ಬೆಂಗಳೂರು(ಮೇ.23): ನಗರದಲ್ಲಿ ಲಾಕ್‌ಡೌನ್‌ ಜಾರಿಯಿಂದ ಸಾಮಾನ್ಯಕ್ಕಿಂತ ಶೇಕಡ 36ರಷ್ಟು ಕುಸಿದಿದ್ದ ಮಾಲಿನ್ಯ ಪ್ರಮಾಣ, ಲಾಕ್‌ಡೌನ್‌ ಸಡಿಲವಾಗುತ್ತಿದ್ದಂತೆ ತನ್ನ ಸಾಮಾನ್ಯ ಸ್ಥಿತಿಗೆ ಹಿಂತಿರುಗಿದೆ!

ಲಾಕ್‌ಡೌನ್‌ ಸಡಿಲಿಕೆ ಮಾಡಿರುವ ಪರಿಣಾಮ ನಗರ ಸಹಜ ಸ್ಥಿತಿಯತ್ತ ಬರುತ್ತಿದೆ. ವಾಹನ ಸಂಚಾರ ಸೇರಿದಂತೆ ವಾಣಿಜ್ಯ ಚಟುವಟಿಕೆಗಳು, ಮಾರುಕಟ್ಟೆಗಳು ಕಾರ್ಯ ನಿರ್ವಹಿಸುತ್ತಿವೆ. ಲಾಕ್‌ಡೌನ್‌ ಸಡಿಲಿಕೆಯಾದ ನಂತರ ಎಂದಿನಂತೆ ವಾಹನ ಸಂಚಾರ ಕೂಡ ಹೆಚ್ಚಳವಾಗಿದೆ. ಟ್ರಾಫಿಕ್‌ ಸಮಸ್ಯೆ ಉಂಟಾಗಿರುವುದರಿಂದ ವಾಹನಗಳು ಉಗುಳುವ ದಟ್ಟಹೊಗೆಯಿಂದ ಮಾಲಿನ್ಯ ಕೂಡ ಹೆಚ್ಚಳವಾಗಿದೆ.

ಕೊರೋ​ನಾ​ದಿಂದ ಶೇ. 50 ರಷ್ಟು ಕಡಿ​ಮೆ​ಯಾದ ವಾಯುಮಾಲಿನ್ಯ..!

ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ಪ್ರಕಾರ, ಮೇ 19ರಂದು ನಗರದ ಮಾಲಿನ್ಯ ಪ್ರಮಾಣ ಹೆಬ್ಬಾಳದಲ್ಲಿ 78, ಜಯನಗರ- 79, ಮೈಸೂರು ರಸ್ತೆ- 69, ನಿಮ್ಹಾನ್ಸ್‌- 72, ಸಿಲ್ಕ್‌ ಬೋರ್ಡ್‌- 87, ಸಿಟಿ ರೈಲ್ವೆ ನಿಲ್ದಾಣ-96 ಮತ್ತು ಬಸವೇಶ್ವರನಗರದಲ್ಲಿ 58ರಷ್ಟು ಮಾಲಿನ್ಯ ಪ್ರಮಾಣ ಕಂಡು ಬಂದಿದೆ. ಇದು ನಗರದ ಸಾಮಾನ್ಯ ಮಾಲಿನ್ಯ ಪ್ರಮಾಣ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹೇಳುತ್ತಾರೆ.

ವಾಹನ ಸಂಚಾರ, ಕೈಗಾರಿಕೆಗಳು, ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲ ರೀತಿಯ ಚಟುವಟಿಕೆಗಳು ಸ್ತಬ್ಧವಾಗಿದ್ದ ಪರಿಣಾಮ ಲಾಕ್‌ಡೌನ್‌ ಸಮಯದಲ್ಲಿ ನಗರದ ಮಾಲಿನ್ಯ ಪ್ರಮಾಣ ಶೇ. 36ರಷ್ಟು ಕಡಿಮೆಯಾಗಿತ್ತು. ಬೆಂಗಳೂರು ನಗರದಲ್ಲಿ ಪ್ರತಿ ದಿನ ಅಂದಾಜು 70 ಲಕ್ಷಕ್ಕೂ ಅಧಿಕ ವಾಹನ ಸಂಚರಿಸುತ್ತಿದ್ದವು. ಇದರಿಂದ ಉಂಟಾಗುತ್ತಿದ್ದ ಶಬ್ದ ಹಾಗೂ ಸಂಚಾರದಿಂದ ಮೇಲೇಳುತ್ತಿದ್ದ ಧೂಳಿನಿಂದ ಮಾಲಿನ್ಯವಾಗುತ್ತಿತ್ತು. ಆದರೆ, ಲಾಕ್‌ಡೌನ್‌ನಿಂದ ವಾಹನ ಸಂಚಾರ, ಕೈಗಾರಿಕೆಗಳು, ಸಾವಿರಾರು ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದ್ದವು. ಹೀಗಾಗಿ, ಸಹಜವಾಗಿಯೇ ಧೂಳಿನ ಕಣಗಳು, ಗಂಧಕ, ಸಾರಜನಕ, ಅಮೋನಿಯ, ಕಾರ್ಬನ್‌ ಸೇರಿದಂತೆ ವಾತಾವರಣದಲ್ಲಿ ಮಾಲಿನ್ಯಕಾರಕ ಅಂಶಗಳು ಇಲ್ಲದಿದ್ದರಿಂದ ನಗರದ ಮಾಲಿನ್ಯ ಕೂಡ ತಗ್ಗಿತ್ತು.

ಲಾಕ್‌ಡೌನ್‌ ಎಫೆಕ್ಟ್‌: ಭಾರತದಲ್ಲಿ ವಾಯುಮಾಲಿನ್ಯ ಭಾರೀ ಪ್ರಮಾಣದಲ್ಲಿ ಇಳಿಕೆ

ಸಾಮಾನ್ಯವಾಗಿ ನಗರದ ಮಾಲಿನ್ಯ ಪ್ರಮಾಣ ಕನಿಷ್ಠ 70ರಿಂದ ಗರಿಷ್ಠ 115 ರ ನಡುವೆ ಇರುತ್ತದೆ. ಲಾಕ್‌ಡೌನ್‌ ಸಮಯದಲ್ಲಿ ಕನಿಷ್ಠ 48ರಿಂದ ಗರಿಷ್ಠ 69ಕ್ಕೆ ಕುಸಿದಿತ್ತು. ನಗರದ ಸಿಟಿ ರೈಲ್ವೆ ನಿಲ್ದಾಣದಲ್ಲಿ 59, ಹೆಬ್ಬಾಳ (ಪಶು ವೈದ್ಯಕೀಯ) 57, ಹೊಸೂರು ರಸ್ತೆ (ನಿಮ್ಹಾನ್ಸ್‌) ಬಳಿ 69, ಮೈಸೂರು ರಸ್ತೆ- 58, ಸಿಲ್ಕ್‌ ಬೋರ್ಡ್‌- 50, ಜಯನಗರ (ಶಾಲಿನಿ ಮೈದಾನ)- 51 ಮತ್ತು ಸಾಣೆ ಗುರುವನಹಳ್ಳಿಯಲ್ಲಿ 48ಕ್ಕೆ ಇಳಿದಿತ್ತು.

ಸಾಮಾನ್ಯವಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯು ವಾಯು ಗುಣಮಟ್ಟ ಸೂಚ್ಯಂಕದ ಪ್ರಮಾಣ (ಎಕ್ಯೂಐ) 0-50ರ ವರೆಗೆ ಗುಣಮಟ್ಟದ ಗಾಳಿ, 51-100ರ ವರೆಗೆ ಸಮಾಧಾನಕರ ಎಂದು ಪರಿಗಣಿಸಲಾಗುತ್ತಿದೆ.

ಮಾಪನ ಸ್ಥಳ ವಾಯು ಗುಣಮಟ್ಟ ಸೂಚ್ಯಂಕ

ಲಾಕ್‌ಡೌನ್‌ ಮೊದಲು ಲಾಕ್‌ಡೌನ್‌ ವೇಳೆ ಮೇ 19

ನಗರ ರೈಲ್ವೆ ನಿಲ್ದಾಣ 115 59 96
ಸಾಣೆಗುರುವನಹಳ್ಳಿ 70 48 58
ಸಿಲ್ಕ್‌ ಬೋರ್ಡ್‌ 87 59 87
ಹೆಬ್ಬಾಳ 86 57 78
ನಿಮ್ಹಾನ್ಸ್‌ 90 69 72
ಮೈಸೂರು ರಸ್ತೆ 89 58 69
ಜಯನಗರ 78 51 97