Asianet Suvarna News Asianet Suvarna News

ಉಡುಪಿ ಪರ್ಯಾಯ: ಗೊತ್ತಿಲ್ಲದ ಕುತೂಹಲಕರ ಸಂಗತಿಗಳಿವು!

ಉಡುಪಿ ಕೃಷ್ಣಮಠದಲ್ಲಿ 2 ವರ್ಷಗಳಿಗೊಮ್ಮೆ ಪರ್ಯಾಯ ಅಧಿಕಾರ ಹಸ್ತಾಂತರವೇ ನಮ್ಮ ರಾಜಕಾರಣಿಗಳಿಗೆ ಒಂದು ಪಾಠವಾದರೆ, ಮಠದ ಆಡಳಿತ ನಿರ್ವಹಣೆಯೂ ಮ್ಯಾನೇಜ್ಮೆಂಟ್‌ ವಿದ್ಯಾರ್ಥಿಗಳಿಗೊಂದು ಪಾಠ.

Interesting unknown facts about Udupi mutt Paryaya
Author
Bengaluru, First Published Jan 18, 2020, 5:29 PM IST
  • Facebook
  • Twitter
  • Whatsapp

ಮತ್ತೆ ಬಂದಿದೆ ಉಡುಪಿ ಕೃಷ್ಣನ ಪರ್ಯಾಯೋತ್ಸವ. ಪರ್ಯಾಯ ಎಂದರೆ ಒಂದು ಹೋಗಿ ಇನ್ನೊಂದು ಬರುವುದು ಎಂದರ್ಥ. ಉಡುಪಿಯಲ್ಲಿ 2 ವರ್ಷಗಳಿಗೊಮ್ಮೆ ಕೃಷ್ಣನ ಪೂಜೆಯ ಅಧಿಕಾರವು ಒಂದು ಮಠದಿಂದ ಇನ್ನೊಂದು ಮಠಕ್ಕೆ ಹಸ್ತಾಂತರಗೊಳ್ಳುವುದೇ ಪರ್ಯಾಯೋತ್ಸವ.

ಇಲ್ಲಿ ಅಧಿಕಾರ ಹಸ್ತಾಂತರ ಎಂದರೆ ಕೇವಲ ಒಂದು ಕೀಲಿಕೈ ಹಸ್ತಾಂತರವಲ್ಲ, ಅದು ಕೃಷ್ಣನಿಗೆ ನಿತ್ಯ 14 ಪೂಜೆಗಳನ್ನು ಮಾಡುವ ಪರಮ ಕರ್ತವ್ಯದ ಹಸ್ತಾಂತರವೂ ಹೌದು. ಜೊತೆಗೆ, ಕೃಷ್ಣ ಮಠದ ಸಮಗ್ರ ಆಡಳಿತದ ಹಸ್ತಾಂತರವೂ ಹೌದು. ಮಠಕ್ಕೆ ನಿತ್ಯ ಆಗಮಿಸುವ ಹತ್ತಾರು ಸಾವಿರ ಭಕ್ತರಿಗೆ ಅನ್ನಪ್ರಸಾದ ವಿತರಣೆ, ಕೃಷ್ಣನ ರಥಬೀದಿಯಲ್ಲಿ ನಿತ್ಯವೂ ನಡೆಯುವ ನಡೆಯುವ ಉತ್ಸವಗಳು, ರಾಜಾಂಗಣದಲ್ಲಿ ಒಂದು ದಿನವೂ ಬಿಡದೇ ನಡೆಯುವ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಮುನ್ನಡೆಸುವ ಮಹತ್ತರ ಹೊಣೆಯ ಹಸ್ತಾಂತರವೂ ಹೌದು.

ಉಡುಪಿಯಲ್ಲಿ ಮನೆ ಮಾಡಿದ ಸಂಭ್ರಮ, ಪರ್ಯಾಯದ ಕೆಲವು ದೃಶ್ಯಗಳು..!

ಈ ಬಾರಿ, ಕಳೆದೆರಡು ವರ್ಷಗಳಿಂದ ಕೃಷ್ಣನನ್ನು ವಿಧವಿಧವಾಗಿ ಪೂಜಿಸಿದ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಜ.18ರ ಪರ್ಯಾಯ ಮಹೋತ್ಸವದಲ್ಲಿ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಗೆ ಕೃಷ್ಣನ ಪೂಜೆಯ ಅಧಿಕಾರವನ್ನು ಒಪ್ಪಿಸಲಿದ್ದಾರೆ.

ಈ ಅಧಿಕಾರ ಹಸ್ತಾಂತರ ವಿಭಿನ್ನ

ಅಧಿಕಾರ ಹಸ್ತಾಂತರ ಎಂದರೆ ನೆನಪಾಗುವುದು ಅಧಿಕಾರ ದಾಹ, ಅದಕ್ಕಾಗಿ ರಾಜಕೀಯ ಪೈಪೋಟಿ, ಗದ್ದಲ-ಗೊಂದಲ. ಆದರೆ ಕೃಷ್ಣಮಠದಲ್ಲಿ ಅಧಿಕಾರ ಹಸ್ತಾಂತರದಲ್ಲಿ ಪೈಪೋಟಿಯೂ ಇಲ್ಲ, ರಾಜಕೀಯವೂ ಇಲ್ಲ. ಬೆಣ್ಣೆಯಲ್ಲಿ ಕೂದಲು ತೆಗೆದಷ್ಟೇ ಸುಲಲಿತವಾಗಿ, 2 ವರ್ಷಗಳಿಗೊಮ್ಮೆ ಜ.18ರ ಮುಂಜಾನೆ ಶುಭಮುಹೂರ್ತದಲ್ಲಿ ಇಬ್ಬರು ಮಠಾಧಿಪತಿಗಳ ನಡುವೆ ಕೆಲವೇ ನಿಮಿಷಗಳಲ್ಲಿ ಕೃಷ್ಣನ ಪೂಜೆಯ, ಕೃಷ್ಣಮಠದ ಆಡಳಿತದ ಅಧಿಕಾರ ಹಸ್ತಾಂತರ ನಡೆದುಬಿಡುತ್ತದೆ. ಮರುಕ್ಷಣದಿಂದಲೇ ಅಧಿಕಾರ ಸ್ವೀಕರಿಸಿದ ಮಠಾಧಿಪತಿಯವರು ಕೃಷ್ಣನ ಪೂಜೆಗೆ ತೊಡಗುತ್ತಾರೆ.

ಸರ್ವಜ್ಞ ಪೀಠ ಎಂದರೇನು? ಅದಕ್ಕೇಕೆ ಅಷ್ಟು ಮಹತ್ವ?

ಕೃಷ್ಣಮಠದಲ್ಲಿ ಒಂದು ಮರದ ಮಣೆ ಇದೆ. ಮಧ್ವಮತ ಪ್ರವರ್ತಕರಾದ ಶ್ರೀ ಮಧ್ವಾಚಾರ್ಯರ ಸನ್ನಿಧಾನವಿರುವ ಅದನ್ನು ಸರ್ವಜ್ಞ ಪೀಠ ಎಂದು ಕರೆಯಲಾಗುತ್ತದೆ. ಕೃಷ್ಣನ ಪೂಜೆ ಮಾಡುವ ಮಠಾಧೀಶರಿಗಷ್ಟೇ ಅದು ಮೀಸಲು. ಪರ್ಯಾಯೋತ್ಸವದ ಮುಂಜಾನೆ ಕೃಷ್ಣನ ಪೂಜೆಗೆ ಆಗಮಿಸಿದ ನೂತನ ಮಠಾಧೀಶರ ಕೈ ಹಿಡಿದು, ನಿರ್ಗಮನ ಮಠಾಧೀಶರು ಈ ಸರ್ವಜ್ಞ ಪೀಠದ ಮೇಲೆ ಕುಳ್ಳಿರಿಸುತ್ತಾರೆ. ಅಲ್ಲಿಗೆ ಕೃಷ್ಣನ ಪೂಜೆಯ ಅಧಿಕಾರ ಪೀಠಾರೋಹಣಗೈದ ಮಠಾಧೀಶರಿಗೆ ಹಸ್ತಾಂತರವಾಗಿಬಿಡುತ್ತದೆ. ಪತ್ರ, ಸಹಿ, ದಾಖಲೆ ಇತ್ಯಾದಿ ಯಾವ ಜಂಜಾಟಗಳೂ ಇರುವುದಿಲ್ಲ.

ರೈಲು ನಿಲ್ದಾಣಕ್ಕೆ ಪೇಜಾವರಶ್ರೀ ಹೆಸರು: ಕೇಂದ್ರ ಸಚಿವರಿಗೆ ಕೋಟ ಶಿಫಾರಸು

ಅಧಿಕಾರದ ಜೊತೆಗೆ ಅಕ್ಷಯ ಪಾತ್ರೆಯೂ ಹಸ್ತಾಂತರ

ನಾಡಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಉಡುಪಿ ಕೃಷ್ಣಮಠಕ್ಕೆ ಇತ್ತೀಚೆಗೆ ಬರುವ ಯಾತ್ರಾರ್ಥಿಗಳ ಸಂಖ್ಯೆ ಬಹಳ ದೊಡ್ಡದು. ಹಬ್ಬಹರಿದಿನಗಳಂದು 10 ಸಾವಿರಕ್ಕೂ ಅಧಿಕ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಅವರಿಗೆಲ್ಲರಿಗೂ ಮಧ್ಯಾಹ್ನ ಅನ್ನಪ್ರಸಾದ ಬಡಿಸಲಾಗುತ್ತದೆ. ಅದಕ್ಕೆ ಸಂಕೇತವಾಗಿ ಕೃಷ್ಣಮಠದಲ್ಲೊಂದು ಬೆಳ್ಳಿಯ ಅಕ್ಷಯಪಾತ್ರೆ- ಸಟ್ಟುಗ ಇದೆ. ಅದನ್ನು ಅಧಿಕಾರ ಬಿಟ್ಟುಕೊಡುವ ಮಠಾಧೀಶರು ಹಸ್ತಾಂತರಿಸುತ್ತಾರೆ.

ಅಂದರೆ, ಸರ್ವಜ್ಞ ಪೀಠಾರೋಹಣ ಮಾಡಿದ ಮಠಾಧೀಶರು, ಅದೇ ಕ್ಷಣದಲ್ಲಿ ತಮ್ಮ ಪರ್ಯಾಯೋತ್ಸವಕ್ಕೆ ಆಗಮಿಸಿದ ಲಕ್ಷಾಂತರ ಭಕ್ತರಿಗೆ ಅನ್ನದಾನಕ್ಕೆ ಸಿದ್ಧರಾಗಬೇಕು. ಇದು ಅಷ್ಟೇನೂ ಸರಳವಾದ ಕೆಲಸವಲ್ಲ, ಯಾಕೆಂದರೆ ಇದು ಪ್ರತಿದಿನ ಲಕ್ಷಾಂತರ ರು. ವೆಚ್ಚದ ಬಾಬ್ತು.

ಮೊದಲು 2 ತಿಂಗಳಿಗೊಮ್ಮೆ ಪರ್ಯಾಯ ನಡೆಯುತ್ತಿತ್ತು!

ಕಳೆದ 900 ವರ್ಷಗಳಿಂದ ಕೃಷ್ಣಮಠದಲ್ಲಿ ಈ ಅಧಿಕಾರ ಹಸ್ತಾಂತರದ ಪ್ರಕ್ರಿಯೆ ಶಾಸ್ತ್ರಗಳಿಗೆ ಕರಾರುವಕ್ಕಾಗಿ, ಅಷ್ಟೇ ಸಾಂಗವಾಗಿ ನಡೆಯುತ್ತಿದೆ. ಆರಂಭದ 4 ಶತಮಾನಗಳಲ್ಲಿ ಕೇವಲ 2 ತಿಂಗಳಿಗೊಮ್ಮೆ ಪರ್ಯಾಯೋತ್ಸವ ಅಂದರೆ ಪೂಜೆಯ ಅಧಿಕಾರದ ಹಸ್ತಾಂತರ ನಡೆಯುತ್ತಿತ್ತು. ನಂತರ ಸೋದೆ ಮಠದ ಶ್ರೀ ವಾದಿರಾಜ ತೀರ್ಥ ಸ್ವಾಮೀಜಿ ಅವರು ಅದನ್ನು ಮಠದ ಆಡಳಿತದ ದೃಷ್ಟಿಯಿಂದ 2 ವರ್ಷಗಳಿಗೊಮ್ಮೆ ನಡೆಯುವಂತೆ ಮಾಡಿದರು. ಅಂದಿನಿಂದ ಇಂದಿನವರೆಗೂ ಈ ಪರ್ಯಾಯೋತ್ಸವದ ಎಲ್ಲ ವಿಧಿ ವಿಧಾನಗಳು ಸಂಪ್ರದಾಯ, ಶಾಸ್ತ್ರಬದ್ಧವಾಗಿಯೇ, ಒಂದು ಅಲಿಖಿತ ಸಂವಿಧಾನದಂತೆ ನಡೆಯುತ್ತಿವೆ.

ಸ್ವಾಮೀಜಿ ಜೊತೆಗೆ ಸಿಬ್ಬಂದಿ, ಪಾತ್ರೆ ಎಲ್ಲವೂ ಕೂಡ ಬದಲು

ಉಡುಪಿ ಕೃಷ್ಣಮಠದಲ್ಲಿ 2 ವರ್ಷಗಳಿಗೊಮ್ಮೆ ಪರ್ಯಾಯ ಅಧಿಕಾರ ಹಸ್ತಾಂತರವೇ ನಮ್ಮ ರಾಜಕಾರಣಿಗಳಿಗೆ ಒಂದು ಪಾಠವಾದರೆ, ಮಠದ ಆಡಳಿತ ನಿರ್ವಹಣೆಯೂ ಮ್ಯಾನೇಜ್ಮೆಂಟ್‌ ವಿದ್ಯಾರ್ಥಿಗಳಿಗೊಂದು ಪಾಠ. ಪರ್ಯಾಯ ಅಧಿಕಾರ ಕೈಬದಲಾಗಿ, ರಾತ್ರಿ ಹಗಲಾಗುತ್ತಿದ್ದಂತೆ ಮಠದೊಳಗಿನ ಅಡುಗೆಯವರಿಂದ ಹಿಡಿದು, ಎಲ್ಲ ಸಿಬ್ಬಂದಿ- ಅಧಿಕಾರಿಗಳು-ಶಿಷ್ಯವರ್ಗದವರೂ ಬದಲಾಗುತ್ತಾರೆ. ಪಾತ್ರೆ-ಪರಡಿ-ಪೀಠೋಪಕರಣಗಳೆಲ್ಲವೂ ಹೊಸತಾಗುತ್ತವೆ.

ಮಠದ ನಿತ್ಯದ ಲಕ್ಷಾಂತರ ರು. ಖರ್ಚುವೆಚ್ಚಗಳೂ ಒಂದು ಮಠದಿಂದ ಇನ್ನೊಂದು ಮಠದ ಹೆಗಲೇರುತ್ತವೆ. ಯೋಚನೆಗಳು-ಯೋಜನೆಗಳು ಬದಲಾಗುತ್ತವೆ. ಆಸ್ಥಾನ ವಿದ್ವಾಂಸರಾಗಿ ಬೇರೆಯವರು ನಿಯುಕ್ತರಾಗುತ್ತಾರೆ. ಇಲ್ಲಿ ಎಲ್ಲವೂ ಅಲಿಖಿತ, ಆದರೆ ತಲಾತಲಾಂತರದಿಂದ ಸಂಪ್ರದಾಯಬದ್ಧ. ಆದರೆ ಮಠದೊಳಗೆ ನಡೆಯುವ ಈ ಬದಲಾವಣೆಗಳು ಹೊರಪ್ರಪಂಚಕ್ಕೆ ತಿಳಿಯುವುದಿಲ್ಲ. ಹೊರಪ್ರಪಂಚಕ್ಕೆ ಬೇಕಾಗುವ ಪೂಜೆ, ಪ್ರಸಾದ, ಸೇವೆ, ರಥೋತ್ಸವಗಳು ಎಂದಿನಂತೆಯೇ ನಡೆಯುತ್ತಿರುತ್ತವೆ.

ಉಡುಪಿ: ಫೋಕಸ್‌ ರಾಘುಗೆ ಫ್ರಾನ್ಸ್‌ ಗೌರವ

ಪೂಜೆಗೆ ಅರ್ಚಕರಿಲ್ಲ, ಶ್ರೀಗಳೇ ನಿತ್ಯ 14 ಪೂಜೆ ಮಾಡಬೇಕು!

ಕೃಷ್ಣಮಠದಲ್ಲಿ ಪೂಜೆಗೆ ಬೇರೆ ಅರ್ಚಕರಿಲ್ಲ, ಖುದ್ದು ಅಷ್ಟಮಠಾಧೀಶರೇ ಕೃಷ್ಣನ ಪೂಜೆಯನ್ನು ನಡೆಸುವುದು ಇಲ್ಲಿನ ಹೆಚ್ಚುಗಾರಿಕೆಯಾಗಿದೆ. ಬೇರೆ ಯಾವ ದೇವಸ್ಥಾನಗಳಲ್ಲಿಯೂ ನಡೆಯದ, ಪಂಚರಾತ್ರಾಗಮ ಮತ್ತು ತಂತ್ರಸಾರ ಪದ್ಧತಿಗಳ ಸಂಯುಕ್ತಾಧಾರಿತ, ನೈರ್ಮಲ್ಯ ವಿಸರ್ಜನೆ, ಉಷಾಕಾಲ ಪೂಜೆ, ಅಕ್ಷಯಪಾತ್ರೆ-ಗೋಪೂಜೆ, ಪಂಚಾಮೃತ ಅಭಿಷೇಕ, ಉಧ್ವರ್ತನಾ ಪೂಜೆ, ಸುವರ್ಣ ಕಲಶಾಭಿಷೇಕ, ಅಲಂಕಾರ ಪೂಜೆ, ಅವಸರಸನಕಾದಿ ಪೂಜೆ, ಮಹಾಪೂಜೆ, ಚಾಮರ ಸೇವೆ, ರಾತ್ರಿ ಪೂಜೆ, ಉತ್ಸವ ಮಂಟಪ ಪೂಜೆ, ಕೊಳಲು ಸೇವೆ, ಶಯನೋತ್ಸವ ಎಂಬ ಒಟ್ಟು 14 ಪೂಜೆಗಳು ಮಧ್ವಾಚಾರ್ಯರ ಕಾಲದಿಂದಲೂ ಇಲ್ಲಿ ನಡೆಯುತ್ತಿವೆ.

ಪ್ರತಿನಿತ್ಯ ಎಲ್ಲಾ 8 ಶ್ರೀಗಳೂ ಪೂಜೆ ಮಾಡುತ್ತಾರೆ ಗೊತ್ತೆ?

2 ವರ್ಷದ ಪರ್ಯಾಯದ ವೇಳೆ ಪರ್ಯಾಯದ ಹೊಣೆ ಹೊತ್ತ ಅಷ್ಟಮಠದ ಸ್ವಾಮೀಜಿ ಮಾತ್ರ ಕೃಷ್ಣನ ಪೂಜೆ ಮಾಡುತ್ತಾರೆಂದು ಸಾಮಾನ್ಯವಾಗಿ ಎಲ್ಲರೂ ಭಾವಿಸಿದ್ದಾರೆ. ಆದರೆ, ಹಾಗಿಲ್ಲ. ಪ್ರಧಾನ ಪೂಜೆಯ ಅಧಿಕಾರ ಪರ್ಯಾಯ ಸ್ವಾಮೀಜಿಯದು. ಇನ್ನುಳಿದ ಏಳು ಮಠಗಳ ಸ್ವಾಮೀಜಿಗಳು ಕೂಡ ಉಡುಪಿಯಲ್ಲಿ ಲಭ್ಯರಿದ್ದರೆ ಪ್ರತಿದಿನ ಕೃಷ್ಣನ ಗರ್ಭಗುಡಿಗೆ ಬಂದು 14 ಪೂಜೆಗಳ ಪೈಕಿ ಒಂದೆರಡು ಪೂಜೆಗಳನ್ನು ನೆರವೇರಿಸುತ್ತಾರೆ.

ಮುಂಜಾನೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಡೆಯುವ 14 ಪೂಜೆಗಳಲ್ಲಿ ಅವಸರ ಸನಕಾದಿ ಪೂಜೆ ಎಂಬುದು ಬಹಳ ವಿಶೇಷವಾಗಿದೆ. ಪರ್ಯಾಯ ಶ್ರೀಗಳು ಮತ್ತು ಇತರ ಮಠಾಧೀಶರು ಸೇರಿ ಬೆಳಗ್ಗಿನ ಅಲಂಕಾರ ಪೂಜೆಯವರೆಗಿನ 7 ಪೂಜೆಗಳನ್ನು ಮುಗಿಸಿ ಹೊರಗೆ ಬರುತ್ತಾರೆ. ನಂತರ ಸ್ನಾನ ಮಾಡಿ ಮಹಾಪೂಜೆಗೆ ಸಿದ್ಧರಾಗುತ್ತಾರೆ. ಈ ನಡುವೆ ಸಿಗುವ ಅಲ್ಪ ಅವಸರ (ಅವಕಾಶ)ದಲ್ಲಿ ಸನಕಾದಿ ಋುಷಿಗಳು ಗುಟ್ಟಾಗಿ ಬಂದು ಕೃಷ್ಣನಿಗೆ ಪೂಜೆ ಸಲ್ಲಿಸಿ ತೆರಳುತ್ತಾರೆ ಎಂಬುದು ನಂಬಿಕೆ. ಅದನ್ನೇ ಅವಸರ ಸನಕಾದಿ ಪೂಜೆ ಎಂದು ಕರೆಯಲಾಗುತ್ತದೆ.

ಇದು 250 ನೇ ಪರ್ಯಾಯೋತ್ಸವ

ಪ್ರತಿ ಮಠಕ್ಕೆ 16 ವರ್ಷಕ್ಕೊಮ್ಮೆ ಪರ್ಯಾಯದ ಅವಕಾಶ ಸಿಗುತ್ತದೆ. ಅಲ್ಲಿಗೆ ಒಂದು ಆವರ್ತ ಮುಗಿಯುತ್ತದೆ. ಈ ಆವರ್ತದ ಮೊದಲ ಪರ್ಯಾಯ ಪಲಿಮಾರು ಮಠದ್ದು. (ಪ್ರಸ್ತುತ ನಡೆಯುತ್ತಿದೆ) ನಂತರ ಅದಮಾರು, ಕೃಷ್ಣಾಪುರ, ಪುತ್ತಿಗೆ, ಶಿರೂರು, ಸೋದೆ, ಕಾಣಿಯೂರು, ಕೊನೆಗೆ ಪೇಜಾವರ ಮಠಗಳ ಪರ್ಯಾಯ ಸರದಿಯಂತೆ ನಡೆಯುತ್ತಿವೆ. ಇದುವರೆಗೆ 249 ಪರ್ಯಾಯಗಳು ಸಂಪನ್ನಗೊಂಡಿವೆ. ಇದೀಗ 250ನೇ ಪರ್ಯಾಯಕ್ಕೆ ಉಡುಪಿ ಸಿದ್ಧವಾಗಿದೆ.

ಈ ಬಾರಿ ಪೇಜಾವರ ವಿಶ್ವೇಶ ತೀರ್ಥರಿಲ್ಲ

ಉಡುಪಿ ಕೃಷ್ಣಮಠದ ಇತಿಹಾಸದಲ್ಲಿಯೇ ಅತಿ ಹೆಚ್ಚು 5 ಬಾರಿ ಪರ್ಯಾಯೋತ್ಸವವನ್ನು ನಡೆಸಿದವರು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು. ತಮ್ಮ 89 ವರ್ಷದ ಜೀವಿತಾವಧಿಯಲ್ಲಿ ಅವರು 40ಕ್ಕೂ ಹೆಚ್ಚು ಪರ್ಯಾಯೋತ್ಸವಗಳಲ್ಲಿ ಭಾಗಿಯಾಗಿದ್ದರು, ಮನೆಯ ಯಜಮಾನನಂತೆ ಮುಂಚೂಣಿಯಲ್ಲಿ ನಿಂತು ನಡೆಸಿದ್ದರು. ಆದರೆ ಈ ಬಾರಿ ಅವರಿಲ್ಲದೆ ಪರ್ಯಾಯೋತ್ಸವ ನಡೆಯುತ್ತಿದೆ. ಅಷ್ಟಮಠಗಳಿಗೂ, ಕೃಷ್ಣನ ಭಕ್ತರಿಗೂ ಪೇಜಾವರ ಶ್ರೀಗಳ ಕೊರತೆ ಬಹಳವಾಗಿ ಕಾಡುತ್ತಿದೆ. ಹೀಗಾಗಿ ಈ ಬಾರಿ ಉತ್ಸಾಹ ಕಡಿಮೆಯಾಗಿರುವುದಂತೂ ನಿಜ.

ಪರ್ಯಾಯೋತ್ಸವದ ವಿಧಿ ವಿಧಾನಗಳೇನು?

- ಪರ್ಯಾಯೋತ್ಸವದ ಹಿಂದಿನ ಸಂಜೆ, ಅಂದರೆ ಜ.17ರಂದು ಭಾವಿ ಪರ್ಯಾಯ ಶ್ರೀಗಳು ಉಡುಪಿಯಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ದಂಡ ತೀರ್ಥ ಎಂಬಲ್ಲಿಗೆ ತೆರಳುವುದು, ಅಲ್ಲಿ ಪವಿತ್ರ ಸ್ನಾನ ಮುಗಿಸಿ ಮಧ್ಯರಾತ್ರಿ ಕಳೆದು 1 ಗಂಟೆ ಸುಮಾರಿಗೆ ಉಡುಪಿಯ ಜೋಡುಕಟ್ಟೆಎಂಬಲ್ಲಿಗೆ ಆಗಮಿಸುತ್ತಾರೆ. ಅಲ್ಲಿ ಉಳಿದ ಮಠಾಧೀಶರು ಬಂದು ಅವರನ್ನು ಸ್ವಾಗತಿಸುತ್ತಾರೆ. ನಂತರ ಅಲ್ಲಿಯೇ ಕಟ್ಟೆಯ ಮೇಲೆ ಪಟ್ಟದ ದೇವರ ಪೂಜೆ ನಡೆಯುತ್ತದೆ.

- ನಂತರ ಆರಂಭವಾಗುತ್ತದೆ ಮೆರವಣಿಗೆ, ವೈವಿಧ್ಯಮಯ ಕಲಾಪ್ರಕಾರಗಳು, ನೃತ್ಯ, ವಾದ್ಯಘೋಷಗಳು, ಸ್ತಬ್ಧಚಿತ್ರಗಳು. ಇಡೀ ಮೆರವಣಿಗೆಯ ದಾರಿ ವಿದ್ಯುತ್‌ ದೀಪಗಳಿಂದ ಬೆಳದಿಂಗಳು ಚಲ್ಲಿದಂತೆ ಭಾಸವಾಗುತ್ತದೆ. ರಸ್ತೆ ಇಕ್ಕೆಲಗಳಲ್ಲಿ ಎಳ್ಳು ಬೀರಿದರೂ ಕೆಳಗೆ ಬೀಳದಷ್ಟುಸಂಖ್ಯೆಯಲ್ಲಿ ಜನರು ಸೇರಿರುತ್ತಾರೆ. ಅವರ ನಡುವೆ ಎಲ್ಲ ಮಠಾಧೀಶರು ಮೇನೆ (ಪಲ್ಲಕ್ಕಿ)ಯಲ್ಲಿ ಕುಳಿತು ಪರ್ಯಾಯೋತ್ಸವದ ಮುಂಜಾನೆ 4 ಗಂಟೆಗೆ ರಥಬೀದಿಗೆ ಬರುತ್ತಾರೆ.

- ಮೊದಲಿಗೆ ಎಲ್ಲ ಮಠಾಧೀಶರು ಕನಕನ ಕಿಂಡಿಯಿಂದ ಕೃಷ್ಣನ ದರ್ಶನ ಮಾಡುತ್ತಾರೆ. ನಂತರ ಒಳಗೆ ಪ್ರವೇಶಿಸಿದಾಗ ನಿರ್ಗಮನ ಪರ್ಯಾಯ ಶ್ರೀಗಳು ಭಾವಿ ಪರ್ಯಾಯ ಶ್ರೀಗಳನ್ನು ಸ್ವಾಗತಿಸಿ, ನಿಗದಿತ ಮುಹೂರ್ತದಲ್ಲಿ ಕೈಹಿಡಿದು ಸರ್ವಜ್ಞ ಪೀಠದಲ್ಲಿ ಕುಳ್ಳಿರಿಸಿ, ಅಕ್ಷಯಪಾತ್ರೆಯನ್ನು ಹಸ್ತಾಂತರಿಸಿ, ಕೃಷ್ಣನ ಪೂಜೆಯ ಅಧಿಕಾರ ಬಿಟ್ಟುಕೊಡುತ್ತಾರೆ.

- ನಂತರ ಮಠದ ಬಡಗು ಮಾಳಿಗೆಯಲ್ಲಿ ಅರಳಿನಿಂದ ಮಾಡಿರುವ ಎತ್ತರದ ಗದ್ದುಗೆಯ ಮೇಲೆ ಎಲ್ಲ ಮಠಾಧಿಪತಿಗಳು ಆಸೀನರಾಗುತ್ತಾರೆ. ನೂತನ ಪರ್ಯಾಯ ಪೀಠಾಧಿಪತಿಗಳಿಗೆ ಇತರ ಮಠಾಧಿಪತಿಗಳು ಸಂಪ್ರದಾಯದಂತೆ ವರಹ (4 ರು.)ವನ್ನು ಕಾಣಿಕೆಯಾಗಿ ನೀಡಿ, 2 ವರ್ಷಗಳ ಪರ್ಯಾಯಕ್ಕೆ ತಮ್ಮ ಸಹಕಾರ ಪ್ರಕಟಿಸುತ್ತಾರೆ.

- ಎಲ್ಲ ಶ್ರೀಗಳು ಮುಂಜಾನೆ 5 ಗಂಟೆಗೆ ರಾಜಾಂಗಣಕ್ಕೆ ಬರುತ್ತಾರೆ. ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಂತ್ರಿಗಳು, ಗಣ್ಯಾತಿಗಣ್ಯರ ಸಮ್ಮುಖದಲ್ಲಿ, ತುಂಬಿ ತುಳುಕಾಡುವ ಸಭಾಂಗಣದಲ್ಲಿ ಬಹಿರಂಗ ಸಭೆ ನಡೆಯುತ್ತದೆ. ಅಲ್ಲಿಗೆ ಪರ್ಯಾಯದ ಉತ್ಸವ ಮುಗಿಯುತ್ತದೆ, ಅರ್ಥಾತ್‌ ಮುಂದಿನೆರಡು ವರ್ಷಗಳ ಪೂಜಾ ಪರ್ಯಾಯ ಆರಂಭವಾಗುತ್ತದೆ.

- ಸುಭಾಶ್ಚಂದ್ರ ವಾಗ್ಳೆ ಉಡುಪಿ

Follow Us:
Download App:
  • android
  • ios