇಬಲ್‌ಗಳಿಗೆ ಸೋಂಕು ಹರಡಿದೆ.

ಮಾರ್ಕೆಟ್‌ ಆವರಣದ ಚೌಕಿಯನ್ನು ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ಠಾಣೆಗಳ ಪೊಲೀಸರು ಬಳಸುತ್ತಾರೆ. ಮೂರು ದಿನಗಳ ಹಿಂದೆ ಕಾನೂನು ಸುವ್ಯವಸ್ಥೆ ಠಾಣೆಯ ಕಾನ್‌ಸ್ಟೇಬಲ್‌ಗೆ ಸೋಂಕು ಕಾಣಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಸಂಚಾರ ಠಾಣೆ ಎಎಸ್‌ಐ ಹಾಗೂ ಕಾನ್‌ಸ್ಟೇಬಲ್‌ಗಳು ಕೋವಿಡ್‌ ತಪಾಸಣೆಗೊಳಗಾಗಿದ್ದರು. ಈಗ ಅವರಲ್ಲಿ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಠಾಣೆಯ ಇನ್‌ಸ್ಪೆಕ್ಟರ್‌ ಸೇರಿ 23 ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ.

Follow Us:
Download App:
  • android
  • ios