ಬೆಂಗಳೂರು/ಕೆ.ಆರ್‌.ಪುರ(ಅ.29): ಬಿಬಿಎಂಪಿ ಪೌರಕಾರ್ಮಿಕರಿಗೆ ನೀಡಲಾದ ಬಿಸಿಯೂಟದಲ್ಲಿ ಹುಳ ಪತ್ತೆಯಾಗಿದ್ದು, ಆಹಾರ ಸರಬರಾಜು ಮಾಡಿದ ‘ರಿವಾರ್ಡ್‌ ಸಂಸ್ಥೆ’ ವಿರುದ್ಧ ಕ್ರಮ ಕೈಗೊಳ್ಳಲು ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಸೂಚನೆ ನೀಡಿದ್ದಾರೆ.

ಸೋಮವಾರ ರಾಮಮೂರ್ತಿ ನಗರ ವಾರ್ಡ್‌ ವ್ಯಾಪ್ತಿಯ ಕಲ್ಕೆರೆ ಗ್ರಾಮದಲ್ಲಿ ಇಂದಿರಾ ಕ್ಯಾಂಟೀನ್‌ ವತಿಯಿಂದ ಬಿಬಿಎಂಪಿ ಪೌರಕಾರ್ಮಿಕರಿಗೆ ಬೆಳಗಿನ ಬಿಸಿಯೂಟ ವಿತರಣೆ ಮಾಡಲಾಯಿತು. ಈ ವೇಳೆ ನೀಡಲಾಗಿದ್ದ ‘ರೈಸ್‌ ಬಾತ್‌’ (ಪಲಾವ್‌)ನಲ್ಲಿ ಹುಳ ಕಂಡು ಬಂದಿದ್ದು, ಹುಳುಮಿಶ್ರಿತ ಪಲಾವ್‌ ಸೇವಿಸಿದ ಹಲವು ಕಾರ್ಮಿಕರು ವಾಂತಿ ಮಾಡಿಕೊಂಡಿದ್ದಾರೆ. ಪೌರಕಾರ್ಮಿಕರು ಊಟವನ್ನು ಚರಂಡಿಗೆ ಸುರಿದು ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿದಿನ ಇದೇ ಗೋಳು:

ಇಂದಿರಾ ಕ್ಯಾಂಟೀನ್‌ನಿಂದ ವಿತರಿಸುವ ಆಹಾರವು ಅರ್ಧಂಬರ್ದ ಬೆಂದಿರುತ್ತದೆ. ಈ ರೀತಿ ಹುಳುಗಳು ಸಿಗುತ್ತಿರುವುದು ಇದೇ ಮೊದಲಲ್ಲ. ನಿತ್ಯ ಹುಳುಗಳ ದರ್ಶನವಾಗುತ್ತಲೇ ಇರುತ್ತದೆ. ಊಟದಲ್ಲಿ ಬದನೆಕಾಯಿ, ಮಂಗಳೂರು ಸೌತೆಕಾಯಿ ಬಿಟ್ಟರೆ ಬೇರೆ ತರಕಾರಿ ಕಾಣುವುದಿಲ್ಲ. ಅವು ಸಹ ಕೊಳೆತ್ತಿರುತ್ತವೆ. ಇಂತಹ ಊಟ ನೀಡಿ, ನಮ್ಮ ಆರೋಗ್ಯದ ಜತೆ ಆಟವಾಡುವ ಬದಲು ಸುಮ್ಮನಿರುವುದೇ ಸೂಕ್ತ ಎಂದು ಪೌರ ಕಾರ್ಮಿಕರು ಅಸಮಾಧಾನ ಹೊರ ಹಾಕಿದ್ದಾರೆ.

ಹೊಸಕೋಟೆಯಲ್ಲಿ ಬಂಡಾಯ ಅಭ್ಯರ್ಥಿ: ಅನರ್ಹ ಶಾಸಕ ಎಂಟಿಬಿಗೆ ಆತಂಕ

ಪ್ರತಿನಿತ್ಯ ನಗರ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಈ ಹಿಂದೆಯು ಹಲವು ಬಾರಿ ಊಟದಲ್ಲಿ ಹುಳುಗಳು ಪತ್ತೆಯಾಗಿದ್ದು, ಈ ಬಗ್ಗೆ ಸಂಬಂಧಪಟ್ಟಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಅನಾರೋಗ್ಯಕ್ಕೀಡಾಗಿ ಪ್ರತಿನಿತ್ಯ ಆಸ್ಪತ್ರೆಗೆ ಅಲೆಯುವಂತಾಗಿದೆ ಎಂದು ಅಳಲು ತೋಡಿಕೊಂಡರು.

ಆಹಾರದಲ್ಲಿ ಹುಳ ಕಂಡು ಬಂದಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ, ಘನತ್ಯಾಜ್ಯ ವಿಲೇವಾರು ಎಂಜಿನಿಯರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಲಿಕೆ ಸದಸ್ಯೆ ಪದ್ಮಾವತಿ ಶ್ರೀನಿವಾಸ್‌, ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕ್ರಮಕ್ಕೆ ಆಯುಕ್ತರ ಸೂಚನೆ

ಬಿಸಿಯೂಟದಲ್ಲಿ ಹುಳ ಪತ್ತೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌, ರಾಮಮೂರ್ತಿ ನಗರದ ಇಂದಿರಾ ಕ್ಯಾಂಟೀನ್‌ನಿಂದ ಪೌರಕಾರ್ಮಿಕರಿಗೆ ನೀಡಲಾದ ಆಹಾರದಲ್ಲಿ ಹುಳ ಪತ್ತೆಯಾಗಿದೆ ಎಂಬ ದೂರು ಕೇಳಿ ಬಂದಿದೆ. ಯಾವುದೇ ಕಾರಣಕ್ಕೂ ಈ ರೀತಿಯ ನಿರ್ಲಕ್ಷ್ಯವನ್ನು ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡುವುದಿಲ್ಲ. ಆಹಾರ ಸರಬರಾಜು ಮಾಡಿದ ರಿವಾರ್ಡ್‌ ಸಂಸ್ಥೆ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚನೆ ನೀಡಲಾಗಿದೆ. ಇನ್ನು ಆಹಾರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪರೀಕ್ಷಾ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಗುತ್ತಿಗೆದಾರರ ಬದಲಾವಣೆಗೆ ಸೂಚನೆ

ಈಗಾಗಲೇ ಇಂದಿರಾ ಕ್ಯಾಂಟೀನ್‌ಗೆ ಆಹಾರ ಸರಬರಾಜು ಮಾಡುತ್ತಿರುವ ಗುತ್ತಿಗೆದಾರರ ಟೆಂಡರ್‌ ಅವಧಿ ಪೂರ್ಣಗೊಂಡಿದೆ. ಹೊಸ ಗುತ್ತಿಗೆದಾರರ ನೇಮಕಕ್ಕೆ ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗಿದ್ದು, ಶೀಘ್ರದಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಹೊಸ ಗುತ್ತಿಗೆದಾರರ ನೇಮಿಸಲಾಗುವುದು ಎಂದು ಆಯುಕ್ತ ಅನಿಲ್‌ ಕುಮಾರ್‌ ಮಾಹಿತಿ ನೀಡಿದರು.

ಹಟ್ಟಿ ಪಟ್ಟಣದಲ್ಲಿ ಹೀನಾಯ ಸ್ಥಿತಿಯಲ್ಲಿ ಪೌರ ಕಾರ್ಮಿಕರ ಬದುಕು

ಬಿಸಿಯೂಟ ಆಹಾರವನ್ನು ರಿವಾರ್ಡ್‌ ಸಂಸ್ಥೆ ಸರಬರಾಜು ಮಾಡುತ್ತಿದೆ. ಪೌರಕಾರ್ಮಿಕರಿಗೆ ವಿತರಿಸಿದ ಪಲಾವ್‌ನಲ್ಲಿ ಹುಳ ಕಂಡು ಬಂದಿದೆ. ಖುದ್ದು ಸ್ಥಳಕ್ಕೆ ಭೇಟಿ ನೀಡಿ ಹುಳ ಪತ್ತೆಯಾಗಿದ್ದ ಮಾದರಿ ಆಹಾರ ಪಡೆದು, ಪರೀಕ್ಷೆಗೆಂದು ಲ್ಯಾಬ್‌ಗೆ ರವಾನಿಸಲಾಗಿದೆ. ಪೌರಕಾರ್ಮಿಕರಿಗೆ ಊಟ ಸರಬರಾಜು ಮಾಡುವ ಸಂಸ್ಥೆಯ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಆಯುಕ್ತರಿಗೆ ಪತ್ರ ಬರೆಯುತ್ತೇವೆ ಎಂದು ಮಹದೇವಪುರ ವಲಯ ಜಂಟಿ ಆಯುಕ್ತ ವೆಂಕಟಾಚಲಪತಿ ಹೇಳಿದ್ದಾರೆ.