Asianet Suvarna News Asianet Suvarna News

ನಾಳೆಯಿಂದ ಗರ್ಭಿಣಿಯರು, ಮಕ್ಕಳಿಗೆ ಇಂದ್ರಧನುಷ್‌ 5.0 ಲಸಿಕೆ ಅಭಿಯಾನ

ಅಭಿಯಾನವನ್ನು ತಲಾ ಆರು ದಿನಗಳಂತೆ ಮೂರು ಹಂತಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಎರಡನೇ ಹಂತದ ಲಸಿಕಾ ಅಭಿಯಾನ ಸೆ.11ರಿಂದ 16 ರವರೆಗೆ, ಮೂರನೇ ಹಂತದ ಲಸಿಕೆ ಅಭಿಯಾನ ಅ.9ರಿಂದ ಅ.14ರವರೆಗೆ ನಡೆಯಲಿದೆ.

Indradhanush 5.0 Vaccination Campaign for Pregnant Women Children in Karnataka grg
Author
First Published Aug 6, 2023, 3:00 AM IST

ಬೆಂಗಳೂರು(ಆ.06):  ರಾಜ್ಯದಲ್ಲಿ 5 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ ದಡಾರ, ರುಬೆಲ್ಲಾದಂತಹ ಗಂಭೀರ ಕಾಯಿಲೆಗಳ ನಿರೋಧಕ ಶಕ್ತಿ ನೀಡಲು ಆ.7ರಂದು ಸೋಮವಾರದಿಂದ ಆ.12ರವರೆಗೆ ರಾಜ್ಯಾದ್ಯಂತ ‘ಇಂದ್ರಧನುಷ್‌ 5.0’ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಈ ಅಭಿಯಾನವನ್ನು ತಲಾ ಆರು ದಿನಗಳಂತೆ ಮೂರು ಹಂತಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಎರಡನೇ ಹಂತದ ಲಸಿಕಾ ಅಭಿಯಾನ ಸೆ.11ರಿಂದ 16 ರವರೆಗೆ, ಮೂರನೇ ಹಂತದ ಲಸಿಕೆ ಅಭಿಯಾನ ಅ.9ರಿಂದ ಅ.14ರವರೆಗೆ ನಡೆಯಲಿದೆ.

ಭಾರತದ ಮತ್ತೊಂದು ಮೈಲಿಗಲ್ಲು, ಒಮಿಕ್ರಾನ್ ಲಸಿಕೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ!

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ದಡಾರ ರುಬೆಲ್ಲಾ ಲಸಿಕೆಗಳನ್ನು ಒಳಗೊಂಡಂತೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಮಾಡಲು ನಿರ್ಧರಿಸಲಾಗಿದೆ. ಲಸಿಕೆಗಳ ಬಗ್ಗೆ ಅರಿವು ಕಡಿಮೆ ಇರುವ ಕೊಳಗೇರಿಗಳು, ನಗರ ಹೊರವಲಯಗಳು, ಅಲೆಮಾರಿಗಳ ವಾಸಸ್ಥಳಗಳು, ನಿರ್ಮಾಣ ಹಂತದ ಕಟ್ಟಡಗಳು, ಇಟ್ಟಿಗೆಗೂಡು, ಹಟ್ಟಿಗಳಂತಹ ಕಡ ವಿಶೇಷ ಗಮನ ನೀಡಲಾಗುವುದು. ಲಸಿಕೆ ನೀಡಲು ಹೆಚ್ಚಿನ ಅಪಾಯದ ಜಿಲ್ಲೆಗಳು, ಮಧ್ಯಮ ಹಾಗೂ ಕಡಿಮೆ ಅಪಾಯದ ಜಿಲ್ಲೆಗಳೆಂದು ಮೂರು ರೀತಿಯ ವರ್ಗೀಕರಣ ಮಾಡಲಾಗಿದೆ ಎಂದರು.

ಬಾಗಲಕೋಟೆ, ಬಳ್ಳಾರಿ, ಬಿಬಿಎಂಪಿ, ಬೆಂಗಳೂರು ನಗರ, ಬೆಳಗಾವಿ, ದಕ್ಷಿಣ ಕನ್ನಡ, ಧಾರವಾಡ, ಕಲಬುರಗಿ, ಕೋಲಾರ, ಮೈಸೂರು, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಿಗೆ ವಿಶೇಷ ಒತ್ತು ನೀಡಲಾಗುವುದು. ಮಧ್ಯಮ ಅಪಾಯದ ಜಿಲ್ಲೆಗಳ ಪಟ್ಟಿಯಲ್ಲಿ ಬೀದರ್‌, ದಾವಣಗೆರೆ, ಗದಗ, ಹಾಸನ, ಕೊಪ್ಪಳ, ರಾಮನಗರ, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ ಮತ್ತು ವಿಜಯನಗರ, ಕಡಿಮೆ ಅಪಾಯದ ಜಿಲ್ಲೆಗಳಾದ ಬೆಂಗಳೂರು-ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ, ಕೊಡಗು, ಮಂಡ್ಯ ಮತ್ತು ಉಡುಪಿಗಳನ್ನೂ ನಿರ್ಲಕ್ಷ್ಯ ಮಾಡದೆ ಶೇ.100ರಷ್ಟು ಲಸಿಕೆಗೆ ಆದ್ಯತೆ ನೀಡಲು ಸೂಚಿಸಲಾಗಿದೆ ಎಂದರು.

ವೆಬ್‌ಸೈಟ್‌ ಮೂಲಕ ನೋಂದಣಿಗೆ ಅವಕಾಶ:

ಲಸಿಕೆ ಪಡೆಯಲು ಇಚ್ಛಿಸುವವರು ಯು ವಿನ್‌ ಲಸಿಕೆ ವೆಬ್‌ಸೈಟ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದು.  ವೆಬ್‌ಸೈಟ್‌ ಮೂಲಕ ನೋಂದಣಿ ಮಾಡಿಕೊಂಡರೆ ಮುಂದಿನ ಲಸಿಕಾ ದಿನಾಂಕದ ಕುರಿತು ಸಂದೇಶ ಹೋಗುತ್ತದೆ.
ಎನ್‌ಎಫ್‌ಎಚ್‌ಎಸ್‌ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಶೇ.84.1ರಷ್ಟು ಮಕ್ಕಳಲ್ಲಿ ದಡಾರ ರುಬೆಲ್ಲಾ-1, ಶೇ.93ರಷ್ಟುಮಕ್ಕಳಲ್ಲಿ ದಡಾರ ರುಬೆಲ್ಲಾ-2 ಲಸಿಕೆ ನೀಡಲಾಗಿದೆ. ಈ ಪ್ರಮಾಣವನ್ನು ಮತ್ತಷ್ಟುಹೆಚ್ಚಳ ಮಾಡಲು ಕೆಲಸ ಮಾಡುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

Follow Us:
Download App:
  • android
  • ios