ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು[ಫೆ.23]: ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಕಳೆದ ಒಂದು ವಾರದಿಂದ ಉಷ್ಣಾಂಶ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಹೀಗೆಯೇ ಮುಂದುವರೆದರೆ ದೇಶದ ಕೃಷಿಕರಿಗೆ ಗುಡ್‌ ನ್ಯೂಸ್‌. ಆದರೆ, ಮೀನುಗಾರರಿಗೆ ಬ್ಯಾಡ್‌ ನ್ಯೂಸ್‌!

ಒಳ್ಳೆಯ ಸುದ್ದಿ ಏಕೆಂದರೆ, ಫೆಬ್ರವರಿ ಅವಧಿಯಲ್ಲಿ ಈ ರೀತಿ ಸಮುದ್ರದಲ್ಲಿ ಉಷ್ಣಾಂಶ ಏರಿಕೆಯಾಗುವುದು ಉತ್ತಮ ಮುಂಗಾರು ಆಗಮಿಸುವುದರ ಸಂಕೇತ. ಇನ್ನು ಕೆಟ್ಟಸುದ್ದಿ ಏಕೆಂದರೆ, ಸಮುದ್ರದಲ್ಲಿ ತಾಪಮಾನ ಹೆಚ್ಚಾಗುತ್ತಿರುವುದರಿಂದ ಮೀನುಗಳು ಕಡಲಾಳಕ್ಕೆ ಹೋಗುತ್ತಿವೆ. ಹೀಗಾಗಿ ದಡದ ಸಮೀಪದ ಮೀನುಗಾರಿಕೆಗೆ ಭಾರಿ ಹೊಡೆತ ಬಿದ್ದಿದೆ.

ಕಳೆದೊಂದು ವಾರದಿಂದ ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯ ಸಮುದ್ರದ ನೀರಿನ ಉಷ್ಣಾಂಶ ವಾಡಿಕೆಗಿಂತ ಹೆಚ್ಚಾಗಿದೆ. ಇದರಿಂದ ಪಶ್ಚಿಮ ಕರಾವಳಿಯ ಕೇರಳದಿಂದ ಗೋವಾವರೆಗೆ ಸಮುದ್ರ ತೀರಕ್ಕೆ ಅಂಟಿಕೊಂಡಿರುವ ಎಲ್ಲ ಪ್ರದೇಶದಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಂಡು ಬಂದಿದೆ. ಇದೇ ಸ್ಥಿತಿ ಸಮುದ್ರದಲ್ಲಿ ಮುಂದುವರೆದರೆ ಈ ವರ್ಷ ಸಹ ಮುಂಗಾರು ಅವಧಿಯಲ್ಲಿ ಉತ್ತಮ ಮಳೆ ನಿರೀಕ್ಷಿಸಬಹುದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಸಮುದ್ರದ ನೀರಿನ ಉಷ್ಣಾಂಶದಲ್ಲಿ ಏರಿಕೆಯಾಗುವುದರಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಬಾಷ್ಪೀಕರಣ ಆಗಲಿದೆ (ಆವಿಯಾಗುವಿಕೆ). ಈ ಪ್ರಕ್ರಿಯೆ ಮುಂಬರುವ ಬೇಸಿಗೆ ಅವಧಿಯಲ್ಲಿಯೂ ಮುಂದುವರೆಯಬೇಕು. ಮುಂಗಾರು ಪೂರ್ವದಲ್ಲಿ ವಾತಾವರಣ ತಂಪಾಗಬಾರದು. ಒಂದೆರಡು ಭಾಗದಲ್ಲಿ ಮಾತ್ರ ಉಷ್ಣಾಂಶ ಏರಿಕೆ ಕಂಡು ಬಂದರೆ ಸಾಲದು ಇಡೀ ಸಮುದ್ರದ ನೀರಿನ ಉಷ್ಣಾಂಶದಲ್ಲಿ ಏರಿಕೆ ಆಗಿರಬೇಕು. ಹಾಗಾದಲ್ಲಿ ಉತ್ತಮ ಮುಂಗಾರನ್ನು ನಿರೀಕ್ಷಿಸಬಹುದು. ಸದ್ಯದ ಅಂಕಿ- ಅಂಶಗಳ ಮಾಹಿತಿ ಪ್ರಕಾರ ಇಡೀ ಸಮುದ್ರದಲ್ಲಿ ಉಷ್ಣಾಂಶ ಏರಿಕೆಯಾಗಿದ್ದು, ಇದು ಮುಂದುವರೆಯುವ ಎಲ್ಲ ಲಕ್ಷಣಗಳೂ ಇವೆ ಎಂದು ವಿವರಿಸಿದ್ದಾರೆ.

ಸಮುದ್ರದ ನೀರಿನ ತಾಪಮಾನ ಏರಿಕೆಯಿಂದ ಮೀನುಗಳು ತತ್ತರಿಸಿ ಹೋಗಿದ್ದು, ನೀರಿನ ಬಿಸಿ ತಾಳಲಾರದೇ ಕಡಲಾಳಕ್ಕೆ ಹೋಗುತ್ತಿವೆ. ಸಮುದ್ರದಲ್ಲಿ ಮೀನು ದೊರೆಯುತ್ತಿಲ್ಲ. ಇದರಿಂದ ಸಮುದ್ರದಲ್ಲಿ ಮೀನುಗಾರಿಕೆ ಮೇಲೆಯೂ ಹೊಡೆತ ಬಿದ್ದಿದೆ ಎನ್ನಲಾಗುತ್ತಿದೆ. ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶ ಎರಡರಲ್ಲಿಯೂ ವಾಡಿಕೆಗಿಂತ ಹೆಚ್ಚು ದಾಖಲಾಗಿದೆ. ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ಗಡಿ ದಾಟಿದ ವರದಿಯಾಗಿದೆ.

33 ಡಿಗ್ರಿ ಗಡಿ ದಾಟಿತು ಬೆಂಗಳೂರು ತಾಪಮಾನ

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದೊಂದು ವಾರದಲ್ಲಿ ರಾಜಧಾನಿಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್‌ ಗಡಿ ದಾಟಿದೆ. ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್‌ ವರದಿಯಾಗಿದೆ. ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುತ್ತಿರುವುದರಿಂದ ಹಾಗೂ ಮೋಡ ಇಲ್ಲದಿರುವುದರಿಂದ (ಶುಭ್ರಾಕಾಶ) ಬಿಸಿಲತಾಪ ಹೆಚ್ಚಾದ ಅನುಭವವಾಗುತ್ತಿದೆ. ಅಲ್ಲದೆ, ಬೆಳಗ್ಗೆಯ ಅವಧಿಯಲ್ಲಿ ಉಷ್ಣಾಂಶ ಹೆಚ್ಚಾಗಿದ್ದು, ಹೆಚ್ಚಿನ ತಾಪದ ಅನುಭವ ನೀಡುತ್ತಿದೆ. ಹಾಗಂತ ಬೆಂಗಳೂರು ನಗರದ ಉಷ್ಣಾಂಶ ವಾಡಿಕೆಗಿಂತ ಹೆಚ್ಚೇನೂ ಆಗಿಲ್ಲ. ಸಾಮಾನ್ಯದಂತೆಯೇ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಚನ್ನಬಸನಗೌಡ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಫೆಬ್ರವರಿಯಲ್ಲಿ ಗರಿಷ್ಠ 37 ಡಿಗ್ರಿ ಸೆಲ್ಸಿಯಸ್‌ನಷ್ಟುಉಷ್ಣಾಂಶ ರಾಜಧಾನಿಯಲ್ಲಿ ದಾಖಲಾದ ಉದಾಹರಣೆಗಳು ಇವೆ. ಸದ್ಯಕ್ಕಂತೂ 33 ಡಿಗ್ರಿ ಸೆಲ್ಸಿಯಸ್‌ ಮಾತ್ರ ಮುಟ್ಟಿದೆ. ಹೀಗಾಗಿ ಉಷ್ಣಾಂಶದಲ್ಲಿ ತೀವ್ರ ಏರಿಕೆಯೇನೂ ಆಗಿಲ್ಲ ಎಂದು ಅವರು ಹೇಳಿದ್ದಾರೆ.