ಸೂಕ್ಷ್ಮ ನೀರಾವರಿ ತಂತ್ರಜ್ಞಾನ ಸೇರಿದಂತೆ ಆಧುನಿಕ ಪದ್ಧತಿಗಳನ್ನು ಉಪಯೋಗಿಸಿಕೊಂಡು ದೇಶ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ. ಹೊಸ ತಂತ್ರಜ್ಞಾನದಿಂದ ಕೃಷಿ ಕೆಲಸ ಸರಳವಾಗುವುದರ ಜೊತೆಗೆ ಹೆಚ್ಚು ಲಾಭ ದೊರೆಯಲಿದೆ ಎಂದು ಅಭಿಪ್ರಾಯಪಟ್ಟ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್.
ಬೆಂಗಳೂರು(ಮಾ.16): ದೇಶದ ಯುವ ಜನರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಯಶಸ್ವಿಯಾಗಬೇಕು. 2050ರ ಹೊತ್ತಿಗೆ ಭಾರತ ವಿಶ್ವಕ್ಕೆ ಆಹಾರ ಧಾನ್ಯ ಪೂರೈಸುವಂತೆ ಆಗಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಆಶಿಸಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಚತುರ ಕೃಷಿ ಅಭಿವೃದ್ಧಿ ಮತ್ತು ನಾವೀನ್ಯತಾ’ ಯೋಜನೆ ಮತ್ತು ‘21ನೇ ಅಖಿಲ ಭಾರತ ಅಂತರ ಕೃಷಿ ವಿಶ್ವವಿದ್ಯಾಲಯಗಳ ಯುವಜನೋತ್ಸವ (ಅಗ್ರಿ ಯುನಿಫೆಸ್ಟ್) 2022-23’ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಸಿರಿಧಾನ್ಯ ಯೋಜನೆಗೆ ಕೇಂದ್ರದ ಶಹಬ್ಬಾಸ್: ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮೆಚ್ಚುಗೆ
ದೇಶದ ಜನಸಂಖ್ಯೆಯಲ್ಲಿ ಶೇ.60ರಷ್ಟು ಇರುವ ಯುವ ಸಮುದಾಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನಗಳು ಹೆಚ್ಚಾಗಬೇಕು. ಕೃಷಿಯಲ್ಲಿ ತಾಂತ್ರಿಕತೆ ಬಳಸಿಕೊಂಡು ಉತ್ತಮ ಸಾಧನೆ ಮಾಡಬೇಕಿದೆ. ಸೂಕ್ಷ್ಮ ನೀರಾವರಿ ತಂತ್ರಜ್ಞಾನ ಸೇರಿದಂತೆ ಆಧುನಿಕ ಪದ್ಧತಿಗಳನ್ನು ಉಪಯೋಗಿಸಿಕೊಂಡು ದೇಶ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ. ಹೊಸ ತಂತ್ರಜ್ಞಾನದಿಂದ ಕೃಷಿ ಕೆಲಸ ಸರಳವಾಗುವುದರ ಜೊತೆಗೆ ಹೆಚ್ಚು ಲಾಭ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಯುವ ಜನೋತ್ಸವವು ಭಾರತದ ಸಂಸ್ಕೃತಿಯ ಸ್ವರೂಪವನ್ನು ಬಿಂಬಿಸುತ್ತದೆ. ವಿವಿಧ ರಾಜ್ಯಗಳ 57 ಕೃಷಿ ಸಂಬಂಧಿ ವಿಶ್ವವಿದ್ಯಾಲಯಗಳ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿರುವ ಯುವಜನೋತ್ಸವ ಭಾರತೀಯ ಸಾಂಸ್ಕೃತಿಕ ಉತ್ಸವಗಳ ಸಂಯೋಜನೆಯಾಗಿದೆ ಎಂದರು.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಹೆಕ್ಸಾಗನ್ ಹಿರಿಯ ನಿರ್ದೇಶಕ ಶಾಜಿ ಕೋಝಕುನ್ನನ್, ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಕೃಷಿ ಶಿಕ್ಷಣ ವಿಭಾಗದ ಉಪ ಮಹಾ ನಿರ್ದೇಶಕ ಡಾ.ಸಿ.ಆರ್.ಅಗರವಾಲ್, ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಸಿ.ಕಳಸದ, ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್.ವಿ.ಸುರೇಶ್ ಹಾಜರಿದ್ದರು.
ಶೇಂಗಾದೊಂದಿಗೆ ಹೊಸ ಪ್ರಯೋಗ: ಭಾರಿ ಗಾತ್ರ ಮೂಲಂಗಿ ಬೆಳೆದ ಮಹಾರಾಷ್ಟ್ರದ ರೈತ
ಕೃಷಿಗೆ ಆದ್ಯತೆ
ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ರಾಜ್ಯ ಸರ್ಕಾರ ಕೃಷಿ ವಲಯಕ್ಕೆ ಆದ್ಯತೆ ನೀಡುತ್ತಿದೆ. ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಶೇ.40 ರಷ್ಟಿದ್ದ ಮೀಸಲಾತಿಯನ್ನು ಶೇ.50ಕ್ಕೆ ಹೆಚ್ಚಿಸಿರುವದರಿಂದ ರೈತರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಶಿಕ್ಷಣ ಪಡೆಯುವಂತೆ ಆಗಿದೆ. ಕೃಷಿಯಲ್ಲಿ ಶೇ.1 ರಷ್ಟು ಪ್ರಗತಿ ಸಾಧಿಸಿದರೆ ಕೈಗಾರಿಕೆಯಲ್ಲಿ ಶೇ.7, ಸೇವಾ ಕ್ಷೇತ್ರದಲ್ಲಿ ಶೇ.20 ರಷ್ಟುಪ್ರಗತಿ ಸಾಧಿಸಿದಂತಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಜಿಕೆವಿಕೆಯಲ್ಲಿ ಆಯೋಜಿಸಿದ್ದ ‘ಚತುರ ಕೃಷಿ ಅಭಿವೃದ್ಧಿ ಮತ್ತು ನಾವೀನ್ಯತಾ’ ಯೋಜನೆ ಕಾರ್ಯಕ್ರಮವನ್ನು ಡೋಲು ಬಡಿಯುವ ಮೂಲಕ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರಸಿಂಗ್ ತೋಮರ್ ಉದ್ಘಾಟಿಸಿದರು. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸಚಿವ ಬಿ.ಸಿ.ಪಾಟೀಲ್ ಮತ್ತಿತರರು ಹಾಜರಿದ್ದರು.
