ಪಿಇಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಎಂ.ಆರ್. ದೊರೆಸ್ವಾಮಿ ಅವರು ನಿಧನರಾಗಿದ್ದಾರೆ. ಅವರ ನಿಧನದಿಂದ ಪಿಇಎಸ್ ವಿಶ್ವವಿದ್ಯಾಲಯಕ್ಕೆ ದೊಡ್ಡ ನಷ್ಟವಾಗಿದೆ. ನಾಳೆ ವಿಶ್ವವಿದ್ಯಾಲಯದ ಎಲ್ಲಾ ತರಗತಿಗಳನ್ನು ರದ್ದುಗೊಳಿಸಲಾಗಿದೆ.

ಬೆಂಗಳೂರು (ಮಾ.06): ಕರ್ನಾಟಕದ ಶಿಕ್ಷಣದ ಖ್ಯಾತಿಯನ್ನು ಜಾಗತಿಕ ಮಟ್ಟದಲ್ಲಿ ಸಾರಲು ಸಾಧ್ಯವಾಗುವಂತಹ ಪಿಇಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಹಾಗೂ ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಆರ್. ದೊರೆಸ್ವಾಮಿ ಗುರುವಾರ ಸಂಜೆ ನಿಧನರಾಗಿದ್ದಾರೆ.

ಈ ಬಗ್ಗೆ ಪೀಪಲ್ಸ್ ಎಜುಕೇಷನ್ ಸೊಸೈಟಿ (ಪಿಇಎಸ್) ಶಿಕ್ಷಣ ಸಂಸ್ಥೆ ಮೂಲಗಳ ಮಾಹಿತಿ ಪ್ರಕಾರ ಪಿಇಎಸ್ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಂ.ಆರ್. ದೊರೆಸ್ವಾಮಿ (89) ಅವರು ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ಸ್ವಗೃಹದಲ್ಲಿ ಗುರುವಾರ (ಮಾ.06)ನಿಧನರಾಗಿದ್ದಾರೆ. ಈ ಮೂಲಕ ಪತ್ನಿ, ಇಬ್ಬರು ಮಕ್ಕಳು ಹಾಗೂ 4 ಮೊಮ್ಮಕ್ಕಳನ್ನು ಅಗಲಿದ್ದಾರೆ. ಶುಕ್ರವಾರ ಮಧ್ಯಾಹ್ನದವರೆಗೆ ಸ್ವ-ಗೃಹದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ನಾಳೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪ್ರಮುಖ ಗಣ್ಯರು ದೊರೆಸ್ವಾಮಿ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ನಾಳೆ ಪಿಇಎಸ್ ವಿಶ್ವವಿದ್ಯಾಲಯದ ಎಲ್ಲಾ ತರಗತಿಗಳನ್ನು ರದ್ದುಗೊಳಿಸಲಾಗಿದೆ.

ಬೆಂಗಳೂರಿನ ಗವಿಪುರ ಗುಟ್ಟಹಳ್ಳಿಯಲ್ಲಿ ಕಳೆದ 5 ದಶಕಗಳ ಹಿಂದೆ 'ತಾತ್ಕಾಲಿಕ ಕಟ್ಟಡವೊಂದರಲ್ಲಿ ಕೇವಲ 45 ವಿದ್ಯಾರ್ಥಿಗಳೊಂದಿಗೆ ಪಿಯು ಕಾಲೇಜು ಆರಂಭಿಸಿದ ಎಂ.ಆರ್. ದೊರೆಸ್ವಾಮಿ ಅವರು, ಪೀಪಲ್ಸ್ ಎಜುಕೇಷನ್ ಸೊಸೈಟಿ (ಪಿಇಎಸ್) ಎಂಬ ಬ್ರ್ಯಾಂಡ್ ಮೂಲಕ ದೊಡ್ಡ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಇತ್ತೀಚಿನ ಕೆಲವು ವರ್ಷಗಳಿಂದ ಪಿಇಎಸ್ ಶಿಕ್ಷಣ ಸಂಸ್ಥೆಯು ದೇಶ-ವಿದೇಶಗಳಲ್ಲಿ ಛಾಪು ಮೂಡಿಸಿರುವ ಶೈಕ್ಷಣಿಕ ಸಂಸ್ಥೆಗಳ ಸಾಲಿನಲ್ಲಿ ಒಂದಾಗಿ ಹೊರಹೊಮ್ಮಿದೆ. ಆದರೆ, ಇದೀಗ ಶಿಕ್ಷಣ ಸಂಸ್ಥೆ ಸಂಸ್ಥಾಪಕನನ್ನು ಕಳೆದುಕೊಂಡಿದೆ.

ಇದನ್ನೂ ಓದಿ: ಪಿಇಎಸ್‌ ಶೈಕ್ಷಣಿಕ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗೆ ದಾರಿದೀಪ: ಶಿಕ್ಷಣ ಹರಿಕಾರ ದೊರೆಸ್ವಾಮಿಗಿಂದು 87ರ ಸಂಭ್ರಮ

ದೊರೆಸ್ವಾಮಿ ಅವರ ಹಿನ್ನೆಲೆ:
ಮೂಲತಃ ಆಂಧ್ರಪ್ರದೇಶ ರಾಜ್ಯದ ಚಿಕ್ಕ ಗ್ರಾಮ ಚಿತ್ತೂರಿನ ಕೃಷಿ ಕಟುಂಬದಲ್ಲಿ 1937ರಲ್ಲಿ ಮೇದರಪಟ್ಲ ರಾಮನಾಯ್ಡು ದೊರೆಸ್ವಾಮಿ ಜನಿಸಿದ್ದಾರೆ. ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಪಡೆದು, ಇಲ್ಲಿಯೇ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿದ್ದಾರೆ. ನಂತರ ಖಾಸಗಿ ಕಾಲೇಜು ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿ ಅನುಭವ ಪಡೆದು, ಅಲ್ಲಿಂದ ಹೊರಬಂದು ಪಿಇಎಸ್ ಶಿಕ್ಷಣ ಸಂಸ್ಥೆ ಆರಂಭಿಸಿದರು. ಅದನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಾ ಪಿಇಎಸ್ ವಿಶ್ವವಿದ್ಯಾಲಯವಾಗಿ ಬೆಳೆಸಿದ್ದಾರೆ. 

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ 2013ರಲ್ಲಿ ದೊರೆಸ್ವಾಮಿ ವಿಧಾನ ಪರಿಷತ್ ಸದಸ್ಯರಾಗಿ ನೇಮಕವಾದರು. ನಂತರ ರಾಜ್ಯ ಸರ್ಕಾರದಲ್ಲಿ ಉನ್ನತ ಶಿಕ್ಷಣಗಳ ಸುಧಾರಣಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದಲ್ಲಿ ಉನ್ನತ ಶಿಕ್ಷಣದಲ್ಲಿ ತರಬೇಕಾದ ಅಮೂಲಾಗ್ರ ಬದಲಾವಣೆಗಳ ಬಗ್ಗೆಯೂ ಸಲಹೆ ನೀಡಿದ್ದರು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ರಾಜ್ಯದಲ್ಲಿ ಶಾಸಕರು ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡುವ ಯೋಜನೆಯ ಜಾರಿಗೆ ಕಾರಣೀಭೂರತಾಗಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಖಾಸಗಿ ಸ್ಕೂಲ್‌ನ ಸೌಲಭ್ಯಗಳು ದೊರಕಬೇಕು: ದೊರೆಸ್ವಾಮಿ

ಪಿಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಎಲ್ಲ ವಿಧದ ಕೋರ್ಸುಗಳನ್ನು ಆರಂಭಿಸಿದ್ದು, ಕಳೆದ ವರ್ಷ ಅವರ ಬಹುಕಾಲದ ಅಭಿಲಾಷೆಯಂತೆ ಮೆಡಿಕಲ್ ಕಾಲೇಜು ಕೂಡ ಆರಂಭಿಸಿದ್ದಾರೆ. ಪಿಇಎಸ್ ಶಿಕ್ಷಣ ಸಂಸ್ಥೆಯ ಬಡ ವಿದ್ಯಾರ್ಥಿಗಳಿವೆ ವಿದ್ಯಾರ್ಥಿ ವೇತನ ಕುಡ ನೀಡಿದ್ದಾರೆ. ಪಿಇಎಸ್ ಶಿಕ್ಷಣ ಸಂಸ್ಥೆಯ ಸಿಎಸ್‌ಆರ್ ಯೋಜನೆ ಅಡಿಯಲ್ಲಿ ಉತ್ತರ ಕರ್ನಾಟಕದ ಸರ್ಕಾರಿ ಶಾಲೆಗಳನ್ನು ಮರು ನಿರ್ಮಾಣ ಮಾಡಿದ್ದಾರೆ. ಹಲವು ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡಿದ್ದಾರೆ. ಶಿಕ್ಷನ ಕ್ಷೇತ್ರಕ್ಕೆ ಅಮೂಲಾಗ್ರ ಸೇವೆಗೆ ರಾಜ್ಯ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಲಭಿಸಿವೆ. ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.