* ಮಳೆಯ ಅಬ್ಬರದಿಂದ ಒಳ ಹರಿವು ಹೆಚ್ಚಳ* ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಶನಿವಾರ 90.40 ಅಡಿಗೆ ಏರಿಕೆ* ಇನ್ನೆರಡು ದಿನಗಳಲ್ಲಿ ಯಗಚಿ ಜಲಾಶಯ ಭರ್ತಿ

ಬೆಂಗಳೂರು(ಜೂ.20): ರಾಜ್ಯದಲ್ಲಿ ಮಳೆಯಾರ್ಭಟ ಮುಂದುವರಿದಿರುವುದರಿಂದ ಆಲಮಟ್ಟಿ, ಕೆಆರ್‌ಎಸ್‌, ಹೇಮಾವತಿ, ಕಬಿನಿ, ತುಂಗಭದ್ರ ಸೇರಿದಂತೆ ರಾಜ್ಯ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಳವಾಗಿದೆ.

ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಶನಿವಾರ 90.40 ಅಡಿಗೆ ಏರಿದೆ. ಅಣೆಕಟ್ಟೆಗೆ 18,556 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಅಣೆಕಟ್ಟೆಯಿಂದ 2164 ಕ್ಯುಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ.

KRS ನೀರಿನ ಮಟ್ಟ 82.54 ಅಡಿಗೆ ಕುಸಿತ: ಕಳೆದ ವರ್ಷಕ್ಕಿಂತ 8 ಅಡಿ ಕಡಿಮೆ

ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ 16,200 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 5000 ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗಿದೆ. ಬಳ್ಳಾರಿಯ ತುಂಗಭದ್ರಾ ಜಲಾಶಯಕ್ಕೆ ಒಂದೇ ದಿನದಲ್ಲಿ 2 ಟಿಎಂಸಿಯಷ್ಟುನೀರು ಹರಿದು ಬಂದಿದೆ. ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯಕ್ಕೆ 29,473 ಕ್ಯು. ನೀರು ಬರುತ್ತಿದೆ. ಭದ್ರಾ ಜಲಾಶಯಕ್ಕೆ 17,885 ಕ್ಯು. ನೀರು ಹರಿದು ಬರುತ್ತಿದ್ದು, 73 ಕ್ಯು. ನೀರನ್ನು ಹೊರಹರಿಸಲಾಗುತ್ತಿದೆ.

ಹಾಸನ ಸಮೀಪದ ಯಗಚಿ ಜಲಾಶಯಕ್ಕೆ ಪ್ರತಿನಿತ್ಯ 3 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಭರ್ತಿಯಾಗಲು ಇನ್ನು ಕೇವಲ 1.50 ಅಡಿ ಮಾತ್ರ ಬಾಕಿ ಇದೆ. ಇನ್ನೆರಡು ದಿನಗಳಲ್ಲಿ ಜಲಾಶಯ ಭರ್ತಿಯಾಗಲಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾ ಜಲಾಶಯದಿಂದ 5500 ಕ್ಯುಸೆಕ್‌ ನೀರು ಹೊರಬಿಡಲಾಗಿದೆ. ಒಳಹರಿವು 23742 ಕ್ಯುಸೆಕ್‌ಗೆ ಏರಿದೆ. ಸುರಕ್ಷತೆ ಹಿನ್ನೆಲೆಯಲ್ಲಿ ನೀರು ಹೊರಬಿಡಲಾಗಿದೆ. ಕಲಬುರಗಿಯ ಚಿಂಚೋಳಿ ತಾಲೂಕಿನ ಕೆಳದಂಡೆ ಮುಲ್ಲಾಮಾರಿ ಅಣೆಕಟ್ಟೆ ಬಹುತೇಕ ತುಂಬುವ ಹಂತಕ್ಕೆ ಬಂದಿದ್ದು, ನಿತ್ಯ 300 ಕ್ಯುಸೆಕ್‌ ನೀರನ್ನು ಮುಲ್ಲಾಮಾರಿ ನದಿಗೆ ಹರಿದು ಬಿಡಲಾಗುತ್ತಿದೆ.