ಕಾರವಾರ[ಡಿ.12]: ಕೈಗಾದ ಅಣು ವಿದ್ಯುತ್ 1ನೇ ಘಟಕ ವಿಶ್ವ ದಾಖಲೆ ಬರೆಯುವ ಮೂಲಕ ದೇಶದ ಪರಮಾಣು ವಿದ್ಯುತ್ ಕ್ಷೇತ್ರದಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ. ನಿರಂತರ ವಿದ್ಯುತ್ ಉತ್ಪಾದಿಸುವಲ್ಲಿ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವ ಕಲೆಯನ್ನು ಕರಗತಗೊಳಿಸಿದೆ.

ಕೈಗಾ ಸುತ್ತಮುತ್ತ ಉಳಿದೆಡೆಗಿಂತ ಕ್ಯಾನ್ಸರ್‌ ಕಡಿಮೆ

ಭಾನುವಾರ ಬೆಳಗ್ಗೆ ಬ್ರಿಟನ್‌ನ ಹೇಶಮ್ ಅಣು ವಿದ್ಯುತ್ ಘಟಕ ಹೊಂದಿದ್ದ ನಿರಂತರ 940 ದಿನಗಳ ವಿದ್ಯುತ್ ಉತ್ಪಾದನೆ ದಾಖಲೆಯನ್ನು ಅಳಿಸಿ ಹಾಕಿದ ಕೈಗಾದ ಒಂದನೇ ಘಟಕ ವಿಶ್ವ ದಾಖಲೆ ಬರೆದಿದೆ. ಹಾಗೆ ನೋಡಿದರೆ ದಾಖಲೆ ಮಾಡುವ ಉದ್ದೇಶ ಇರಲೆ ಇಲ್ಲ. ಕೈಗಾದಲ್ಲಿ ಕೈಗೊಂಡ ಸುರಕ್ಷಾ ಕ್ರಮದಿಂದಾಗಿ ಅಬಾಧಿತವಾಗಿ ವಿದ್ಯುತ್ ಉತ್ಪಾದಿಸಿ ದಾಖಲೆ ಬರೆಯುವಂತಾಗಿದೆ.

ಕೈಗಾ 5,6 ನೇ ಘಟಕಕ್ಕೆ ವೇದಿಕೆ ಸಿದ್ಧ, ಉತ್ತರಕನ್ನಡದಲ್ಲಿ ಮತ್ತೆ ಮರಗಳ ಮಾರಣಹೋಮ?

ಕೈಗಾ ಒಂದನೇ ಘಟಕ ನಿರ್ಮಾಣ ಹಂತದಲ್ಲೆ ಕಳಪೆ ಕಾಮಗಾರಿಯಿಂದ ಕುಸಿದು ಬಿದ್ದಾಗ ಇದರ ಸುರಕ್ಷತೆ, ವಿದ್ಯುತ್ ಉತ್ಪಾದನೆ ಬಗ್ಗೆ ದೇಶಾದ್ಯಂತ ಕಳವಳ ವ್ಯಕ್ತವಾಗಿತ್ತು. ನಂತರ ಘಟಕದ ಗುಮ್ಮಟ ಪುನರ್ ನಿರ್ಮಾಣಗೊಂಡಿತು. ಅಂದಿನ ಪ್ರಧಾನಿ ದಿ.ವಾಜಪೇಯಿ ಘಟಕವನ್ನು ಲೋಕಾರ್ಪಣೆಗೊಳಿಸಿದ್ದರು. ಈಗ ಅದೆ ಘಟಕ ಅಣು ವಿದ್ಯುತ್ ಕ್ಷೇತ್ರದಲ್ಲಿ ಭಾರತದ ಹೆಮ್ಮೆಗೆ ಕಾರಣವಾಗಿದೆ.

ವಿಶ್ವ ದಾಖಲೆ ಹೇಗೆ ಸಾಧ್ಯವಾಯ್ತು?

ಮೂವರು ಹಿರಿಯ ಎಂಜಿನಿಯರ್‌ಗಳು ದಿನದ 24 ಗಂಟೆಯೂ ನಿರಂತರವಾಗಿ ಸರದಿಯ ಮೇಲೆ ನಿಗಾ ಇಟ್ಟಿದ್ದರು. ಅಣು ಅಣು ಇಂಧನ, ವಿಕಿರಣ, ಉಷ್ಣತೆ, ರಿಯಾಕ್ಟರ್ ಆಯಿಲ್‌ನಲ್ಲಿ ಬದಲಾವಣೆ, ವಿದ್ಯುತ್ ಉತ್ಪಾದನೆ ಹೀಗೆ ಹದ್ದಿನಗಣ್ಣಿನಿಂದ ಎಲ್ಲವನ್ನೂ ನೋಡುತ್ತಿದ್ದರು. ಇವೆಲ್ಲವುಗಳ ಪ್ಯಾರಾಮೀಟರ್‌ನಲ್ಲಿ ಕಿಂಚಿತ್ತು ಬದಲಾವಣೆ ಆದರೂ ಅವುಗಳ ನಿರ್ವಹಣೆ ಮಾಡಬೇಕು. ಇಲ್ಲದಿದ್ದಲ್ಲಿ ಘಟಕ ತನ್ನಿಂದ ತಾನೆ ಸ್ಥಗಿತ (ಶಟ್ ಡೌನ್)ಆಗುತ್ತದೆ.

ಕೈಗಾ ಅಣು ವಿದ್ಯುತ್ ಘಟಕದಲ್ಲಿ ವಿಶ್ವದಾಖಲೆ

ಇದರ ಜತೆಗೆ ಒಂದನೆ ಘಟಕದ ನಿರ್ವಹಣೆ ಕಾಮಗಾರಿಯನ್ನು 2016ರಲ್ಲಿ ಅಚ್ಚುಕಟ್ಟಾಗಿ ಕೈಗೊಳ್ಳಲಾಗಿತ್ತು. ನಮ್ಮದೆ ತಂತ್ರಜ್ಞರು, ಅಣು ವಿಜ್ಞಾನಿಗಳು ಮುತುವರ್ಜಿಯಿಂದ ನಿರ್ವಹಣೆ ಮಾಡಿ ವಿದ್ಯುತ್ ಉತ್ಪಾದನೆಗೆ ಅಣಿಗೊಳಿಸಿದ್ದರು. ಅಟೋಮಿಕ್ ಎನರ್ಜಿ ರೆಗ್ಯುಲೇಟರಿ ಬೋರ್ಡನಿಂದ ಹಠಾತ್ತಾಗಿ ಪರಿಶೀಲನೆಗೆ ಆಗಾಗ ಬಂದವರೂ ಘಟಕದ ಕಾರ್ಯನಿರ್ವಹಣೆಗೆ ಮೆಚ್ಚುಗೆ ಸೂಚಿಸಿದ್ದರು.

ಹೆಚ್ಚಿದ ಆತ್ಮಸ್ಥೈರ್ಯ:

ಎರಡು ದಶಕದ ಹಿಂದೆ ಭಾರತದಲ್ಲಿ ಅಣು ವಿದ್ಯುತ್ ಅಂಬೆಗಾಲಿಡುತ್ತಿತ್ತು. ದೇಶಾದ್ಯಂತ ಅಣು ವಿದ್ಯುತ್ ಸ್ಥಾವರಗಳ ವಿರುದ್ಧ ಪ್ರತಿಭಟನೆಯ ಕಾವೂ ಜೋರಾಗಿತ್ತು. ಒಂದೆಡೆ ಸುರಕ್ಷತೆ, ಇನ್ನೊಂದೆಡೆ ಪ್ರತಿಭಟನೆಯ ಬಿಸಿ. ಮತ್ತೊಂದೆಡೆ ತಂತ್ರಜ್ಞಾನಕ್ಕಾಗಿ ವಿದೇಶಿ ಅವಲಂಬನೆ. ಇವುಗಳ ನಡುವೆ ಪರಮಾಣು ಸ್ಥಾವರಗಳನ್ನು ಕಟ್ಟಿ ನಿಲ್ಲಿಸುವುದೆ ಸವಾಲಾಗಿತ್ತು. ಈಗ ಅಣು ವಿದ್ಯುತ್ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿರುವ ಭಾರತ ಜಗತ್ತಿನ ಮುಂದುವರಿದ ದೇಶಗಳಿಗೆ ಸರಿಸಾಟಿಯಾಗಿ ನಿಂತಿದೆ.

ಕೈಗಾ ಅಣು ಸ್ಥಾವರದ ವಿಕಿರಣದಿಂದಲೇ ಹರಡುತ್ತಿದೆಯಾ ಕ್ಯಾನ್ಸರ್?

ನಿರಂತರ ೯೪೧ ದಿನಗಳ ಕಾಲ ವಿದ್ಯುತ್ ಉತ್ಪಾದಿಸಿದ ಜಾಗತಿಕ ದಾಖಲೆಯನ್ನೂ ತನ್ನದಾಗಿಸಿಕೊಂಡಿದೆ. ಇದು ದೇಶದ ಅಣು ವಿದ್ಯುತ್ ಕ್ಷೇತ್ರದಲ್ಲಿ ವಿಜ್ಞಾನಿ, ತಂತ್ರಜ್ಞಾನಿಗಳು ಆ ಮೂಲಕ ಸರ್ಕಾರ, ದೇಶದ ಆತ್ಮಸ್ಥೈರ್ಯವನ್ನು ಹೆಚ್ಚಿಸಿದಂತಾಗಿದೆ.

ಮೋದಿ, ಕೋವಿಂದ್ ಪ್ರಶಂಸೆ:

ಕೈಗಾದ ಸಾಧನೆಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ, ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಕೈಗಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.