ಇನ್ಫೋಸಿಸ್ ಫೌಂಡೇಷನ್‌ನಿಂದ ಅತ್ಯಾಧುನಿಕ ಆಂಬ್ಯುಲೆನ್ಸ್ ಕೊಡುಗೆ
* ಇನ್ಫೋಸಿಸ್ ಫೌಂಡೇಷನ್, ಸಮಾಜಸೇವಾ ಮತ್ತು ಇನ್ಫೋಸಿಸ್ ಸಂಸ್ಥೆ ಆಂಬ್ಯುಲೆನ್ಸ್ ದಾನ
* ಬೆಂಗಳೂರಿನ ನಾರಾಯಣ ಹೃದಯಾಲಯ ದತ್ತಿ ಟ್ರಸ್ಟ್ ಗೆ ಹಸ್ತಾಂತರ
* ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿರುವ ಆಂಬ್ಯುಲೆನ್ಸ್
ಬೆಂಗಳೂರು, (ಜೂನ್.14): ಇನ್ಫೋಸಿಸ್ ಫೌಂಡೇಷನ್, ಸಮಾಜಸೇವಾ ಸಂಸ್ಥೆ ಮತ್ತು ಇನ್ಫೋಸಿಸ್ ಸಂಸ್ಥೆಯ ಸಿಎಸ್‌ಆರ್ ನಿಧಿಯಿಂದ ಇಂದು (ಸೋಮವಾರ) ನಾರಾಯಣ ಹೃದಯಾಲಯ ದತ್ತಿ ಟ್ರಸ್ಟ್ ಗೆ ಎರಡು ಆಂಬ್ಯುಲೆನ್ಸ್ ದಾನವಾಗಿ ನೀಡಲಾಯಿತು
ಇದು ಬೆಂಗಳೂರಿನ ನಾರಾಯಣ ಹೃದಯಾಲಯ ಹೆಲ್ತ್ ಸಿಟಿ (ಎನ್‌ಎಚ್) ಗೆ ಹೆಚ್ಚಿನ ಆಂಬ್ಯುಲೆನ್ಸ್ ಗಳನ್ನು ಒದಗಿಸಲು ಟ್ರಸ್ಟ್ ಗೆ ನೆರವಾಗುತ್ತದೆ. ಈ ಮೂಲಕ ತುರ್ತು ಪರಿಸ್ಥಿತಿಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಮತ್ತು ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಶೀಘ್ರ ತೀವ್ರ ನಿಗಾ ಘಟಕಗಳಿಗೆ ರವಾನಿಸಲು ಸಹಾಯಕವಾಗಲಿದೆ.
ಇನ್ಫೋಸಿಸ್‌ನಿಂದ 1.5 ಕೋಟಿ ರು. ಸಲಕರಣೆ ವಿತರಣೆ
ಎರಡು ಆಂಬ್ಯುಲೆನ್ಸ್‌ಗಳು ಎನ್ಎಚ್ ಹೆಲ್ತ್ ಸಿಟಿಯ ಅಡ್ವಾನ್ಸ್ಡ್ ಕೇರ್ ಲೈಫ್ ಸಪೋರ್ಟ್ (ಎಸಿಎಲ್ಎಸ್) ನ ಭಾಗವಾಗಲಿದ್ದು, ಅದರಲ್ಲಿನ ಅರೆವೈದ್ಯಕೀಯ ಸಿಬ್ಬಂದಿ ರೋಗಿಗಳಿಗೆ ಆರಂಭಿಕ ಚಿಕಿತ್ಸೆ ಒದಗಿಸಲಿದ್ದಾರೆ. ಈ ಆಂಬ್ಯುಲೆನ್ಸ್‌ಗಳು ಎನ್ಎಚ್ ಹೆಲ್ತ್ ಸಿಟಿಯ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿವೆ. ಆಸ್ಪತ್ರೆಯ ಕೇಂದ್ರ ಸ್ಥಳವನ್ನು ಪತ್ತೆಹಚ್ಚಲು ಆಂಬ್ಯುಲೆನ್ಸ್‌ಗಳಲ್ಲಿ ಜಿಪಿಎಸ್ ಅನ್ನು ಕೂಡ ಅಳವಡಿಸಲಾಗಿದೆ.
ಇನ್ಫೋಸಿಸ್ ಫೌಂಡೇಶನ್‌ನೊಂದಿಗಿನ ಒಪ್ಪಂದದ ಪ್ರಕಾರ, ಈ ಆಂಬ್ಯುಲೆನ್ಸ್‌ಗಳನ್ನು ರೋಗಿಗಳಿಗೆ ಉಚಿತವಾಗಿ ಒದಗಿಸಲಾಗುತ್ತದೆ. ಇದು ಆಸ್ಪತ್ರೆಯ ಸೌಲಭ್ಯಗಳನ್ನು ವಿಸ್ತರಿಸಲು ಮತ್ತು ಸಮಾಜದ ಆರ್ಥಿಕ ದುರ್ಬಲ ವರ್ಗದ ರೋಗಿಗಳಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಖಾತರಿಪಡಿಸುವ ನಿಟ್ಟಿನಲ್ಲಿ ಪ್ರತಿಷ್ಠಾನದ ಮತ್ತೊಂದು ಹೆಜ್ಜೆಯಾಗಿದೆ.
ಸರ್ಕಾರ ನಿರ್ಲಕ್ಷಿಸಿದ್ರೂ ನೆರವಿಗೆ ಬಂದ ಸುಧಾಮೂರ್ತಿ: 5,000 ಖಾಸಗಿ ಅರ್ಚಕರಿಗೆ ಆಹಾರ ಕಿಟ್
ದೇಶವು ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯೊಂದಿಗೆ ಹೋರಾಡುತ್ತಿರುವ ಸಮಯದಲ್ಲಿ, ಸಮುದಾಯಕ್ಕೆ ಬೆಂಬಲವನ್ನು ಮುಂದುವರಿಸುವುದು ಇನ್ಫೋಸಿಸ್‌ಗೆ ಆದ್ಯತೆಯಾಗಿದೆ. ಕಂಪನಿಯು ಕಳೆದ ವರ್ಷ ಇನ್ಫೋಸಿಸ್ ಫೌಂಡೇಶನ್ ಮೂಲಕ ಕೋವಿಡ್ ಪರಿಹಾರಕ್ಕಾಗಿ 100 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದು, ಈಗ ಅದನ್ನು ಕೋವಿಡ್-ಕೇರ್ ಆಸ್ಪತ್ರೆಯ ಹಾಸಿಗೆಗಳ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ 200 ಕೋಟಿ ರೂ.ಗಳಿಗೆ ಹೆಚ್ಚಿಸಿದೆ. ಇದು ಆಸ್ಪತ್ರೆ ಸೌಲಭ್ಯ ವಿಸ್ತರಿಸಲು, ಆಮ್ಲಜನಕ ಸಾಂದ್ರಕಗಳು ಮತ್ತು ವೆಂಟಿಲೇಟರ್‌ಗಳ ಪೂರೈಕೆಯನ್ನು ಹೆಚ್ಚಿಸಲು ನೆರವಾಗುತ್ತದೆ ಮತ್ತು ಲಾಕ್‌ಡೌನ್‌ಗಳಿಂದ ಪ್ರಭಾವಿತವಾದ ವಲಸೆ ಕಾರ್ಮಿಕರಿಗೆ ಆಹಾರ ಮತ್ತು ಬೆಂಬಲ ಹಣವನ್ನು ಒದಗಿಸುತ್ತದೆ.
ಪ್ರಸ್ತುತ ಇನ್ಫೋಸಿಸ್, ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರಿನಲ್ಲಿ 150 ಹಾಸಿಗೆಗಳ ಕೋವಿಡ್ ಕೇರ್ ಆಸ್ಪತ್ರೆಯನ್ನು ಸ್ಥಾಪಿಸಲು ಸಹಾಯ ಮಾಡಿದೆ. ಭಾರತದ ವಿವಿಧ ಸ್ಥಳಗಳಲ್ಲಿ ಆಸ್ಪತ್ರೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಕಂಪನಿಯು ವಿವಿಧ ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡುತ್ತಿದೆ. ಇದಲ್ಲದೆ, ದೇಶದ 6 ರಾಜ್ಯಗಳಲ್ಲಿ ಇನ್ಫೋಸಿಸ್ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತಿದೆ. ಇವುಗಳಿಗೆ ಪ್ರತಿಯೊಂದೂ 500 ಎಲ್ಪಿಎಂ ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ, ನಾಗರಿಕರಿಗೆ ಕೋವಿಡ್ ಬೆಂಬಲಕ್ಕಾಗಿ ‘ಆಪ್ತಮಿತ್ರಾ ಆ್ಯಪ್’ ರಚಿಸಲು ಕೂಡ ಕರ್ನಾಟಕ ಸರ್ಕಾರಕ್ಕೆ ಸಹಾಯ ಮಾಡಿದೆ.