ಬೆಂಗಳೂರು(ಡಿ.03): ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ಅರಿಂದಮ್‌ ಘೋಷ್‌, ಸಿಎಸ್‌ಎಸ್‌ಎಸ್‌ನ ಡಾ.ಪ್ರಾಚಿ ದೇಶಪಾಂಡೆ ಸೇರಿದಂತೆ ಆರು ಮಂದಿ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದ ಸಾಧಕರು 2020ನೇ ಸಾಲಿನ ಇಸ್ಫೋಸಿಸ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2020ನೇ ಸಾಲಿನ ಇಸ್ಫೋಸಿಸ್‌ ಫೌಂಡೇಶನ್‌ ಪ್ರಶಸ್ತಿಗೆ ಜಗತ್ತಿನೆಲ್ಲೆಡೆಯಿಂದ 257 ನಾಮನಿರ್ದೇಶಗಳು ಬಂದಿದ್ದವು. ಅಂತಿಮವಾಗಿ ಮೆಸಾಚುಸೆಟ್ಸ್‌ ಇನ್‌ಸ್ಟಿಟ್ಯೂಷನ್‌ ಆಫ್‌ ಟೆಕ್ನಾಲಜಿಯ ಪ್ರೊ.ಹರಿ ಬಾಲಕೃಷ್ಣನ್‌ (ಎಂಜಿನಿಯರಿಂಗ್‌ ಮತ್ತು ಕಂಪ್ಯೂಟರ್‌ ಸೈನ್ಸ್‌), ಕೋಲ್ಕತ್ತಾದ ಸೆಂಟರ್‌ ಫಾರ್‌ ಸ್ಟಡೀಸ್‌ ಇನ್‌ ಸೋಶಿಯಲ್‌ ಸೈನ್ಸ್‌ (ಸಿಎಸ್‌ಎಸ್‌ಎಸ್‌)ನ ಡಾ.ಪ್ರಾಚಿ ದೇಶಪಾಂಡೆ (ಮಾನವಿಕ), ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಪ್ರೊ.ಸೌರವ್‌ ಚಟರ್ಜಿ (ಗಣಿತ ವಿಜ್ಞಾನ), ಹಾರ್ವರ್ಡ್‌ ವಿಶ್ವವಿದ್ಯಾಲಯದ ಪ್ರೊ.ರಾಜ್‌ಚೆಟ್ಟಿ(ಸಮಾಜ ವಿಜ್ಞಾನ), ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ಅರಿಂದಮ್‌ ಘೋಷ್‌ (ಭೌತಿಕ ವಿಜ್ಞಾನ) ಹಾಗೂ ರಾಜನ್‌ ಶಂಕರನಾರಾಯಣನ್‌ (ಲೈಫ್‌ ಸೈನ್ಸ್‌) ಅವರು ಆಯ್ಕೆಯಾಗಿದ್ದಾರೆ.

ಬುಧವಾರ ವರ್ಚುವಲ್‌ ಮಾಧ್ಯಮದ ಮೂಲಕ ನಡೆದ ಸಮಾರಂಭದಲ್ಲಿ ಅಮೆರಿಕದ ನ್ಯೂಯಾರ್ಕ್‌ನ ಕೌರಂಟ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾಥಮೆಟಿಕಲ್‌ ಸೈನ್ಸ್‌ನ ಪ್ರೊ.ಎಸ್‌.ಆರ್‌.ಶ್ರೀನಿವಾಸ್‌ ವರ್ಧನ್‌ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಮೊತ್ತವು ತಲಾ ಒಂದು ಲಕ್ಷ ಅಮೆರಿಕನ್‌ ಡಾಲರ್‌ (ಸುಮಾರು 74 ಲಕ್ಷ ರು.) ನಗದು, ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಉಡುಪಿಗೆ ಇಸ್ಫೋಸಿಸ್‌ ಪ್ರತಿ​ಷ್ಠಾನ 54 ಲಕ್ಷ ರೂಪಾಯಿ ನೆರವು

ಕಾರ್ಯಕ್ರಮದಲ್ಲಿ ಮಾತನಾಡಿದ ಇಸ್ಫೋಸಿಸ್‌ ಸೈನ್ಸ್‌ ಫೌಂಡೇಶನ್‌ ಸ್ಥಾಪಕ ನಾರಾಯಣಮೂರ್ತಿ, ದೇಶದ ಬಡಮಕ್ಕಳು ಪೌಷ್ಟಿಕ ಆಹಾರ, ಉತ್ತಮ ಶಿಕ್ಷಣ, ಆರೋಗ್ಯ ಮತ್ತು ಆಶ್ರಯ ಪಡೆಯಬೇಕೆಂಬ ಕನಸು ಕಾಣುತ್ತಾರೆ. ಅವರಿಗೆ ಉತ್ತಮ ಭವಿಷ್ಯ ಮತ್ತು ಆತ್ಮವಿಶ್ವಾಸ ಕೊಡುವ ಕಾರ್ಯವಾಗಬೇಕು ಎಂದಿದ್ದಾರೆ.

ಅದಕ್ಕಾಗಿ ಭ್ರಷ್ಟಾಚಾರ ಮುಕ್ತ ಮತ್ತು ತ್ವರಿತವಾಗಿ ಕಾರ್ಯಗತಗೊಳ್ಳುವ ಉತ್ತಮ ಚಿಂತನೆ, ಪರಿಣಾಮಕಾರಿ ವಿಚಾರಗಳ ಅವಶ್ಯಕತೆ ಇದೆ. ಅಭಿವೃದ್ಧಿ ಹೊಂದಿದ ದೇಶಗಳು ಉನ್ನತ ಶಿಕ್ಷಣ ಮತ್ತು ಸಂಶೋಧನಾ ವ್ಯವಸ್ಥೆಯಿಂದ ಯಶಸ್ವಿಯಾಗಿವೆ. ನಮ್ಮ ದೇಶವನ್ನು ಸುಧಾರಿಸುವ ಸಾಮರ್ಥ್ಯ ಹೊಂದಿರುವ ಅತ್ಯುತ್ತಮ ವಿಜ್ಞಾನಿಗಳು ಮತ್ತು ಸಂಶೋಧಕರನ್ನು ಗೌರವಿಸುವ ನಿಟ್ಟಿನಲ್ಲಿ ಇಸ್ಫೋಸಿಸ್‌ ಈ ಪ್ರಶಸ್ತಿಯ ಕೊಡುಗೆ ನೀಡುತ್ತಿದೆ ಎಂದರು.

ಇಸ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌ ಟ್ರಸ್ಟಿಗಳಾದ ಶ್ರೀನಾಥ್‌, ಕೆ.ದಿನೇಶ್‌, ಎಸ್‌.ಗೋಪಾಲಕೃಷ್ಣನ್‌, ನಂದನ್‌ ನಿಲೇಕಣಿ, ಮೋಹನ್‌ದಾಸ್‌ ಪೈ ಮತ್ತು ಎಸ್‌.ಡಿ.ಶಿಬುಲಾಲ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.