ಬಿಜೆಪಿ ಸರ್ಕಾರದ ಮತ್ತೊಂದು ಅಕ್ರಮ ಆರೋಪದ ತನಿಖೆ
ಪ್ರಸಕ್ತ ವರ್ಷ 13 ಸಾವಿರ ಸೊಸೈಟಿಗಳ ಲೆಕ್ಕ ಪರಿಶೋಧನೆ ನಡೆಸಿದ್ದಾರೆ. ಹೀಗಾಗಿ ಲೆಕ್ಕ ಪರಿಶೋಧನೆ ಇಲಾಖೆಯನ್ನು ಸಹಕಾರ ಇಲಾಖೆಯಲ್ಲೇ ಮುಂದುವರೆಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.

ಬೆಂಗಳೂರು(ಸೆ.08): ‘ವಿದ್ಯಾವಿಕಾಸ’ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಕೇಂದ್ರೀಯ ಭಂಡಾರದಿಂದ ಕಳಪೆ ಸಮವಸ್ತ್ರ ಪೂರೈಕೆ ಮಾಡುವ ಮೂಲಕ ಕೋಟ್ಯಂತರ ರು. ಅಕ್ರಮ ನಡೆಸಿರುವ ಬಗ್ಗೆ ಇಲಾಖಾ ತನಿಖೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಸಚಿವ ಎಚ್.ಕೆ. ಪಾಟೀಲ್, 2020-21, 2021-2022 ಸಾಲಿನಲ್ಲಿ ವಿದ್ಯಾ ವಿಕಾಸ ಯೋಜನೆಯಡಿ ಒಂದರಿಂದ 10ನೇ ತರಗತಿವರೆಗಿನ ಗಂಡು ಮಕ್ಕಳಿಗೆ ಮತ್ತು ಒಂದರಿಂದ ಏಳನೇ ತರಗತಿವರೆಗಿನ ಹೆಣ್ಣು ಮಕ್ಕಳಿಗೆ ಸಮವಸ್ತ್ರ, ಎಂಟರಿಂದ 10ನೇ ತರಗತಿವರೆಗಿನ ಹೆಣ್ಣು ಮಕ್ಕಳಿಗೆ ಚೂಡಿದಾರ್ ಸೇರಿ ಎರಡು ಜತೆ ಸಮವಸ್ತ್ರಕ್ಕೆ ಒಟ್ಟು 1.34 ಕೋಟಿ ಮೀಟರ್ ಬಟ್ಟೆ ಪೂರೈಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಕಾರ್ಯಾದೇಶ ನೀಡಿತ್ತು ಎಂದರು.
ಕರ್ನಾಟಕದ ಅತೀ ದೊಡ್ಡ ಭೂ ಹಗರಣ: ಯಾರೇ ತಪ್ಪು ಮಾಡಿದ್ದರೂ ಸುಮ್ಮನೆ ಬಿಡೋದಿಲ್ಲ, ಕಟಾರಿಯ
ಆದರೆ, ನಿಗಮ ಪೂರೈಸಿದ ಬಟ್ಟೆಯು ಕಳಪೆ ಗುಣಮಟ್ಟದಿಂದೆ ಕೂಡಿದೆ ಎಂದು 2023ರ ಫೆ. 21ರಂದು ಕೇಂದ್ರ ರೇಷ್ಮೆ ಮಂಡಳಿ ವರದಿ ನೀಡಿತ್ತು. ಒಟ್ಟು 144 ಕೋಟಿ ರು. ಮೊತ್ತಕ್ಕೆ ಕಾರ್ಯಾದೇಶ ನೀಡಲಾಗಿತ್ತು. ಕಳಪೆ ಗುಣಮಟ್ಟಎಂದು ವರದಿ ನೀಡಿದರೂ ಈ ಪೈಕಿ 117 ಕೋಟಿ ರು. ಪಾವತಿಸಲಾಗಿದೆ. ಕಳಪೆ ಗುಣಮಟ್ಟದ ಬಟ್ಟೆಪೂರೈಕೆದಾರರಿಗೆ ಶೇ.100 ರಷ್ಟು ಮೊತ್ತ ಪಾವತಿ ಮಾಡಲಾಗಿದೆ. ಈ ಬಗ್ಗೆ ವ್ಯಾಪಕ ಅಕ್ರಮ ನಡೆದಿರುವುದು ಸಾಬೀತಾಗಿದ್ದು, ಈಗಾಗಲೇ ವ್ಯವಸ್ಥಾಪಕ ನಿರ್ದೇಶಕರನ್ನು ಅಮಾನತುಗೊಳಿಸಲಾಗಿದೆ. ಹೀಗಾಗಿ ಈ ಹಗರಣದ ಹಿಂದೆ ಇನ್ನೂ ಯಾರಾರಯರಿದ್ದಾರೆ ಎಂಬ ಬಗ್ಗೆ ತನಿಖೆಗೆ ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
54.8 ಕೋಟಿ ರು.ಗಳಷ್ಟು ಮೊತ್ತವನ್ನು ನಿಯಮ ಬಾಹಿರವಾಗಿ ಪಾವತಿಸಲಾಗಿದೆ. ಹೀಗಾಗಿ 26 ಕೋಟಿ ರು.ಗಳನ್ನು ತಡೆ ಹಿಡಿಯಲಾಗಿದೆ. ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮ (ಕೆಎಚ್‌ಡಿಸಿ) ನೋಂದಾಯಿತ ಕೈ ಮಗ್ಗ ನೇಕಾರರಿಂದ ಖರೀದಿಸಿದ ಸಮವಸ್ತ್ರ ಉತ್ತಮ ಗುಣಮಟ್ಟಹೊಂದಿವೆ ಎಂದು ಶಿಕ್ಷಣ ಇಲಾಖೆ ಹೇಳಿದೆ. ಆದರೆ ಅವರಿಗೆ ಹಣ ಪಾವತಿ ಮಾಡಿಲ್ಲ. ಈ ನಿಟ್ಟಿನಲ್ಲಿ ನೇಕಾರರಿಗೆ ಅನುಗುವಾಗುವಂತೆ 14.48 ಕೋಟಿ ರು. ಬಿಡುಗಡೆಗೆ ಸಂಪುಟ ಸಭೆಯಲ್ಲಿ ಸಮ್ಮತಿ ಸೂಚಿಸಲಾಗಿದೆ ಎಂದು ಹೇಳಿದರು.
ಮಲೆನಾಡಲ್ಲಿ 18-20 ಸಾವಿರ ಜನಸಂಖ್ಯೆಗೆ ಜಿ.ಪಂ. ಸದಸ್ಯ ಸ್ಥಾನ
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಇಲಾಖೆ ಗ್ರಾಮಸ್ವರಾಜ್ ಪಂಚಾಯತ್ ರಾಜ್ ಕಾಯಿದೆಗೆ ತಿದ್ದುಪಡಿ ತಂದು ಮಲೆನಾಡು ಭಾಗದಲ್ಲಿ ಜನಸಂಖ್ಯೆ ಕಡಿಮೆ ಇರುವ ತಾಲೂಕುಗಳಲ್ಲಿ 18-20 ಸಾವಿರ ಜನಸಂಖ್ಯೆಗೆ ಒಂದು ಜಿಲ್ಲಾಪಂಚಾಯತ್ ಸ್ಥಾನ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
130 ಕೋಟಿ ಭತ್ತ ಅಕ್ರಮ ಮಾರಾಟ ಕೇಸ್ ಸಿಬಿಐಗೆ?
ವಾಡಿಕೆಯಂತೆ 35-36 ಸಾವಿರ ಜನಸಂಖ್ಯೆಗೆ ಒಂದು ಜಿ.ಪಂ. ಸ್ಥಾನ ಇರಬೇಕು. ಆದರೆ, ಜನಸಂಖ್ಯೆ ಕಡಿಮೆ ಇರುವ ಕೊಡಗು, ಚಿಕ್ಕಮಗಳೂರಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಅದೇ ರೀತಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಶಿಕಾರಿಪುರ ಹೊರತುಪಡಿಸಿ ‘ಸೊರಬ, ತೀರ್ಥಹಳ್ಳಿ, ಸಾಗರ ತಾಲೂಕು ಹಾಗೂ ಹೊಸನಗರ ಪಟ್ಟಣ ಪಂಚಾಯ್ತಿ’ ವ್ಯಾಪ್ತಿಯಲ್ಲಿ ತಲಾ 18-20 ಸಾವಿರ ಜನಸಂಖ್ಯೆಗೆ ಒಂದು ಜಿ.ಪಂ. ಸ್ಥಾನ ಮಾಡಲು ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆಗೆ ತಿದ್ದುಪಡಿ ನಿರ್ಧರಿಸಲಾಗಿದೆ.
ಸಹಕಾರ ಇಲಾಖೆಯಲ್ಲಿ ಲೆಕ್ಕ ಪರಿಶೋಧನೆ ಇಲಾಖೆ ಮುಂದುವರಿಕೆ
ಬೆಂಗಳೂರು: ಸಹಕಾರ ಇಲಾಖೆಯಲ್ಲಿನ ಲೆಕ್ಕ ಪರಿಶೋಧನೆ ಇಲಾಖೆಯನ್ನು ರಾಜ್ಯ ಲೆಕ್ಕ ಪತ್ರ ಇಲಾಖೆ ಜತೆ ವಿಲೀನ ಮಾಡುವಂತೆ 6 ನೇ ವೇತನ ಆಯೋಗ ವರದಿ ಶಿಫಾರಸು ಮಾಡಿತ್ತು. ಇದರಂತೆ ಮೂರು ವರ್ಷದ ಹಿಂದೆ ವಿಲೀನ ಮಾಡಿದ್ದರೂ ವಿಲೀನದ ಆದೇಶ ಆಗಿರಲಿಲ್ಲ. ಇದೀಗ ಸಚಿವ ಸಂಪುಟ ಸಭೆಯಲ್ಲಿ ಸಹಕಾರ ಇಲಾಖೆಗೆ ಲೆಕ್ಕ ಪರಿಶೋಧನೆ ಇಲಾಖೆ ಅಗತ್ಯ ಎಂದು ನಿರ್ಧರಿಸಲಾಗಿದೆ. ಪ್ರಸಕ್ತ ವರ್ಷ 13 ಸಾವಿರ ಸೊಸೈಟಿಗಳ ಲೆಕ್ಕ ಪರಿಶೋಧನೆ ನಡೆಸಿದ್ದಾರೆ. ಹೀಗಾಗಿ ಲೆಕ್ಕ ಪರಿಶೋಧನೆ ಇಲಾಖೆಯನ್ನು ಸಹಕಾರ ಇಲಾಖೆಯಲ್ಲೇ ಮುಂದುವರೆಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.