ಸ್ವಾತಂತ್ರ್ಯ ಗಳಿಸಿ ಒಂದು ನೂರು ವರ್ಷಗಳು ಪೂರ್ಣಗೊಳ್ಳುವ 2047ರ ಅಮೃತ ಕಾಲದ ವೇಳೆಗೆ ಭಾರತವು ಶ್ರೀಮಂತ ಹಾಗೂ ಸದೃಢ ರಾಷ್ಟ್ರವಾಗಬೇಕು: ರಾಷ್ಟ್ರಪತಿ ದ್ರೌಪದಿ ಮುರ್ಮು 

ಬೆಂಗಳೂರು(ಸೆ. 28): ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹಯೋಗದಲ್ಲಿ ದೇಶದ ಮೊದಲ ‘ಏಕೀಕೃತ ಕ್ರಯೋಜೆನಿಕ್‌ ಎಂಜಿನ್‌ ಉತ್ಪಾದನೆ ಕೇಂದ್ರ’ ಸ್ಥಾಪಿಸುವ ಮೂಲಕ ಈ ಸೌಲಭ್ಯ ಹೊಂದಿರುವ ವಿಶ್ವದ ಆರನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ದೇಶವು ಅಮೃತ ಕಾಲದತ್ತ ದಾಪುಗಾಲು ಇಡಲು ಎಚ್‌ಎಎಲ್‌, ಇಸ್ರೋ ನೆರವಾಗಲಿದ್ದು, 2047ರ ವೇಳೆಗೆ ಭಾರತವನ್ನು ವಿಶ್ವದ ಪ್ರಬಲ ಹಾಗೂ ಶ್ರೀಮಂತ ರಾಷ್ಟ್ರವನ್ನಾಗಿ ಮಾಡಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ ನೀಡಿದ್ದಾರೆ.

ಬೆಂಗಳೂರಿನ ಎಚ್‌ಎಎಲ್‌ ಕೇಂದ್ರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಇಸ್ರೋಗಾಗಿ ಎಚ್‌ಎಎಲ್‌ ನಿರ್ಮಿಸಿರುವ ‘ಏಕೀಕೃತ ಕ್ರಯೋಜೆನಿಕ್‌ ರಾಕೆಟ್‌ ಎಂಜಿನ್‌ ಉತ್ಪಾದನೆ ಕೇಂದ್ರ’ (ಐಸಿಎಂಎಫ್‌) ಲೋಕಾರ್ಪಣೆ ಹಾಗೂ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನಿರ್ಮಾಣಗೊಳ್ಳಲಿರುವ ದಕ್ಷಿಣ ವಲಯದ ರಾಷ್ಟ್ರೀಯ ವೈರಾಣು ಸಂಸ್ಥೆಯ ಪ್ರಯೋಗಾಲಯ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

HAL ನಿಂದ ಒಂದೇ ಸೂರಿನಡಿ ರಾಕೆಟ್‌ ಎಂಜಿನ್‌ ಉತ್ಪಾದನೆ

ಸ್ವಾತಂತ್ರ್ಯ ಗಳಿಸಿ ಒಂದು ನೂರು ವರ್ಷಗಳು ಪೂರ್ಣಗೊಳ್ಳುವ 2047ರ ಅಮೃತ ಕಾಲದ ವೇಳೆಗೆ ಭಾರತವು ಶ್ರೀಮಂತ ಹಾಗೂ ಸದೃಢ ರಾಷ್ಟ್ರವಾಗಬೇಕು. ಇಸ್ರೋ ಹಾಗೂ ಎಚ್‌ಎಎಲ್‌ ಭವ್ಯ ಇತಿಹಾಸ ನೋಡಿದರೆ ಅಮೃತ ಕಾಲಕ್ಕೆ ತಲುಪಲು ಇವು ನೆರವಾಗುವ ವಿಶ್ವಾಸವಿದೆ. ಸಂಶೋಧನೆ, ಅಭಿವೃದ್ಧಿ ಹಾಗೂ ಉತ್ಪಾದನೆ ಕ್ಷೇತ್ರದಲ್ಲಿ ಮತ್ತೊಮ್ಮೆ ಅವುಗಳ ಸಾಮರ್ಥ್ಯ ತೋರಿಸಬೇಕಾದ ಸಮಯ ಬಂದಿದೆ. ಇದೇ ರೀತಿ ಎಲ್ಲರೂ ಸೇರಿ ದೇಶವನ್ನು ಸದೃಢಗೊಳಿಸಲು ನೆರವಾಗಬೇಕು ಎಂದು ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದು, ದೇಶವನ್ನು ನೋಡುವ ಕಲ್ಪನೆ ಬದಲಾಗಿದೆ. 25 ವರ್ಷಗಳ ಹಿಂದೆ ದೇಶ ಈ ರೀತಿ ಆಗಲಿದೆ ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ಕಳೆದ 25 ವರ್ಷದಲ್ಲಿ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ (ಕೃತಕ ಬುದ್ಧಿಮತ್ತೆ) ಹಾಗೂ ಸ್ವಯಂ ಚಾಲಿತ ತಂತ್ರಜ್ಞಾನಗಳು ನಮ್ಮ ಭವಿಷ್ಯವನ್ನೇ ಪರಿವರ್ತಿಸಿವೆ. ಮುಂದಿನ 25 ವರ್ಷಗಳಲ್ಲಿ ವಿಶ್ವ ಹೇಗಾಗಲಿದೆ ಎಂಬುದನ್ನು ಮರು ಕಲ್ಪನೆ ಮಾಡಿಕೊಂಡು ಭಾರತವನ್ನು ಅಭಿವೃದ್ಧಿ ರಾಷ್ಟ್ರವನ್ನಾಗಿಸಲು ಶ್ರಮವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.

ದೈನಂದಿನ ಬದುಕಿಗೆ ಉಪಗ್ರಹ ದಿಕ್ಸೂಚಿ:

ಇಸ್ರೋ ಉಪಗ್ರಹಗಳು ರಕ್ಷಣಾ ಮತ್ತು ಸಂವಹನ ಕ್ಷೇತ್ರಗಳು ಮಾತ್ರವಲ್ಲದೇ, ಹವಾಮಾನ ಮುನ್ಸೂಚನೆ ನೀಡಿ ಜನಸಾಮಾನ್ಯರ ದೈನಂದಿನ ಬದುಕಿಗೆ ದಿಕ್ಸೂಚಿಯಾಗಿವೆ. ಅದೇ ರೀತಿ ಎಚ್‌ಎಎಲ್‌ ದೇಶದ ಭದ್ರತೆ ಮತ್ತು ಅಭಿವೃದ್ಧಿಗೆ ರಕ್ಷಣಾ ಉಪಕರಣಗಳನ್ನು ತಯಾರಿಸಿ ವಿಶೇಷ ಕೊಡುಗೆ ನೀಡಿದೆ. ರಕ್ಷಣಾ ಪಡೆಗಳ ಹಿಂದೆ ಬೆಂಬಲವಾಗಿ ಇರುವ ಎಚ್‌ಎಎಲ್‌ ರಕ್ಷಣಾ ಪಡೆಗಳ ರಕ್ಷಣಾ ಪಡೆಯೇ ಆಗಿದೆ ಎಂದು ಕೊಂಡಾಡಿದರು.

ಕೊರೋನಾ ನಿಯಂತ್ರಣದಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳನ್ನು ಹಿಂದಿಕ್ಕಿದೆ. ಯುದ್ಧೋಪಾದಿಯಲ್ಲಿ ಪ್ರಯೋಗಾಲಯಗಳನ್ನು ಸ್ಥಾಪಿಸಿ ಜನರ ಆರೋಗ್ಯ ರಕ್ಷಣೆ ಮಾಡಿದೆ. ಇದೇ ರೀತಿ ಬೆಂಗಳೂರಿನಲ್ಲಿ ವೈರಾಣು ಸಂಶೋಧನೆ ಸಂಸ್ಥೆ ಸ್ಥಾಪನೆಯಾಗುತ್ತಿದ್ದು, ಇದು ದಕ್ಷಿಣ ಭಾರತದಲ್ಲಿ ಯಾವುದೇ ಸಾಂಕ್ರಾಮಿಕ ಹರಡಿದರೂ ಪ್ರಾರಂಭದಲ್ಲೇ ಪತ್ತೆ ಮಾಡಿ ನಿಗ್ರಹಿಸಲು ನೆರವಾಗಲಿದೆ ಎಂದರು.

ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಖಾತೆ ಸಚಿವರಾದ ಡಾ. ಭಾರತಿ ಪ್ರವೀಣ್‌ ಪವಾರ್‌ ಮಾತನಾಡಿ, ಬೆಂಗಳೂರಿನಲ್ಲಿ ಇಂದು ಶಂಕುಸ್ಥಾಪನೆಗೊಂಡ ರಾಷ್ಟ್ರೀಯ ವೈರಾಣು ಸಂಸ್ಥೆಯ ದಕ್ಷಿಣ ವಲಯದ ಪ್ರಯೋಗಾಲಯವು ಮಂಗನ ಕಾಯಿಲೆ, ಚಿಕುನ್‌ ಗುನ್ಯಾನಂತಹ ಕಾಯಿಲೆಗಳಿಗೆ ಕಾರಣವಾಗುವ ವೈರಾಣುಗಳ ಪತ್ತೆ ಹಚ್ಚುವಿಕೆ ಹಾಗೂ ನಿಯಂತ್ರಣಕ್ಕೆ ಕಣ್ಗಾವಲು ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಅಧ್ಯಕ್ಷ ಎಸ್‌. ಸೋಮನಾಥ್‌, ಈವರೆಗೆ ಇಸ್ರೋ ಸತತವಾಗಿ ಎಚ್‌ಎಎಲ್‌ ಜತೆ ಸಹಭಾಗಿತ್ವ ಸಾಧಿಸುತ್ತಾ ಬಂದಿದೆ. ಎರಡೂ ಸಂಸ್ಥೆಗಳು ಸೇರಿ 2023ರ ಮಾಚ್‌ರ್‍ ವೇಳೆಗೆ ಏಕೀಕೃತ ಘಟಕದಲ್ಲಿ ಮೊದಲ ಕ್ರಯೋಜೆನಿಕ್‌ ಎಂಜಿನ್‌ ಮಾಡೆಲ್‌ ಹೊರ ತರಲಿದ್ದೇವೆ ಎಂದು ಹೇಳಿದರು.

ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹಾಜರಿದ್ದರು.

4,500 ಚ.ಮೀ. ವಿಸ್ತೀರ್ಣದ ಕ್ರಯೋಜೆನಿಕ್‌ ಎಂಜಿನ್‌ ಕೇಂದ್ರ

ಎಚ್‌ಎಎಲ್‌ ಅಧ್ಯಕ್ಷ ಸಿ.ಬಿ. ಅನಂತ ಕೃಷ್ಣನ್‌ ಮಾತನಾಡಿ, 208 ಕೋಟಿ ರು. ವೆಚ್ಚದಲ್ಲಿ 4,500 ಚ.ಮೀ. ವಿಸ್ತೀರ್ಣದಲ್ಲಿ ಕೇಂದ್ರವನ್ನು ಸ್ಥಾಪಿಸಿದ್ದು, ಕ್ರಯೋಜೆನಿಕ್‌ ಎಂಜಿನ್‌ ಅನ್ನು ಒಂದೇ ಸೂರಿನಡಿ ಉತ್ಪಾದಿಸಲು ಅಗತ್ಯವಿರುವ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. 2013ರಲ್ಲೇ ಕ್ರಯೋಜೆನಿಕ್‌ ಎಂಜಿನ್‌ ಉತ್ಪಾದನಾ ಕೇಂದ್ರ ಸ್ಥಾಪನೆಗೆ ಇಸ್ರೋ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಘಟಕ, ಮಷಿನರಿ, ಪ್ರಯೋಗಾಲಯ ಎಲ್ಲವನ್ನೂ ಸ್ಥಾಪಿಸಿದ್ದು ಪ್ರಿ-ಪ್ರೊಡಕ್ಷನ್‌ ಶುರು ಮಾಡಿದ್ದೇವೆ. 2023ರ ಮಾಚ್‌ರ್‍ ವೇಳೆಗೆ ಕ್ರಯೋಜೆನಿಕ್‌ ಎಂಜಿನ್‌ ಮಾಡೆಲ್‌ ತಯಾರಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ ಪಾಲಿಕೆಯಿಂದ ರಾಷ್ಟ್ರಪತಿ ದ್ರೌಪದಿಗೆ ಪೌರಸನ್ಮಾನ

ಏನಿದು ಕ್ರಯೋಜೆನಿಕ್‌?

ಕ್ರಯೋಜೆನಿಕ್‌ ಎಂಜಿನ್‌ ಎಂಬುದು ಅತ್ಯುತ್ತಮ ಸಾಮರ್ಥ್ಯದ ರಾಕೆಟ್‌ ಎಂಜಿನ್‌ ಆಗಿದ್ದು, ಕ್ರಯೋಜೆನಿಕ್‌ ಇಂಧನ ಹಾಗೂ ಆಕ್ಸಿಡೈಜರ್‌ ಎಂಬ ಎರಡು ಲಿಕ್ವಿಡ್‌ ಗ್ಯಾಸ್‌ನಿಂದ ಚಾಲನೆಯಾಗುತ್ತದೆ. ಹೀಗಾಗಿ ಅತ್ಯಂತ ಕನಿಷ್ಠ ತಾಪಮಾನದಲ್ಲೂ ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲದು.

2015ರಲ್ಲೇ ಒಡಿಶಾದ ಮಹೇಂದ್ರಗಿರಿಯಲ್ಲಿ ನಡೆದ ಪ್ರಾಯೋಗಿಕ ಕ್ರಯೋಜೆನಿಕ್‌ ಎಂಜಿನ್‌ ಉತ್ಪಾದನೆಯಲ್ಲಿ ಇಸ್ರೋ ಯಶಸ್ವಿಯಾಗಿದೆ. 2017ರಲ್ಲಿ ಎಂಕೆ-3 ಮೂಲಕ ಯಶಸ್ವಿ ಪ್ರಯೋಗವೂ ಆಗಿದೆ. ಇದೀಗ ಒಂದೇ ಸೂರಿನಡಿ 70 ಹೈಟೆಕ್‌ ಉಪಕರಣಗಳನ್ನು ಅಳವಡಿಸಿ ಸಂಪೂರ್ಣ ಸ್ವಾವಲಂಬಿಯಾಗಿ ಉತ್ಪಾದನೆ ಮಾಡುತ್ತಿರುವುದು ಮೊದಲು. ಹೊಸ ಕೇಂದ್ರದಲ್ಲಿ ಸಿಇ-20 ಕ್ರಯೋಜೆನಿಕ್‌ ಎಂಜಿನ್‌ ಹಾಗೂ ಎಸ್‌ಸಿಇ-2000 ಸೆಮಿ ಕ್ರಯೋಜೆನಿಕ್‌ ಉತ್ಪಾದಿಸಲು ಉದ್ದೇಶಿಸಿದ್ದು, ರಷ್ಯಾ, ಅಮೆರಿಕ, ಫ್ರಾನ್ಸ್‌, ಜಪಾನ್‌, ಚೀನಾ ಬಳಿಕ ಏಕೀಕೃತ ವ್ಯವಸ್ಥೆ ಹೊಂದಿರುವ ಆರನೇ ದೇಶವಾಗಿ ಹೆಸರು ದಾಖಲೆ ನಿರ್ಮಿಸಿದೆ.

ಏನಿದರ ವಿಶೇಷ?

- ಒಂದೇ ಸೂರಿನಡಿ ಇಡೀ ಕ್ರಯೋಜೆನಿಕ್‌ ರಾಕೆಟ್‌ ಎಂಜಿನ್‌ ಉತ್ಪಾದನೆ
- ಅತ್ಯಂತ ಕನಿಷ್ಠ ತಾಪಮಾನದಲ್ಲೂ ಕಾರ‍್ಯನಿರ್ವಹಿಸುವ ವಿಶಿಷ್ಟಎಂಜಿನ್‌
- 70 ಹೈಟೆಕ್‌ ಉಪಕರಣಗಳನ್ನು ಅಳವಡಿಸಿ ಸ್ವದೇಶದಲ್ಲೇ ಉತ್ಪಾದನೆ