ಸಿದ್ಧಲಿಂಗಸ್ವಾಮಿ ವೈ.ಎಂ.

ಬಳ್ಳಾರಿ(ಏ.27): ಸದಾ ಕಾರ್ಖಾನೆಗಳ ಧೂಳು, ಎಡಬಿಡದೆ ಓಡಾಡುವ ವಾಹನಗಳ ಹೊಗೆ ಸೇರಿದಂತೆ ನಾನಾ ರೀತಿಯಿಂದ ಉಂಟಾಗುತ್ತಿದ್ದ ವಾಯು ಮಾಲಿನ್ಯದಿಂದ ನಲುಗಿಹೋಗಿದ್ದ ಸ್ಟೀಲ್‌ ಸಿಟಿ ಬಳ್ಳಾರಿಯಲ್ಲಿ ಮಹಾಮಾರಿ ಕೋರೋನಾದಿಂದ ಮಾಲಿನ್ಯ ತಗ್ಗಿದೆ.

ಹೌದು, ಲಾಕ್‌ಡೌನ್‌ಗೂ ಮುನ್ನ ಜಿಲ್ಲೆಯಲ್ಲಿನ ಕಾರ್ಖಾನೆಗಳು ಹೊರಸೂಸುವ ಧೂಳು, ಲಾರಿ, ಆಟೋ, ಬೈಕ್‌ ಸೇರಿದಂತೆ ಭಾರಿ ಮತ್ತು ಲಘು ವಾಹನಗಳ ಸಂಚಾರದಿಂದಾಗಿ ಪರಿಸರ ಮಾಲಿನ್ಯ ನಿರಂತರವಾಗಿ ಹೆಚ್ಚುತ್ತಲೇ ಸಾಗಿತ್ತು. ಅದರಲ್ಲೂ ಜಿಲ್ಲೆಯಲ್ಲಿ ಈಚೆಗೆ ವಾಹನಗಳ ಓಡಾಟವೂ ಗಣನೀಯವಾಗಿ ಏರುಗತಿಯಲ್ಲೇ ಸಾಗಿದ್ದು, ಇದರಿಂದ ಮಾಲಿನ್ಯ ಹೆಚ್ಚಾ​ಗಿತ್ತು. ಅಷ್ಟೇ ಅಲ್ಲದೇ, ಅದರಿಂದ ಆರೋಗ್ಯಕರ ವಾತಾವರಣವಿರದೇ ಜನರ ಅನಾರೋಗ್ಯಕ್ಕೂ ಕಾರಣವಾಗಿತ್ತು. ಮಾರಕವಾಗಿ ಪರಿಣಮಿಸಿರುವ ಕೊರೋನಾದಿಂದ ಇಡೀ ದೇಶವೇ ಲಾಕ್‌ಡೌನ್‌ ಆದ ಬಳಿಕ ಪರಿಸರ ಮಾಲಿನ್ಯದ ಪ್ರಮಾಣ ತಗ್ಗುತ್ತಿರುವುದು ಸಂತಸದ ಸಂಗತಿಯಾಗಿದ್ದು, ನೆಮ್ಮದಿ ಮೂಡಿಸುವ ವಿಷಯವಾಗಿದೆ.

ಇಡೀ ಜಗತ್ತಿಗೆ ಕೊರೋನಾ ಆತಂಕವಾದ್ರೆ ಬಳ್ಳಾರಿಗೆ ಡೆಂಗ್ಯೂ ಕಾಟ: ಆತಂಕದಲ್ಲಿ ಜನತೆ

ನಾನಾ ಕಾರ್ಖಾನೆಗಳಿಂದ ವಾಯುಮಾಲಿನ್ಯ

ಪ್ರಮುಖವಾಗಿ ಜಿಲ್ಲೆಯ ಹೊಸಪೇಟೆ, ಸಂಡೂರು ಹಾಗೂ ಬಳ್ಳಾರಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಸ್ಪಾಂಜ್‌ ಐರನ್‌ ಕಾರ್ಖಾನೆಗಳಿದ್ದು, ಇಲ್ಲಿಯೇ 130 ಮೈಕ್ರೋ ಗ್ರಾಂನಷ್ಟು ಪ್ರಮಾಣದಲ್ಲಿ ವಾಯು ಮಾಲಿನ್ಯ ಇರುತ್ತಿತ್ತು. ಇದನ್ನು ಅಪಾಯದ ವಲಯ ಎಂದು ಗುರುತಿಸಲಾಗುತ್ತದೆ. ಮಾಲಿನ್ಯದಿಂದಾಗಿ ಜನರನ್ನು ರೋಸಿ ಹೋಗುವಂತೆ ಮಾಡಿತ್ತು. ಅಷ್ಟೇ ಅಲ್ಲದೇ, ಸುತ್ತಮುತ್ತಲೂ ವಾಸಿಸುವ ಜನರಿಗೆ ನಿತ್ಯವೂ ಧೂಳಿನ ಅಭಿಷೇಕ ತಪ್ಪುತ್ತಿರಲಿಲ್ಲ. ಜೊತೆಗೆ ನಾನಾ ಬಗೆಯ ಗಂಭೀರ ಸ್ವರೂಪದ ಆರೋಗ್ಯ ತೊಂದರೆಗಳಿಗೆ ಕಾರಣವಾಗಿತ್ತು.

ಎನ್‌ಎಎಕ್ಯೂಎಸ್‌ (ನ್ಯಾಷನಲ್‌ ಆ್ಯಂಬಿಯಂಟ್‌ ಏರ್‌ ಕ್ವಾಲಿಟಿ ಸ್ಟಾಂಡರ್ಡ್ಸ್) ಪ್ರಕಾರ ದಿನದ ಒಂದು ಕ್ಯೂಬಿಕ್‌ ಮೀಟರ್‌ ಧೂಳಿನಲ್ಲಿ ಪಿಎಂ(ಪರ್ಟಿಕ್ಯೂಲೆಟ್‌ ಮ್ಯಾಟರ್‌)-10 ಕಣ 100 ಮೈಕ್ರೋ ಗ್ರಾಂ ಒಳಗಿರಬೇಕು. ಹೆಚ್ಚಿನ ಅಪಾಯಕಾರಿ ಪಿಎಂ 2.5 ಕಣ 60 ಮೈ.ಗ್ರಾಂ ಇರಬೇಕು. ಕಾರ್ಬನ್‌ ಮೋನಾಕ್ಸೈಡ್‌ ಪ್ರಮಾಣ 4 ಮಿಲಿಗ್ರಾಂ ಇರಬೇಕು. ಆದರೆ ಈ ಮುಂಚೆ ಪಿಎಂ -2.5 ಹಾಗೂ ಪಿಎಂ -10ನಲ್ಲಿ ಸದಾ 130 ರಷ್ಟು ಪ್ರಮಾಣದ ವಾಯುಮಾಲಿನ್ಯ ಇರುತ್ತಿತ್ತು.

ಪ್ರಮುಖವಾಗಿ ಕಾರ್ಖಾನೆಗಳ ಸ್ಥಗಿತದಿಂದಾಗಿ ಕಾರ್ಬನ್‌ ಮೋನಾಕ್ಸೈಡ್‌ ಹಾಗೂ ಮಾನವನ ಆರೋಗ್ಯಕ್ಕೆ ಹಾನಿ ಉಂಟು ಮಾಡಬಲ್ಲ ಧೂಳಿನ ಪಿಎಂ-2.5, ಪಿಎಂ-10 ಕಣಗಳು ಕಡಿಮೆಯಾಗಿವೆ. ಇದನ್ನು ಹೊರತುಪಡಿಸಿ ನೈಟ್ರೋಜನ್‌ ಡಯಾಕ್ಸೈಡ್‌, ಅಮೋನಿಯಾ, ಸಲ್ಫರ್‌ ಡೈಯಾಕ್ಸೈಡ್‌ ಪ್ರಮಾಣ ಕಡಿಮೆಯಾಗಿರುವುದು ಪರಿಸರ ಮಾಲಿನ್ಯ ಇಲಾಖೆ ನಡೆಸಿದ ಪರೀಕ್ಷೆಯಿಂದ ದೃಢವಾಗಿದೆ.

ಶೇ. 50 ರಷ್ಟು ಇಳಿಕೆ

ಲಾಕ್‌ಡೌನ್‌ ಇರುವ ಕಾರಣ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದಲೂ ಅಂದಾಜು ಶೇ. 50ರಷ್ಟುವಾಯುಮಾಲಿನ್ಯದ ಪ್ರಮಾಣ ಇಳಿಕೆಯಾಗಿರುವುದು ನೆಮ್ಮದಿ ಮೂಡಿಸುವ ಸಂಗತಿಯಾಗಿದೆ.

ಕೊಪ್ಪಳ-ರಾಯಚೂರಿನಲ್ಲಿ ತಗ್ಗಿದ ಮಾಲಿನ್ಯ:

ಬಳ್ಳಾರಿ ಜಿಲ್ಲೆ ಮಾತ್ರವಲ್ಲದೇ ಪಕ್ಕದ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿಯೂ ಕಾರ್ಖಾನೆಗಳಿದ್ದು, ಇದರಿಂದ ಪರಿಸರ ಮಾಲಿನ್ಯ ಹೆಚ್ಚುತ್ತಲೇ ಸಾಗಿತ್ತು. ಆದರೆ ಕೊರೋನಾ ಎಫೆಕ್ಟ್ನಿಂದ ಲಾಕ್‌ಡೌನ್‌ ಆದ ಪರಿಣಾಮ ಅಲ್ಲಿಯೂ ಮಾಲಿನ್ಯ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದೆ. ಬಳ್ಳಾರಿಯಲ್ಲಿ ಶೇ. 50ರಷ್ಟು ಮಾಲಿನ್ಯ ಇಳಿಕೆಯಾದರೆ ರಾಯಚೂರಿನಲ್ಲಿ ಶೇ. 30 ರಷ್ಟು ಮತ್ತು  ಕೊಪ್ಪಳದಲ್ಲಿ ಶೇ. 25ರಿಂದ 30 ರಷ್ಟು ಮಾಲಿನ್ಯ ಪ್ರಮಾಣ ಇಳಿಕೆಯಾಗಿರುವುದು ಸಂತಸದ ಸಂಗತಿಯಾಗಿದೆ.

ಸ್ವಯಂ ಜಾಗೃತಿ ಅತ್ಯಗತ್ಯ:

ಪ್ರತಿನಿತ್ಯ ವಿವಿಧ ರೀತಿಯಲ್ಲಿ ಪರಿಸರ ಮಾಲಿನ್ಯ ಉಂಟಾಗುತ್ತಲೇ ಇರುತ್ತದೆ. ಇದು ಕೇವಲ ಮನುಷ್ಯನ ಆರೋಗ್ಯದ ಮೇಲೆ ಮಾತ್ರ ದುಷ್ಪರಿಣಾಮ ಬೀರುವುದಿಲ್ಲ, ವಾಸಿಸುವ ಪ್ರತಿಯೊಂದು ಜೀವಿಗಳಿಗೂ ಹಾನಿಕರವಾಗಿದೆ. ಆದರೆ, ಇದರ ಬಗ್ಗೆ ಎಲ್ಲರಲ್ಲೂ ಸ್ವಯಂ ಜಾಗೃತಿ ಮೂಡಬೇಕಾಗಿರುವುದು ಅತ್ಯಗತ್ಯವಾಗಿದೆ. ಅಷ್ಟೇ ಅಲ್ಲ ಕಾರ್ಖಾನೆಗಳ ಮಾಲೀಕರು ಸಹ ಮಾಲಿನ್ಯವಾಗದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದರ ಮೂಲಕ ಪರಿಸರದ ಶುದ್ಧತೆಯನ್ನು ಕಾಪಾಡಬೇಕಾಗಿದೆ ಎಂಬುದು ಪರಿಸರ ಪ್ರೇಮಿಗಳ ಒತ್ತಾಯವಾಗಿದೆ.

ಲಾಕ್‌ಡೌನ್‌ ಆದ ಬಳಿಕ ಬಳ್ಳಾರಿ ಜಿಲ್ಲೆಯಲ್ಲಿ ಮಾಲಿನ್ಯದ ಪ್ರಮಾಣ ಗಣನೀಯವಾಗಿ ತಗ್ಗಿದೆ. ಜೊತೆಗೆ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕೂಡ ಮಾಲಿನ್ಯದ ಪ್ರಮಾಣ ಇಳಿಕೆಯಾಗಿದೆ ಎಂದು ಬಳ್ಳಾರಿಯ ಹಿರಿಯ ಪರಿಸರ ಅಧಿಕಾರಿ ಎಂ. ಶ್ರೀಧರ ಅವರು ಹೇಳಿದ್ದಾರೆ.

ಪರಿಸರ ಶುದ್ಧವಾಗಿದ್ದರೆ ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಮಹಾಮಾರಿ ಕೊರೋನಾ ವೈರಸ್‌ ಸೃಷ್ಟಿಸುತ್ತಿರುವ ಅವಾಂತರವನ್ನು ನಾವೆಲ್ಲರೂ ಕಣ್ಣಾರೆ ನೋಡುತ್ತಿದ್ದೇವೆ. ಇನ್ನಾದರೂ ಪರಿಸರ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಬೇಕಾಗಿದೆ ಎಂದು ಬಳ್ಳಾರಿಯ ಪರಿಸರ ಪ್ರೇಮಿ ಎಸ್‌.ಎಂ. ಕೊಟ್ರಯ್ಯ ತಿಳಿಸಿದ್ದಾರೆ.