ಅರ್ಜಿ ದೋಷ ಮುಂದಿಟ್ಟು ಸರ್ಕಾರಿ ಹುದ್ದೆ ತಪ್ಪಿಸಲಾಗದು: ಹೈಕೋರ್ಟ್
ಅರ್ಜಿದಾರನ ಜಾತಿ ಪ್ರವರ್ಗವನ್ನು ಪರಿಶಿಷ್ಟ ಪಂಗಡದ ಜಾತಿಗೆ ಬದಲಾಗಿ ಪರಿಶಿಷ್ಟ ಜಾತಿಯಾಗಿ ತಿದ್ದುಪಡಿ ಮಾಡಿ ಹುದ್ದೆಯ ಆಯ್ಕೆಗೆ ಹೇಮಂತ್ ಕುಮಾರ್ ಅವರನ್ನು ಪರಿಗಣಿಸುವಂತೆ ಕೆಪಿಎಸ್‌ಸಿಗೆ ಆದೇಶಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು (ಫೆಬ್ರವರಿ 9, 2023): ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆ ವೇಳೆ ಆನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡಿದಾಗ ಉಂಟಾಗಿದ್ದ ಲೋಪದಿಂದ ಸರ್ಕಾರಿ ಉದ್ಯೋಗ ಕಳೆದುಕೊಳ್ಳಲಿದ್ದ ಅಭ್ಯರ್ಥಿ ನೆರವಿಗೆ ಹೈಕೋರ್ಟ್ ಬಂದಿದೆ.
ಎನ್. ಹೇಮಂತ್ ಕುಮಾರ್ ಎಂಬ ಅಭ್ಯರ್ಥಿ ಕಿರಿಯ ಸಹಾಯಕ/ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ತುಂಬುವಾಗ ಪರಿಶಿಷ್ಟ ಜಾತಿ ಬದಲಿಗೆ ಪರಿಶಿಷ್ಟ ಪಂಗಡ ಎಂದು ಉಲ್ಲೇಖಿಸಿದ್ದರಿಂದ ಹುದ್ದೆ ಕೈ ತಪ್ಪುವ ಭೀತಿಯಲ್ಲಿದ್ದರು. ಆದರೆ, ಇದೀಗ ಹೈಕೋರ್ಟ್, ಅರ್ಜಿದಾರನ ಜಾತಿ ಪ್ರವರ್ಗವನ್ನು ಪರಿಶಿಷ್ಟ ಪಂಗಡದ ಜಾತಿಗೆ ಬದಲಾಗಿ ಪರಿಶಿಷ್ಟ ಜಾತಿಯಾಗಿ ತಿದ್ದುಪಡಿ ಮಾಡಿ ಹುದ್ದೆಯ ಆಯ್ಕೆಗೆ ಹೇಮಂತ್ ಕುಮಾರ್ ಅವರನ್ನು ಪರಿಗಣಿಸುವಂತೆ ಕೆಪಿಎಸ್‌ಸಿಗೆ ಆದೇಶಿಸಿದೆ.
ಇದನ್ನು ಓದಿ: ಜಡ್ಜ್‌ಗಳನ್ನು ನಿಂದಿಸಿದ ವಕೀಲನಿಗೆ ಜೈಲು; ಜಡ್ಜ್‌ಗಳು ಭ್ರಷ್ಟರು ಎಂದಿದ್ದಕ್ಕೆ 8 ದಿನ ನ್ಯಾಯಾಗ ಬಂಧನ
ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರು ಎಂಬುದರಲ್ಲಿ ಯಾವುದೇ ವಿವಾದವಿಲ್ಲ. ಆದರೆ, ಅವರು ಅರ್ಜಿಯನ್ನು ಆನ್‌ಲೈನ್‌ನಲ್ಲಿ ತುಂಬುವಾಗ ದೋಷವಾಗಿದೆ. ನಂತರ ಆತ ಸಲ್ಲಿಸಿದ ಮನವಿಯನ್ನು ಆಯೋಗ ಪರಿಗಣಿಸಿ ಜಾತಿಯನ್ನು ತಿದ್ದುಪಡಿ ಮಾಡಬಹುದಿತ್ತು. ಆದರೆ, ಆಯೋಗ ಅದನ್ನು ಮಾಡದೆ ವ್ಯಾಜ್ಯಕ್ಕೆ ಕಾರಣವಾಗಿದೆ. ಅರ್ಜಿದಾರ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕಗಳಿಸಿದ್ದು, ನ್ಯಾಯಾಲಯವು ಆತನ ಅಹವಾಲು ಆಲಿಸಬೇಕಿದೆ. ಮಾನವ ದೋಷ ಸಹಜವಾಗಿದೆ. ಅದೇ ರೀತಿಯಲ್ಲಿ ಅಭ್ಯರ್ಥಿಯೂ ಪ್ರಮಾದ ಎಸಗಿದ್ದಾರೆ. ಅದನ್ನೇ ಮುಂದಿಟ್ಟುಕೊಂಡು ಆ ಅಭ್ಯರ್ಥಿಯನ್ನು ಹುದ್ದೆ ಅವಕಾಶದಿಂದ ವಂಚಿತರನ್ನಾಗಿ ಮಾಡಲಾಗದು ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ವಿವರ:
ಕೆಪಿಎಸ್‌ಸಿ 2020ರ ಫೆಬ್ರವರಿ 29ರಂದು ಕಿರಿಯ ಸಹಾಯಕ/ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಅರ್ಜಿದಾರರು ಸೈಬರ್ ಕೇಂದ್ರದಲ್ಲಿ ಆನ್‌ಲೈನ್ ಮೂಲಕ ಅರ್ಜಿಯನ್ನು ತುಂಬುವಾಗ ಜಾತಿ ನಮೂನೆಯಲ್ಲಿ ಪರಿಶಿಷ್ಟಜಾತಿಯ ಬದಲು ಪರಿಶಿಷ್ಟ ಪಂಗಡ ಎಂದು ನಮೂದಿಸಿದ್ದರು. ಆ ದೋಷವನ್ನು ಸರಿಪಡಿಸಲು ಆನ್‌ಲೈನ್‌ನಲ್ಲಿ ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಿರಲಿಲ್ಲ. 2021ರ ಸೆಪ್ಟೆಂಬರ್ 19ರಂದು ನಡೆದಿದ್ದ ಲಿಖಿತ ಪರೀಕ್ಷೆ ಬರೆದಿದ್ದರು. ಜ್ಯೇಷ್ಠತಾ ಪಟ್ಟಿಯಲ್ಲಿ ಸ್ಥಾನ ಪಡೆದು ದಾಖಲಾತಿ ಪರಿಶೀಲನೆಗೂ ತೆರಳಿದ್ದರು. ಆದರೆ, ಜಾತಿ ಪ್ರವರ್ಗ ಬದಲಾಗದ ಹಿನ್ನೆಲೆಯಲ್ಲಿ ಅದನ್ನು ತಿದ್ದುಪಡಿ ಮಾಡಲು ಕೋರಿದ್ದರು. ಆದರೆ, ಆಯೋಗ ಅವರ ಮನವಿ ತಿರಸ್ಕರಿಸಿತ್ತು. 2022ರ ನವೆಂಬರ್ 25ರಂದು ಪ್ರಕಟವಾದ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲೂ ಅರ್ಜಿದಾರರನ್ನು ಪರಿಶಿಷ್ಟಜಾತಿ ಬದಲು ಪರಿಶಿಷ್ಟ ಪಂಗಡವೆಂದೇ ಪರಿಗಣಿಸಲಾಗಿತ್ತು. ಹಾಗಾಗಿ, ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ: ಅಕ್ರಮವಾಗಿ ವಾಸ: ಬಾಂಗ್ಲಾ ಪ್ರಜೆಗೆ ಜಾಮೀನು ನೀಡಲು ಒಪ್ಪದ ಹೈಕೋರ್ಟ್