ಸೈಕ್ಲೋನ್ ಹೊಡೆತ: ಮಕ್ಕಳ, ಹಿರಿಯರ ಅನಾರೋಗ್ಯ ಉಲ್ಬಣ
ಹವಾಮಾನದಲ್ಲಿ ಸಾಕಷ್ಟು ಏರುಪೇರು ಉಂಟಾಗಿರುವ ಪರಿಣಾಮ ಶೀತ, ಕೆಮ್ಮು, ಜ್ವರ ಹಾಗೂ ಉಸಿರಾಟದ ಸಂಬಂಧಿ ಆರೋಗ್ಯ ಸಮಸ್ಯೆಗಳು ಹೆಚ್ಚಳ.
ಬೆಂಗಳೂರು(ಡಿ.13): ರಾಜ್ಯದಲ್ಲಿ ಈ ಬಾರಿ ಚಳಿಗಾಲದ ಜತೆಗೆ ಮ್ಯಾಂಡಸ್ ಚಂಡಮಾರುತ ಸೇರಿ ಹವಾಮಾನದಲ್ಲಿ ಸಾಕಷ್ಟು ಏರುಪೇರು ಉಂಟಾಗಿರುವ ಪರಿಣಾಮ ಶೀತ, ಕೆಮ್ಮು, ಜ್ವರ ಹಾಗೂ ಉಸಿರಾಟದ ಸಂಬಂಧಿ ಆರೋಗ್ಯ ಸಮಸ್ಯೆಗಳು ಹೆಚ್ಚಳವಾಗಿವೆ.
ಸಾಮಾನ್ಯವಾಗಿ ಪ್ರತಿ ವರ್ಷ ಚಳಿಗಾಲ ಆರಂಭದಲ್ಲಿ ಅಥವಾ ತೀವ್ರವಾದಾಗ ಜನರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಆದರೆ, ಕಳೆದ ನಾಲ್ಕು ದಿನಗಳಿಂದ ಚಂಡಮಾರುತದಿಂದ ಚಳಿ ಜತೆ ಜಿಟಿಜಿಟಿ ಮಳೆ, ತೀವ್ರ ಪ್ರಮಾಣ ಶೀತಗಾಳಿ, ದಿನವಿಡೀ ಮೋಡ ಕವಿದ ವಾತಾವರಣವಿದೆ. ಇದರಿಂದ ರೋಗ ನಿರೋಧಕ ಶಕ್ತಿ ಕಡಿಮೆ ಉಳ್ಳ ಮಕ್ಕಳು ಹಾಗೂ ವೃದ್ಧರು ಅನಾರೋಗ್ಯಕ್ಕೀಡಾಗುತ್ತಿದ್ದು, ದೀರ್ಘಕಾಲಿನ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಆರೋಗ್ಯ ಸಮಸ್ಯೆ ಉಲ್ಬಣವಾಗಿವೆ.
ಆಸ್ಪತ್ರೆಗಳ ಹೊರರೋಗಿಗಳ ವಿಭಾಗದಲ್ಲಿ (ಓಪಿಡಿ) ಹಾಗೂ ಬಡಾವಣೆಗಳ ಕ್ಲಿನಿಕ್, ನರ್ಸಿಂಗ್ ಹೋಮ್‌ಗಳಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚು ಕಂಡು ಬರುತ್ತಿದೆ. ಬೌರಿಂಗ್, ವಿಕ್ಟೋರಿಯಾ ಹಾಗೂ ಕೆಸಿ ಜನರಲ್ ಆಸ್ಪತ್ರೆಗಳಲ್ಲಿ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಕಳೆದ ಎರಡು ವಾರದಿಂದ ವೈರಾಣು ಸೋಂಕಿಗೆ ಚಿಕಿತ್ಸೆ ಪಡೆದವರ ಸಂಖ್ಯೆ ಶೇ.30ರಷ್ಟುಹೆಚ್ಚಾಗಿದೆ. ಇವುಗಳ ಜತೆಗೆ ಶ್ವಾಸಕೋಶ ಸೋಂಕು, ದೇಹದಲ್ಲಿ ಅತಿಯಾದ ನೋವು, ತೀವ್ರ ಗಂಟಲಿನ ಸೋಂಕು ಹೆಚ್ಚಾಗಿರುವುದು ವರದಿಯಾಗಿದೆ.
ನ್ಯೂಮೋನಿಯಾ, ಅಸ್ತಮಾ ಹೆಚ್ಚಳ:
ವಿಷಮಶೀತ ಜ್ವರ (ನ್ಯೂಮೋನಿಯಾ) ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹಿರಿಯರನ್ನು ಅಸ್ತಮಾ ಕಾಡುತ್ತಿದೆ. ಚಳಿಗಾಲದಲ್ಲಿ ರಸ್ತೆಯಲ್ಲಿನ ಧೂಳು ಮಂಜಿನೊಂದಿಗೆ ಮೇಲೇಳುವುದರಿಂದ ಹಾಗೂ ಮಂಜು ಮಿಶ್ರಿತ ಗಾಳಿ ಸೇವನೆಯಿಂದ ಅಸ್ತಮಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಜತೆಗೆ ಶೀತ, ಜ್ವರ, ಒತ್ತಡ, ತೀವ್ರವಾದ ಹವಾಮಾನವೂ ಅಸ್ತಮಾಕ್ಕೆ ರಾಜಮಾರ್ಗವಾಗಿರುತ್ತದೆ. ಹೀಗಾಗಿ, ವಾತಾವರಣದ ಮಂಜು ಇಳಿದ ನಂತರ ಮನೆಯಿಂದ ಹೊರಹೋಗುವುದು. ಮಾಸ್‌್ಕ ಧರಿಸುವುದು, ಜತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಬೇಕು ಎನ್ನುತ್ತಾರೆ ವೈದ್ಯರು.
ಅಸ್ತಮಾ, ಹೃದ್ರೋಗ, ಸಂಧಿವಾತ ತೊಂದರೆ:
ಆಸ್ತಮಾ, ಮಧುಮೇಹ, ಅಲರ್ಜಿ, ಹೃದ್ರೋಗ ಹಾಗೂ ಸಂಧಿವಾತ ಸಮಸ್ಯೆ ಇರುವವರು ಈ ಚಳಿಗಾಲದಲ್ಲಿ ಹೆಚ್ಚು ತೊಂದರೆಗೆ ಒಳಗಾಗುತ್ತಾರೆ. ಮಕ್ಕಳು ಅಥವಾ ವೃದ್ಧರ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾದರೂ ವೈದ್ಯರಲ್ಲಿ ತೋರಿಸಬೇಕು ಎಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಮತ್ತು ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ವೈದ್ಯರು ಸಲಹೆ ನೀಡಿದ್ದಾರೆ.
ಮುಂಜಾಗ್ರತೆ ವಹಿಸಲು ಸಚಿವ ಸುಧಾಕರ್ ಸೂಚನೆ
ಚಳಿಗಾಲದ ಸಮಯದಲ್ಲಿಯೇ ಚಂಡಮಾರುತ ಬಂದಿದ್ದು, ಹವಾಮಾನದಲ್ಲಿ ಸಾಕಷ್ಟುವ್ಯತಿರಿಕ್ತವಾಗಿವೆ. ವೃದ್ಧರು ಮತ್ತು ಮಕ್ಕಳ ಆರೋಗ್ಯ ಕುರಿತು ಎಚ್ಚರಿಕೆ ವಹಿಸಬೇಕು. ಜ್ವರ, ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಚಳಿಗಾಲ ಮುಗಿಯುವವರೆಗೂ ಕಾಳಜಿವಹಿಸಬೇಕು. ಈಗಾಗಲೇ ಎಲ್ಲಾ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಆಸ್ಪತ್ರೆಗಳಲ್ಲಿ ಅಗತ್ಯ ವ್ಯವಸ್ಥೆ, ಮುಂಜಾಗ್ರತಾ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.