2026ರ ಮುಂಗಾರಿನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಆತಂಕಕಾರಿ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರ ನಡುವೆ, ಬೆಂಗಳೂರಿನಲ್ಲಿ ಸೂರ್ಯನ ತಾಪಮಾನ ಹೆಚ್ಚಾಗಿದ್ದು, ಎಳೆನೀರು ಮತ್ತು ಮಜ್ಜಿಗೆಯಂತಹ ತಂಪು ಪಾನೀಯಗಳ ಬೆಲೆ ಗಗನಕ್ಕೇರಿದೆ.

ಬೆಂಗಳೂರು (ಏ.22): ಒಂದೆಡೆ ದಿನದಿಂದ ದಿನಕ್ಕೆ ಏರುತ್ತಿರುವ ಸೂರ್ಯನ ತಾಪಮಾನ, ಮತ್ತೊಂದೆಡೆ ಮುಂದಿನ ದಿನಗಳಲ್ಲಿ ಎದುರಾಗಲಿರುವ ಮಳೆ ಕೊರತೆಯ ಆತಂಕ. ಹವಾಮಾನ ಇಲಾಖೆಯು ನೀಡಿರುವ ಇತ್ತೀಚಿನ ವರದಿ ದೇಶದ ಜನರಲ್ಲಿ ಆತಂಕ ಮೂಡಿಸಿದೆ. 2026ರ ಮುಂಗಾರು ಹಂಗಾಮಿನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ಬೀಳುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ದೀರ್ಘಕಾಲದ ಮುನ್ಸೂಚನೆ ನೀಡಿದೆ. ಈ ನಡುವೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಸಿಲ ಝಳಕ್ಕೆ ಜನ ಹೈರಾಣಾಗಿದ್ದು, ತಂಪು ಪಾನೀಯಗಳ ಬೆಲೆ ಗಗನಕ್ಕೇರಿದೆ.

Add Asianetnews Kannada as a Preferred SourcegooglePreferred

2026ರ ಮುಂಗಾರು ಮಳೆ ಮುನ್ಸೂಚನೆ:

ಕೇಂದ್ರ ಹವಾಮಾನ ಇಲಾಖೆಯು ನೆನ್ನೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, 2026ರಲ್ಲಿ ಮಳೆಯ ಪ್ರಮಾಣವು ಗಣನೀಯವಾಗಿ ಕುಸಿಯುವ ಸಾಧ್ಯತೆಯಿದೆ. ಜೂನ್ ತಿಂಗಳಿನಿಂದ ಸೆಪ್ಟೆಂಬರ್ ವರೆಗಿನ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. ದಕ್ಷಿಣದ ಕೆಲವು ಪೂರ್ವ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿದ್ದರೂ, ರಾಜ್ಯದ ಉಳಿದ ಭಾಗಗಳಲ್ಲಿ ಬರಗಾಲದ ಛಾಯೆ ಮೂಡುವ ಸಾಧ್ಯತೆಯಿದೆ. ಇದು ಕೃಷಿ ಮತ್ತು ನೀರಿನ ಮೂಲಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹವಾಮಾನ ವಿಜ್ಞಾನಿಗಳ ಎಚ್ಚರಿಕೆ:

ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಹವಾಮಾನ ಇಲಾಖೆಯ ವಿಜ್ಞಾನಿ ಮಮತಾ ಅವರು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬಿಸಿಲ ತಾಪಮಾನವು ಅಸಾಧಾರಣವಾಗಿ ಏರಿಕೆಯಾಗಲಿದೆ ಎಂದು ತಿಳಿಸಿದ್ದಾರೆ. 'ಸಾರ್ವಜನಿಕರು ಮಧ್ಯಾಹ್ನದ ಸಮಯದಲ್ಲಿ ಹೊರಗೆ ಸಂಚರಿಸುವುದನ್ನು ಕಡಿಮೆ ಮಾಡಬೇಕು. ಮುಖ್ಯವಾಗಿ ತೋಟಗಳಲ್ಲಿ ಮತ್ತು ಬಯಲು ಪ್ರದೇಶದಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ರೈತರು ಬಿಸಿಲ ಹೊಡೆತಕ್ಕೆ ಸಿಲುಕದಂತೆ ಜಾಗ್ರತೆ ವಹಿಸಬೇಕು. ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡಲು ದ್ರವ ರೂಪದ ಆಹಾರಗಳನ್ನು ಅಂದರೆ ನೀರು, ಮಜ್ಜಿಗೆ ಮತ್ತು ಹಣ್ಣಿನ ರಸಗಳನ್ನು ಹೆಚ್ಚಾಗಿ ಸೇವಿಸಬೇಕು' ಎಂದು ಅವರು ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ 'ಸನ್ ಶಾಕ್' ಮತ್ತು ಬೆಲೆ ಏರಿಕೆ ಬರೆ:

ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಸೂರ್ಯನ ಪ್ರತಾಪ ಹೆಚ್ಚಾಗಿದೆ. ನಗರದ ತಾಪಮಾನವು 36 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದು, ಬೆಂಗಳೂರಿಗರು ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದಾರೆ. ಈ ತಾಪಮಾನ ಹೆಚ್ಚಳವು ನೇರವಾಗಿ ಜನರ ಜೇಬಿನ ಮೇಲೆ ಪ್ರಭಾವ ಬೀರಿದೆ. ಬಿಸಿಲಿನಿಂದ ರಕ್ಷಣೆ ಪಡೆಯಲು ಜನರು ಎಳೆನೀರು ಮತ್ತು ಮಜ್ಜಿಗೆಯ ಮೊರೆ ಹೋಗುತ್ತಿದ್ದಾರೆ. ಆದರೆ, ಬೇಡಿಕೆ ಹೆಚ್ಚಾದಂತೆ ಬೆಲೆಗಳೂ ಗಗನಕ್ಕೇರಿವೆ. ಕೇವಲ ಕೆಲವು ದಿನಗಳ ಹಿಂದೆ 25 ರಿಂದ 30 ರೂಪಾಯಿಗೆ ಸಿಗುತ್ತಿದ್ದ ಎಳೆನೀರು ಈಗ ಬರೋಬ್ಬರಿ 60 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನು 10 ರೂಪಾಯಿಗೆ ಸಿಗುತ್ತಿದ್ದ ಒಂದು ಗ್ಲಾಸ್ ಮಜ್ಜಿಗೆಯ ಬೆಲೆ 25 ರೂಪಾಯಿಗೆ ಏರಿಕೆಯಾಗಿದೆ.

ಸಾರ್ವಜನಿಕರ ಅಳಲು:

ಬೆಲೆ ಏರಿಕೆಯ ಕುರಿತು ಮಾತನಾಡುತ್ತಿರುವ ಸಾರ್ವಜನಿಕರು, 'ಆರೋಗ್ಯ ಕಾಪಾಡಿಕೊಳ್ಳಲು ಹಣ್ಣಿನ ರಸ ಅಥವಾ ಎಳೆನೀರು ಕುಡಿಯೋಣ ಅಂದ್ರೆ ಬೆಲೆ ಕೇಳಿ ದಿಗಿಲಾಗುತ್ತಿದೆ. ಆದರೆ, ಈ ಸುಡುವ ಬಿಸಿಲಿನಲ್ಲಿ ಬೇರೆ ಮಾರ್ಗವಿಲ್ಲದೆ ದುಬಾರಿ ಹಣ ಕೊಟ್ಟು ಕುಡಿಯಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ' ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾದರೆ ಮತ್ತು ಬಿಸಿಲು ಇದೇ ರೀತಿ ಮುಂದುವರಿದರೆ, ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಭೀತಿ ಎದುರಾಗಿದೆ. ಹವಾಮಾನ ವೈಪರೀತ್ಯದ ಈ ಸೂಚನೆಗಳು ಮುನ್ನೆಚ್ಚರಿಕೆ ವಹಿಸಲು ನಮಗೆ ನೀಡುತ್ತಿರುವ ಸಂಕೇತಗಳಾಗಿವೆ.