Asianet Suvarna News Asianet Suvarna News

ಹಾಲು ಪ್ರೋತ್ಸಾಹ ದರ 10ಕ್ಕೆ ಹೆಚ್ಚಿಸಿ: ಜಾರಕಿಹೊಳಿ

ಜಾನುವಾರುಗಳ ನಿರ್ವಹಣೆ ವೆಚ್ಚ ಅಧಿಕವಾಗುತ್ತಿದ್ದು ಸರ್ಕಾರ ಪ್ರತಿ ಲೀಟರ್‌ ಹಾಲಿಗೆ ನೀಡುತ್ತಿರುವ 5 ರು. ಪ್ರೋತ್ಸಾಹ ಧನ ಸಾಕಾಗುವುದಿಲ್ಲ: ಬಾಲಚಂದ್ರ ಜಾರಕಿಹೊಳಿ 

Increase Milk Incentive Price to 10 rs Says Balachandra Jarkiholi grg
Author
First Published Nov 27, 2022, 6:30 AM IST

ಬೆಂಗಳೂರು(ನ.27):  ಪ್ರತಿ ಲೀಟರ್‌ ಹಾಲಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಧನವನ್ನು 5 ರುಪಾಯಿಯಿಂದ 10 ರುಪಾಯಿಗೆ ಹೆಚ್ಚಳ ಮಾಡಬೇಕು ಎಂದು ಕರ್ನಾಟಕ ಹಾಲು ಮಹಾ ಮಂಡಳ(ಕೆಎಂಎಫ್‌) ಅಧ್ಯಕ್ಷರೂ ಆಗಿರುವ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದ್ದಾರೆ.

ಹೆಬ್ಬಾಳದ ಜಿಕೆವಿಕೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಹಾಲು ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಾನುವಾರುಗಳ ನಿರ್ವಹಣೆ ವೆಚ್ಚ ಅಧಿಕವಾಗುತ್ತಿದ್ದು ಸರ್ಕಾರ ಪ್ರತಿ ಲೀಟರ್‌ ಹಾಲಿಗೆ ನೀಡುತ್ತಿರುವ 5 ರು. ಪ್ರೋತ್ಸಾಹ ಧನ ಸಾಕಾಗುವುದಿಲ್ಲ. ಆದ್ದರಿಂದ 10 ರುಪಾಯಿಯನ್ನಾದರೂ ನೀಡಬೇಕು. ಇದರಿಂದ ರೈತರಿಗೆ ಸಹಾಯಕವಾಗುತ್ತದೆ ಎಂದು ವಿವರಿಸಿದರು.

ಹಾಲಿನ ದರ 3 ರೂ. ಹೆಚ್ಚಳ ಬೇಡವೆಂದ ಸಿಎಂ ಬೊಮ್ಮಾಯಿ

5 ರು. ಪ್ರೋತ್ಸಾಹಧನ ನೀಡುತ್ತಿರುವುದರಿಂದ ಸರ್ಕಾರಕ್ಕೆ ವಾರ್ಷಿಕವಾಗಿ 1200 ಕೋಟಿ ರು. ಹೊರೆಯಾಗುತ್ತಿದೆ. 10 ರು. ನೀಡಲು ಸಾಧ್ಯವಾಗದಿದ್ದರೆ 8 ಅಥವಾ 7 ರುಪಾಯಿಯನ್ನಾದರೂ ನೀಡಬೇಕು. ಇದಕ್ಕೆ ಹೆಚ್ಚುವರಿಯಾಗಿ 800 ರು. ಬೇಕಾಗಬಹುದು. ಆದ್ದರಿಂದ ಮುಂಬರುವ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರೋತ್ಸಾಹ ಧನ ಹೆಚ್ಚಳ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಸಭೆಗೆ ಮನೆಗೊಬ್ಬರು ಬನ್ನಿ:

ಹಾಲಿನ ಪ್ರೋತ್ಸಾಹ ಧನ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ಜನವರಿಯಲ್ಲಿ ಸಭೆ ಆಯೋಜಿಸಲಿದ್ದು, ಈ ಸಭೆಗೆ ಮನೆಗೊಬ್ಬರು ಆಗಮಿಸಿ ಬೆಂಬಲ ನೀಡಬೇಕು. ಪ್ರೋತ್ಸಾಹ ಧನ ಹೆಚ್ಚಳ ಮಾಡಬೇಕೆಂದು ಬಸವರಾಜ ಬೊಮ್ಮಾಯಿ, ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮನವಿ ಸಲ್ಲಿಸೋಣ. ಯಾವುದೇ ಕಾರಣಕ್ಕೂ ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ಕೆಎಂಎಫ್‌ ಮತ್ತು 14 ಹಾಲು ಒಕ್ಕೂಟಗಳು ನಿಮ್ಮ ಬೆಂಬಲಕ್ಕಿವೆ ಎಂದು ಭರವಸೆ ನೀಡಿದರು.

Nandini Milk Price Hike: ನಂದಿನಿ ಹಾಲು, ಮೊಸರು ದರ ₹2 ಹೆಚ್ಚಳ: ನಾಳೆಯಿಂದಲೇ ಜಾರಿ

ದೇಶದಲ್ಲಿ ಕ್ಷೀರಕ್ರಾಂತಿ ಮಾಡಿದ ಡಾ.ವರ್ಗಿಸ್‌ ಕುರಿಯನ್‌ ಅವರ ಜನ್ಮ ದಿನಾಚರಣೆ ಪ್ರಯುಕ್ತ ವಿಶ್ವ ಹಾಲು ದಿನಾಚರಣೆ ಕಾರ್ಯಕ್ರಮವನ್ನು ಕರ್ನಾಟಕದಲ್ಲಿ ಆಚರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿರುವುದು ಪ್ರಶಂಸನೀಯ. ಕುರಿಯನ್‌ ಅವರ ಕಾರ್ಯವನ್ನು ಕರ್ನಾಟಕದಲ್ಲಿ ಕೃಷ್ಣಪ್ಪನವರು ಮಾಡಿದ್ದರು. ಕುರಿಯನ್‌ ಅವರು ಗುಜರಾತ್‌ನಲ್ಲಿ ಅಮೂಲ್‌ ಸ್ಥಾಪಿಸಿ ಹಾಲು ಉದ್ಯಮಕ್ಕೆ ಇಡೀ ದೇಶದಲ್ಲಿಯೇ ಮುನ್ನುಡಿ ಬರೆದ ಕೀರ್ತಿಗೆ ಭಾಜನರಾಗಿದ್ದಾರೆ ಎಂದು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಸಾಧನೆ ಮಾಡಿದ ಹಲವರನ್ನು ಗೌರವಿಸಲಾಯಿತು. ಕೇಂದ್ರ ಪಶುಸಂಗೋಪನಾ ರಾಜ್ಯ ಸಚಿವ ಸಂಜೀವ್‌ಕುಮಾರ್‌ ಬಾಲ್ಯನ್‌, ಕೇಂದ್ರ ಪಶುಪಾಲನಾ ಇಲಾಖೆ ಕಾರ್ಯದರ್ಶಿ ರಾಕೇಶ್‌ ಕುಮಾರ್‌ ಸಿಂಗ್‌, ಅಪರ ಕಾರ್ಯದರ್ಶಿ ವರ್ಷಾ ಜೋಶಿ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್‌.ವಿ.ಸುರೇಶ್‌ ಉಪಸ್ಥಿತರಿದ್ದರು.
 

Follow Us:
Download App:
  • android
  • ios