Asianet Suvarna News Asianet Suvarna News

ಸುಳ್ಳು ಸುದ್ದಿ ಹರಡ್ತೀಯಾ ಶೇಮ್ ಆನ್ ಯು ಸೂರ್ಯ ಎಂದ ಸಿದ್ದರಾಮಯ್ಯ: ನಾನು ಸತ್ಯವಂತನೆಂದ ತೇಜಸ್ವಿ ಸೂರ್ಯ

ಹುತಾತ್ಮ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ಸರ್ಕಾರ ಘೋಷಣೆ ಮಾಡಿದ 50 ಲಕ್ಷ ರೂ. ಪರಿಹಾರ ವಿತರಣೆ ಕುರಿತು ಸಿಎಂ ಸಿದ್ದರಾಮಯ್ಯ, ಸಂಸದ ತೇಜಸ್ವಿ ಸೂರ್ಯ ನಡುವೆ ರಾಜಕೀಯ ವಾಕ್ಸಮರ ಆರಂಭವಾಗಿದೆ. 

Indian Army captain Pranjal died from terror firing and Karnataka govt given Rs 50 lakh compensation sat
Author
First Published Dec 5, 2023, 6:50 PM IST

ಬೆಂಗಳೂರು (ಡಿ.05): ಕಳೆದ 15 ದಿನಗಳ ಹಿಂದೆ ಕಾಶ್ಮೀರದಲ್ಲಿ ನಡೆದ ಉಗ್ರರ ಗುಂಡಿನ ದಾಳಿಗೆ ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್‌ ಅವರ ಕುಟುಂಬಕ್ಕೆ ಸರ್ಕಾರ ಘೋಷಣೆ ಮಾಡಿದ 50 ಲಕ್ಷ ರೂ. ಪರಿಹಾರ ನೀಡುವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಂಸದ ತೇಜಸ್ವಿ ಸೂರ್ಯ ರಾಜಕಾರಣ ಮಾಡುತ್ತಿದ್ದಾರೆ. ಯೋಧ ಪ್ರಾಂಜಲ್ ಅಂತ್ಯಕ್ರಿಯೆ ನಡೆದು 12 ದಿನಗಳಾದರೂ ರಾಜ್ಯ ಸರ್ಕಾರ ಘೋಷಣೆ ಮಾಡಿದ ಪರಿಹಾರ ನೀಡುತ್ತಿಲ್ಲವೆಂದು ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ಮಾಡಿದ್ದರು. ಇಂದು ಪ್ರಾಂಜಲ್ ಕುಟುಂಬಕ್ಕೆ ಪರಿಹಾರ ವಿತರಣೆ ಬೆನ್ನಲ್ಲಿಯೇ ಸುಳ್ಳು ಸುದ್ದಿ ಹರಡುತ್ತೀಯಾ ಶೇಮ್‌ಆನ್‌ಯುಸೂರ್ಯ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿದ ತೇಜಸ್ವಿ ಸೂರ್ಯ ತಾನು ಸತ್ಯವಂತ ಎಂದು ಹೇಳಿಕೊಂಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಟ್ವೀಟ್ ಇಲ್ಲಿದೆ ನೋಡಿ...
'ತೇಜಸ್ವಿ ಸೂರ್ಯ ಎಂಬ ಬಿಜೆಪಿ ಸಂಸದ, ತಪ್ಪು ಅರ್ಥ ಬರುವಂತೆ ನನ್ನ ಹೇಳಿಕೆಯನ್ನು ತುಂಡರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು ವಿಕೃತಿ ಮೆರೆದಿರುವುದು ನನ್ನ ಗಮನಕ್ಕೆ ಬಂತು. ಗದ್ದಲದ ಕಾರಣದಿಂದಾಗಿ ವರದಿಗಾರರ ಪ್ರಶ್ನೆ ಪ್ರಾರಂಭದಲ್ಲಿ ಸರಿಯಾಗಿ ಕೇಳಿರಲಿಲ್ಲ. ಪತ್ರಕರ್ತರ ಪ್ರಶ್ನೆ ಹುತಾತ್ಮರಾದ ವೀರಯೋಧ ಪ್ರಾಂಜಲ್ ಅವರ ಕುರಿತಾಗಿರುವುದು ಎಂದು ಗೊತ್ತಾದ ನಂತರ ರಾಜ್ಯ ಸರ್ಕಾರ ಪರಿಹಾರ ನೀಡಲು ಬದ್ಧವಾಗಿರುವುದನ್ನು ತಿಳಿಸಿದ್ದು ಮಾತ್ರವಲ್ಲ, ಬೇರೆ ಯಾವ ರಾಜ್ಯದಲ್ಲಿಯಾದರೂ ಹುತಾತ್ಮ ಯೋಧರಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಿರುವುದು ಗೊತ್ತಾದರೆ ಅಷ್ಟೇ ಮೊತ್ತವನ್ನು ನೀಡಲು ಸಿದ್ಧ ಎಂದೂ ತಿಳಿಸಿದ್ದೇನೆ. ಇಂದು ನಮ್ಮ ಅಧಿಕಾರಿಗಳು ಪರಿಹಾರದ ಚೆಕ್ ಅನ್ನು ಹುತಾತ್ಮ ಪ್ರಾಂಜಲ ಅವರ ಕುಟುಂಬಕ್ಕೆ ನೀಡಿದ್ದಾರೆ.

ಹುತಾತ್ಮ ಸೈನಿಕನಿಗೆ ಪರಿಹಾರ ನೀಡೋಕು ಸರ್ಕಾರದ ಬಳಿ ಹಣವಿಲ್ಲವೇ?

ಪತ್ರಕರ್ತರ ಮುಂದೆ ನಾನು ನೀಡಿರುವ ಹೇಳಿಕೆ ಪೂರ್ಣ ವಿಡಿಯೋವನ್ನು ಇಲ್ಲಿ ಹಂಚಿಕೊಂಡಿದ್ದೇನೆ. ರಾಜಕೀಯ ದುರುದ್ದೇಶದಿಂದ ಈ ವಿಡಿಯೋವನ್ನು ತಿರುಚಿ ಹಂಚಿಕೊಂಡಿರುವ ತೇಜಸ್ವಿ ಸೂರ್ಯ ಅವರು ಹುತಾತ್ಮ ಪ್ರಾಂಜಲ್ ಮತ್ತು ಅವರ ಕುಟುಂಬ ವರ್ಗಕ್ಕೆ ಮಾತ್ರವಲ್ಲ ಸಮಸ್ತ ಯೋಧ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಈ ಸಂಸದನಲ್ಲಿ ಕಿಂಚಿತ್ತು ಮಾನ - ಮರ್ಯಾದೆ ಏನಾದರೂ  ಉಳಿದುಕೊಂಡಿದ್ದರೆ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇನೆ.

ದೇಶ, ದೇವರು, ಸೈನಿಕರು ಎಲ್ಲವೂ ಭಾರತೀಯ ಜನತಾ ಪಕ್ಷಕ್ಕೆ ರಾಜಕೀಯ ವ್ಯಾಪಾರದ ಸರಕುಗಳು ಮಾತ್ರ ಎನ್ನುವುದನ್ನು ದೇಶದ ಜನರು ಅರ್ಥ ಮಾಡಿಕೊಂಡಿದ್ದಾರೆ. ಹುತಾತ್ಮ ಪ್ರಾಂಜಲ್ ಅವರ ಮೃತದೇಹವನ್ನು ಇಲ್ಲಿಗೆ ತಂದಿದ್ದ ದಿನ ಪ್ರಧಾನಿ ನರೇಂದ್ರಮೋದಿ ಅವರು ಬೆಂಗಳೂರಿನಲ್ಲಿಯೇ ಇದ್ದರೂ ಅಂತಿಮ ದರ್ಶನ ಮಾಡಿ ಹೆತ್ತವರಿಗೆ ಸಾಂತ್ವನ ಹೇಳುವ ಸೌಜನ್ಯವನ್ನೂ ತೋರಲಿಲ್ಲ. ಇದನ್ನು ನಾವು ವಿವಾದ ಮಾಡಲು ಹೋಗಲಿಲ್ಲ. ಆದರೆ ಈ ಬಿಜೆಪಿ ಸಂಸದ ಒಬ್ಬ ವೀರ ಯೋಧನ ಬಲಿದಾನವನ್ನು ಕೂಡಾ ತನ್ನ ಸುಳ್ಳು ಸುದ್ದಿಯ ಫ್ಯಾಕ್ಟರಿಗೆ ಸರಕಾಗಿ ಮಾಡಿ ನನ್ನ ಮಾನ ಹಾನಿಗೆ ಪ್ರಯತ್ನಿಸಿರುವುದು ಅಕ್ಷಮ್ಯ. ಇಂತಹ ಸುಳ್ಳುಕೋರರು ನಮ್ಮ ನಾಡಿಗೆ ಕಳಂಕ. ಇವರಿಗೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಬೇಕಾಗಿದೆ. #ShameOnYouSurya' ಎಂದು ಹ್ಯಾಷ್ ಟ್ಯಾಗ್ ಮಾಡಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಪ್ರತಿಕ್ರಿಯೆ: 
ಮಾನ್ಯ ಶ್ರೀ ಸಿದ್ದರಾಮಯ್ಯ ಸರ್, ಯೋಧರೊಬ್ಬರು ತೀರಿಕೊಂಡು 12 ದಿವಸಗಳಾದರೂ ನಿಮ್ಮ ಸರ್ಕಾರದ ಯಾವೊಬ್ಬ ಅಧಿಕಾರಿಯೂ ಸಂಪರ್ಕಿಸದೇ ಇದ್ದಿದ್ದು ಸತ್ಯ. ನಾನು ನಿಮಗೆ ಪತ್ರ ಬರೆದು ಜ್ಞಾಪಿಸುವ ವರೆಗೂ ಪರಿಹಾರ ನೀಡಲು ತಾವುಗಳು ಮೀನ ಮೇಷ ಎಣಿಸಿದ್ದು ಕೂಡ ಸತ್ಯ. ಮಾಧ್ಯಮದ ಸ್ನೇಹಿತರು ತಮ್ಮನ್ನು ಪ್ರಶ್ನಿಸಿದಾಗ, ಸರಿಯೋ ತಪ್ಪೋ ನೀವು ಪರಿಹಾರವನ್ನೇ ಘೋಷಿಸಿಲ್ಲ ಎಂದು ಹೇಳಿರುವುದು ಸಹ ಸತ್ಯ. ತರದಲ್ಲಿ ನಾನು ಪತ್ರಿಕಾಗೋಷ್ಠಿ ನಡೆಸಿ ಆಗ್ರಹ ಪಡಿಸುವವರೆಗೂ ತಾವು ಪರಿಹಾರ ಘೋಷಣೆ ಮಾಡದೇ ಇದ್ದಿದ್ದು ಕೂಡ ಸತ್ಯ. ರಡನೇ ಬಾರಿ ನಾನು ಪತ್ರಿಕಾಗೋಷ್ಠಿ ನಡೆಸಿ ಮತ್ತೆ ಆಗ್ರಹ ಮಾಡಿದ ನಂತರ, ಮಾಧ್ಯಮ & ಸಾರ್ವಜನಿಕರ ನಿರಂತರ ಒತ್ತಡದ ನಂತರವೇ ನಿನ್ನೆ ತಡರಾತ್ರಿ ತಾವು ಪರಿಹಾರ ಘೋಷಿಸಿದ್ದು ಕೂಡ ಸತ್ಯ.ಇದು ರಾಜಕೀಯ ಮಾಡುವ ವಿಷಯವಂತೂ ಖಂಡಿತ ಅಲ್ಲ. ಒಟ್ಟಿನಲ್ಲಿ ಹುತಾತ್ಮ ಯೋಧ ಕ್ಯಾ. ಪ್ರಾಂಜಲ್ ರವರ ಕುಟುಂಬಕ್ಕೆ ನ್ಯಾಯ ಸಿಕ್ಕಿರುವುದು ಸಂತಸದ ವಿಷಯ. ಧನ್ಯವಾದಗಳು.

ಅರ್ಜುನನ ಸಾವು ಅನ್ಯಾಯ, ಅಂತ್ಯಕ್ರಿಯೆಯಲ್ಲಾದ್ರೂ ನ್ಯಾಯ ಕೊಡಿಸಿ ಎಂದವರ ಮೇಲೆ ಲಾಠಿ ಬೀಸಿದ ಪೊಲೀಸರು

ಇದರೊಂದಿಗೆ ಆನೇಕಲ್ ತಾಲ್ಲೂಕಿನ ಜಿಗಣಿ ಪ್ರದೇಶದ ಮುಖ್ಯ ರಸ್ತೆಯನ್ನು, ಕ್ಯಾಪ್ಟನ್ ಎಂ ವಿ ಪ್ರಾಂಜಲ್ ರ ಹೆಸರಿನಲ್ಲಿ ನಾಮಕರಣಗೊಳಿಸುವಂತೆ ಮನವಿ ಕೂಡ ಸಲ್ಲಿಸಿದ್ದು, ಈ ಮನವಿಗೆ ಶೀಘ್ರ ಸ್ಪಂದನೆ ಒದಗಿಸಿ ಹುತಾತ್ಮ ಯೋಧರೊಬ್ಬರಿಗೆ ಗೌರವ ಸೂಚಿಸುವಂತೆ ತಮ್ಮಲ್ಲಿ ವಿನಂತಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

Follow Us:
Download App:
  • android
  • ios