ನವದೆಹಲಿ: ಇತ್ತೀಚೆಗೆ ನಿಧನರಾದ ಕೇಂದ್ರದ ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ಚಿತಾಭಸ್ಮವನ್ನು ದೆಹಲಿಯಲ್ಲಿ ಶುಕ್ರವಾರ ಹೂಳಲಾಗಿದೆ. ಜೊತೆಗೆ ಜಾರ್ಜ್ ಅವರ ಆಸೆಯಂತೆ ಚಿತಾ ಭಸ್ಮವನ್ನು ಬೆಂಗಳೂರಿಗೂ ತರಲಾಗುವುದು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. 

2015 ರಲ್ಲಿ ಜಾರ್ಜ್‌ರ ಸೋದರ ಲಾರೆನ್ಸ್ ಸಾವನ್ನಪ್ಪಿದ್ದಾಗ, ಅವರ ಅಂತ್ಯ ಸಂಸ್ಕಾರವನ್ನು ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಕ್ರೈಸ್ತರ ಸ್ಮಶಾನದಲ್ಲಿ ನೆರವೇರಿ ಸಲಾಗಿತ್ತು. ಈ ವೇಳೆ ತಮ್ಮ ಅಂತ್ಯಸಂಸ್ಕಾರವನ್ನು ಇಲ್ಲೇ ನಡೆಸುವಂತೆ ಜಾರ್ಜ್ ತಮ್ಮ ಸೋದರ ಮೈಕೆಲ್‌ರನ್ನು ಕೋರಿದ್ದರು. ಅದರಂತೆ ಬೆಂಗಳೂರಿನಲ್ಲೂ ಜಾರ್ಜ್ ಚಿತಾಭಸ್ಮವನ್ನು ಹೂಳಲಾಗುವುದು ಎಂದು ಮೈಕೆಲ್ ತಿಳಿಸಿದ್ದಾರೆ. 

ಶವ ಸಂಸ್ಕಾರಕ್ಕೂ ತಾವೇ ಜಾಗ ಕಾಯ್ದಿರಿಸಿದ್ದ ಜಾರ್ಜ್: ದೆಹಲಿಯ ಪೃಥ್ವಿರಾಜ್ ರಸ್ತೆಯ ಕ್ರೈಸ್ತರ ಸ್ಮಶಾನದಲ್ಲಿ ಹೊಸದಾಗಿ ಯಾವುದೇ ಶವಸಂಸ್ಕಾರಕ್ಕೆ ಅವಕಾಶವಿಲ್ಲ. ಆದಾಗ್ಯೂ, ಜಾರ್ಜ್ ಫರ್ನಾಂಡಿಸ್ ಅವರೇ ಹಲವು ವರ್ಷಗಳ ಹಿಂದೆ ತಮ್ಮ ಅಂತ್ಯಸಂಸ್ಕಾರಕ್ಕೆ ಇಲ್ಲಿ ಜಾಗ ಕಾದಿರಿಸಿದ್ದರು. ಹೀಗಾಗಿ ಶುಕ್ರವಾರ ಅವರ ಚಿತಾಭಸವನ್ನು ದೆಹಲಿಯ ಅತ್ಯಂತ ಪುರಾತನ ಕ್ರೈಸ್ತ ಸ್ಮಶಾನದಲ್ಲಿ ಹೂಳಲಾಯಿತು.