Asianet Suvarna News Asianet Suvarna News

ಹುಬ್ಬಳ್ಳಿ ಪಾಲಿಕೆಯಿಂದ ರಾಷ್ಟ್ರಪತಿ ದ್ರೌಪದಿಗೆ ಪೌರಸನ್ಮಾನ

  • ಹುಬ್ಬಳ್ಳಿ ಪಾಲಿಕೆಯಿಂದ ರಾಷ್ಟ್ರಪತಿ ದ್ರೌಪದಿಗೆ ಪೌರಸನ್ಮಾನ
  • ಗೌರವ ಸಮರ್ಪಣೆ
  • 35 ವರ್ಷದ ಹಿಂದೆ ರಾಷ್ಟ್ರಪತಿ ಗ್ಯಾನಿ ಜೈಲ್‌ಸಿಂಗ್‌ ಅವರಿಗೆ ಪೌರಸನ್ಮಾನ ಮಾಡಿದ್ದ ಹು-ಧಾ ಮಹಾನಗರ ಪಾಲಿಕೆ
  • 2047ರ ಹೊತ್ತಿಗೆ ಭಾರತ ಆತ್ಮನಿರ್ಭರ ದೇಶ
  • ನನಗೆ ಸಂದ ಸನ್ಮಾನ ದೇಶದ ಹೆಣ್ಮಕ್ಕಳಿಗೆ ಸಂದ ಗೌರವ: ಮುರ್ಮು
President Draupadi was honored by the Hubli Corporation rav
Author
First Published Sep 27, 2022, 8:59 AM IST

ಹುಬ್ಬಳ್ಳಿ (ಸೆ.27) : ದೇಶದ ಅತ್ಯುನ್ನತ ಹುದ್ದೆಗೇರಿದ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸೋಮವಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಅದ್ಧೂರಿಯಾಗಿ ಪೌರ ಸನ್ಮಾನ ಮಾಡಲಾಯಿತು. ಇಲ್ಲಿನ ಜಿಮ್‌ಖಾನಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರೂಢರ ಬೆಳ್ಳಿ ಪ್ರತಿಮೆ, ಬಿನ್ನವತ್ತಳೆ, ಏಲಕ್ಕಿ ಹಾರ, ಶ್ರೀ ಸಿದ್ಧಾರೂಢರ ಮಹಾತ್ಮೆ ಕುರಿತ ಆಂಗ್ಲ ಮತ್ತು ಹಿಂದಿ ಭಾಷೆಯ ಗ್ರಂಥಗಳು, ಧಾರವಾಡ ಪೇಡೆ ನೀಡಿ ಮುರ್ಮು ಅವರನ್ನು ಗೌರವಿಸಲಾಯಿತು.

ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ದೇವದಾಸಿಯರು ಹೊಲಿದಿದ್ದ ಕವದಿಯನ್ನು ಗಿಫ್ಟ್​​ಕೊಟ್ಟ ಸುಧಾಮೂರ್ತಿ​

ಸನ್ಮಾನ ಸ್ವೀಕರಿಸಿ ಮಾತನಾಡಿದ ದ್ರೌಪದಿ ಮುರ್ಮು ಅವರು, ದೇಶವು 2047ರ ಹೊತ್ತಿಗೆ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವ ಆಚರಿಸಲಿದೆ. ಆ ಹೊತ್ತಿಗೆ ಭಾರತವು ಅಭಿವೃದ್ಧಿ ಹೊಂದಿದ, ಆತ್ಮನಿರ್ಭರ ದೇಶವಾಗಿ ಹೊರಹೊಮ್ಮಲಿದೆ. ಇದಕ್ಕಾಗಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುವ ಈ ಸಂದರ್ಭದಲ್ಲಿ ಎಲ್ಲರೂ ಸಂಕಲ್ಪ ಮಾಡೋಣ ಎಂದರು.

ಹುಬ್ಬಳ್ಳಿ-ಧಾರವಾಡ ಜನರ ಪ್ರೀತಿ ನನ್ನನ್ನು ಪುಳಕಿತಗೊಳಿಸಿದೆ. ಒಡಿಶಾದ ಸಾಮಾನ್ಯ ಮಹಿಳೆಯಾದ ನನಗೆ ಇಲ್ಲಿ ಪೌರಸನ್ಮಾನ ಸಿಗುತ್ತಿರುವುದು ಅತ್ಯಂತ ಖುಷಿಯ ವಿಚಾರ. ಇದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ಇದು ಭಾರತದ ರಾಷ್ಟ್ರಪತಿಗೆ ಸಂದ ಸನ್ಮಾನ ಮಾತ್ರವಲ್ಲ, ಇಡೀ ದೇಶದ ಹೆಣ್ಣಮಕ್ಕಳಿಗೆ ಸಂದ ಸನ್ಮಾನ ಎಂದರು.

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ಕರ್ನಾಟಕ ಮಾತ್ರವಲ್ಲ. ಸಮಗ್ರ ಭಾರತದ ಸಾಂಸ್ಕೃತಿಕ, ಐತಿಹಾಸಿಕ ನಗರಗಳಾಗಿವೆ. ಆಧ್ಯಾತ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ವೈಜ್ಞಾನಿಕತೆ, ಆಧುನಿಕತೆ ಮೈಗೂಡಿಸಿಕೊಂಡು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಮಹಾನಗರದಲ್ಲಿ ಕನ್ನಡ, ಮರಾಠಿ ಭಾಷೆಗಳ ಅದ್ಭುತ ಸಮ್ಮಿಲನವಿದೆ. ಮುಖ್ಯಮಂತ್ರಿ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಕೂಡ ಇಲ್ಲೇ ಹುಬ್ಬಳ್ಳಿ-ಧಾರವಾಡದಲ್ಲಿ ಆಡಿ ಬೆಳೆದವರು. ಅವರ ನೇತೃತ್ವದಲ್ಲಿ ಇನ್ನಷ್ಟುಅಭಿವೃದ್ಧಿಯಾಗಲಿ ಎಂದು ಆಶಿಸಿದರು.

ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಮೇಯರ್‌ ಈರೇಶ ಅಂಚಟಗೇರಿ, ಸಚಿವರು ಈ ವೇಳೆ ಹಾಜರಿದ್ದರು. ರಾಷ್ಟ್ರಪತಿ ಮುರ್ಮು ದ್ರೌಪದಿ ಅವರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯೋಜಿಸಿದ್ದ ಪೌರಸನ್ಮಾನ ಕಾರ್ಯಕ್ರಮದಲ್ಲಿ ಪುತ್ರಿ ಇತಿಶ್ರೀ ಮುರ್ಮು ಕೂಡ ಪಾಲ್ಗೊಂಡಿದ್ದು ವಿಶೇಷ. ವೇದಿಕೆಯ ಮುಂಭಾಗದಲ್ಲಿದ್ದ ವಿಶೇಷ ಆಸನದಲ್ಲಿ ಕೂತಿದ್ದ ಇತಿಶ್ರೀ ಅವರು ಕಾರ್ಯಕ್ರಮ ತಾಯಿಯ ಪೌರಸನ್ಮಾನವನ್ನು ಕಣ್ತುಂಬಿಕೊಂಡರು.

ಇಂದು ಹುಬ್ಬಳ್ಳಿಗೆ ರಾಷ್ಟ್ರಪತಿ, ಐಐಐಟಿ ಕ್ಯಾಂಪಸ್‌ ಉದ್ಘಾಟನೆ

35 ವರ್ಷಗಳ ಬಳಿಕ: ಈ ಹಿಂದೆ 1986-87ರಲ್ಲಿ ಪಾಲಿಕೆ ವತಿಯಿಂದ ಆಗಿನ ರಾಷ್ಟ್ರಪತಿ ಗ್ಯಾನಿಜೈಲ್‌ಸಿಂಗ್‌ ಅವರಿಗೆ ಪೌರಸನ್ಮಾನ ಸಲ್ಲಿಸಲಾಗಿತ್ತು. ಅದಾದ ಬಳಿಕ ಇದೀಗ 35 ವರ್ಷ ಬಳಿಕ ಮತ್ತೊಬ್ಬ ರಾಷ್ಟ್ರಪತಿ ಅವರಿಗೆ ಹು-ಧಾ. ಪಾಲಿಕೆಯಿಂದ ಪೌರಸನ್ಮಾನ ಮಾಡಲಾಗಿದೆ.

ಬೆಂಗಳೂರಿನಲ್ಲೂ ಇಂದು ಪೌರ ಸನ್ಮಾನ:

ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಗೆ ರಾಜ್ಯ ಸರ್ಕಾರದಿಂದ ಪೌರ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಸೋಮವಾರ ಸಂಜೆ ಬೆಂಗಳೂರು ನಗರಕ್ಕೆ ಆಗಮಿಸಿರುವ ರಾಷ್ಟ್ರಪತಿಯವರು ಮಂಗಳವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಪೌರ ಸನ್ಮಾನದಲ್ಲಿ ಪಾಲ್ಗೊಂಡು ಗೌರವ ಸ್ವೀಕರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ವಿಧಾನಸೌಧದ ಸಮ್ಮೇಳನ ಸಭಾಂಗಣವನ್ನು ಸಮಾರಂಭಕ್ಕಾಗಿ ಸಜ್ಜುಗೊಳಿಸಿದ್ದಾರೆ. ಜೊತೆಗೆ ಸುರಕ್ಷತೆ ಮತ್ತು ಭದ್ರತೆ ಹಿನ್ನೆಲೆಯಲ್ಲಿ ವಿಧಾನಸೌಧ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿರುವ ಎಲ್ಲ ಕಚೇರಿಗಳಿಗೆ ಸೆ.27ರಂದು ರಜೆ ಘೋಷಿಸಲಾಗಿದೆ.

ಇಂದಿನಿಂದ 3 ದಿನಗಳ ರಾಜ್ಯ ಪ್ರವಾಸ: 

ಮೈಸೂರು ದಸರಾಕ್ಕೆ ರಾಷ್ಟ್ರಪತಿಗಳಿಂದ ಚಾಲನೆ: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ. ಮುರ್ಮು ಅವರು 3 ದಿನಗಳ ಕಾಲ ರಾಜ್ಯ ಪ್ರವಾಸ ಮಾಡಲಿದ್ದಾರೆ.

ದಸರಾಕ್ಕೆ ಚಾಲನೆ: ರಾಷ್ಟ್ರಪತಿ ಮುರ್ಮು, ಸೋಮವಾರ ಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಉತ್ಸವವನ್ನು ಉದ್ಘಾಟಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ಧಾರವಾಡದಲ್ಲಿ ನೂತನವಾಗಿ ನಿರ್ಮಿಸಿರುವ ಭಾರತೀಯ ಮಾಹಿತಿ ತಂತ್ರಜ್ಞಾನÜ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ.

ಕ್ರಯೋಜನಿಕ್‌ ಘಟಕ: ಸೆ.27ರಂದು ಬೆಂಗಳೂರಿನಲ್ಲಿ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ನ ಸಂಯೋಜಿತ ಕ್ರಯೋಜನಿಕ್‌ ಎಂಜಿನ್‌ ಉತ್ಪಾದನಾ ಕೇಂದ್ರ ಉದ್ಘಾಟನೆ, ದಕ್ಷಿಣ ವಲಯದ ಸೂಕ್ಷ್ಮಾಣು ಜೀವಿ ರೋಗಗಳ ಅಧ್ಯಯನ ಕೇಂದ್ರದ ಕಟ್ಟಡ ನಿರ್ಮಾಣದ ಅಡಿಗಲ್ಲು ಹಾಕುವ ಕಾರ್ಯಕ್ರಮ, ಸೇಂಟ್‌ ಜೋಸೆಫ್‌ ವಿಶ್ವವಿದ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಆಯೋಜಿಸಿರುವ ನಾಗರಿಕ ಗೌರವ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಸೆ.28 ರಂದು ರಾಷ್ಟ್ರಪತಿಯವರು ದೆಹಲಿಗೆ ಹಿಂದಿರುಗಲಿದ್ದಾರೆ/

Follow Us:
Download App:
  • android
  • ios