ವಿದ್ಯುತ್‌ ಬಿಲ್‌ ಫಿಕ್ಸೆಡ್‌ ಚಾರ್ಜ್‌ ದಿಢೀರ್‌ ಹೆಚ್ಚಳ..!

ಏಕಾಏಕಿ ಮೇ ತಿಂಗಳ ಬಿಲ್‌ನಲ್ಲಿ ನಿಗದಿತ ಶುಲ್ಕ ಏರಿಕೆ: ಜನರ ಆಕ್ರೋಶ, ವಿದ್ಯುತ್‌ ದರವೂ ಏರಿಕೆ: ಒಟ್ಟಾರೆ ಬಿಲ್‌ ಭರ್ಜರಿ ದುಬಾರಿ

Increase in Electricity Bill Fixed Charge in Karnataka grg

ಬೆಂಗಳೂರು(ಜೂ.07):  ರಾಜ್ಯಾದ್ಯಂತ ಸಾರ್ವಜನಿಕರ ವಿದ್ಯುತ್‌ ಬಿಲ್ಲುಗಳಲ್ಲಿ ನಿಗದಿತ ಶುಲ್ಕವು (ಫಿಕ್ಸೆಡ್‌ ಚಾರ್ಜ್‌) ಕಳೆದ ತಿಂಗಳಿಗಿಂತ ಹೆಚ್ಚಾಗಿದೆ. ಗೃಹ ಬಳಕೆ ವಿದ್ಯುತ್‌ ಸಂಪರ್ಕಕ್ಕೆ ಪ್ರತಿ ಕಿ.ವ್ಯಾ. 100 ರು. ನಿಗದಿತ ಶುಲ್ಕವನ್ನು ಮೇ ತಿಂಗಳಿನಿಂದ ಅನ್ವಯವಾಗುವಂತೆ 110ಕ್ಕೆ ಹೆಚ್ಚಳ ಮಾಡಲಾಗಿದೆ. ಜತೆಗೆ ವಾಣಿಜ್ಯ ಬಳಕೆ ಸಂಪರ್ಕಗಳಿಗೆ ಪ್ರತಿ ಕಿ.ವ್ಯಾ.ಗೆ 125 ರು. ಇದ್ದದ್ದು 200 ರು.ಗಳಿಗೆ ಹೆಚ್ಚಳ ಮಾಡಲಾಗಿದೆ. ನಿಗದಿತ ಶುಲ್ಕ ಹೆಚ್ಚಳವು ಮೇ ತಿಂಗಳ ಬಿಲ್‌ ಜೂನ್‌ನಲ್ಲಿ ಬಂದ ಬಳಿಕ ಬಹಿರಂಗವಾಗಿದೆ.

ಪ್ರತಿ ಯುನಿಟ್‌ಗೆ 70 ಪೈಸೆಯಂತೆ ಈಗಾಗಲೇ ವಿದ್ಯುತ್‌ ಶುಲ್ಕ ಹೆಚ್ಚಳದಿಂದ ತತ್ತರಿಸಿರುವ ಗ್ರಾಹಕರಿಗೆ ನಿಗದಿತ ಶುಲ್ಕ ಹೆಚ್ಚಳವು ತೀವ್ರ ಅಸಮಾಧಾನ ಉಂಟುಮಾಡಿದೆ. ಗೃಹಬಳಕೆ ಸಂಪರ್ಕಕ್ಕೆ 50 ಕೆ.ವಿ.ವರೆಗೆ ಪ್ರತಿ ಕೆ.ವಿಗೆ 110 ರು. ನಿಗದಿತ ಶುಲ್ಕ ನಿಗದಿ ಮಾಡಿದ್ದು, 50 ಕೆ.ವಿ. ಮೇಲ್ಪಟ್ಟಬಳಕೆಗೆ ಪ್ರತಿ ಕೆ.ವಿ.ಗೆ 210 ರು. ನಿಗದಿ ಮಾಡಲಾಗಿದೆ. ವಾಣಿಜ್ಯ ಬಳಕೆ ಸಂಪರ್ಕಗಳಿಗೆ 50 ಕೆ.ವಿ. ಮೇಲಿನ ಬಳಕೆಗೆ ಪ್ರತಿ ಕೆ.ವಿ.ಗೆ 300 ರು. ನಿಗದಿ ಮಾಡಲಾಗಿದೆ.

ಬಿಲ್‌ ಪಾವತಿಸದ ನೆಪವೊಡ್ಡಿ ಗ್ರಾಪಂಗಳ ವಿದ್ಯುತ್‌ ಕಡಿತ ಮಾಡಬೇಡಿ: ಶಾಸಕ ಮಂಥರ್‌ ಗೌಡ ಸೂಚನೆ

ಗೊಂದಲ ಸೃಷ್ಟಿಸಿದ ಕೆಇಆರ್‌ಸಿ ಆದೇಶ:

ಮೇ 12ರಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಏ.1ರಿಂದ ಪೂರ್ವಾನ್ವಯ ಆಗುವಂತೆ ಪ್ರತಿ ಯುನಿಟ್‌ಗೆ 70 ಪೈಸೆ ಹೆಚ್ಚಳ ಮಾಡಿದೆ. ಹೆಚ್ಚಳ ಮಾಡಿರುವ 70 ಪೈಸೆ ವಿದ್ಯುತ್‌ ದರದಲ್ಲಿ ಪ್ರತಿ ಯುನಿಟ್‌ಗೆ 57 ಪೈಸೆ ನಿಗದಿತ ಶುಲ್ಕವಾಗಿ ಹಾಗೂ 13 ಪೈಸೆ ಇಂಧನ ಶುಲ್ಕ (ವಿದ್ಯುತ್‌) ಆಗಿ ಸಂಗ್ರಹಿಸಲು ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಆದೇಶದಲ್ಲಿ ಸೂಚಿಸಲಾಗಿದೆ. ಜತೆಗೆ ಏಪ್ರಿಲ್‌ ಹಾಗೂ ಮೇ ಎರಡೂ ತಿಂಗಳ ವಿದ್ಯುತ್‌ ಶುಲ್ಕದ ಹೆಚ್ಚಳ ಮೊತ್ತವನ್ನು ಮೇ ಬಿಲ್ಲಿನಲ್ಲಿ ಬಾಕಿಯಾಗಿ ಸಂಗ್ರಹಿಸಲು ಸೂಚಿಸಿತ್ತು. ಆದರೆ, ಬೆಸ್ಕಾಂ ಜೂನ್‌ನಲ್ಲಿ ವಿತರಿಸಿರುವ ಬಿಲ್ಲುಗಳಲ್ಲಿ 70 ಪೈಸೆ ಹೆಚ್ಚಳವನ್ನು ವಿದ್ಯುತ್‌ ಬೆಲೆಗೆ ಸೇರಿಸಿದೆ. ಅದನ್ನು ಹೊರತುಪಡಿಸಿ ನಿಗದಿತ ಶುಲ್ಕವನ್ನು ಕ್ರಮವಾಗಿ ಗೃಹಬಳಕೆಗೆ 10 ರು. ಹಾಗೂ ವಾಣಿಜ್ಯ ಬಳಕೆಗೆ 75 ರು. ಹೆಚ್ಚಳ ಮಾಡಲಾಗಿದೆ.

ಗೃಹಜ್ಯೋತಿ ಫಲಾನುಭವಿಗಳಿಗೆ ಉಚಿತ:

ಗೃಹಜ್ಯೋತಿ ಯೋಜನೆಯ ಅರ್ಹ ಫಲಾನುಭವಿಗಳ ನಿಗದಿತ ಬಳಕೆಯ ವಿದ್ಯುತ್‌ ಶುಲ್ಕವನ್ನು ಸರ್ಕಾರವೇ ಪಾವತಿಸಲಿದೆ. ಹೀಗಾಗಿ ನಿಗದಿತ ಶುಲ್ಕ ಹೆಚ್ಚಳದಿಂದ ಗೃಹಜ್ಯೋತಿ ಫಲಾನುಭವಿಗಳಿಗೆ ಹೊರೆ ಆಗುವುದಿಲ್ಲ. ಆದರೆ ಏಪ್ರಿಲ… ಹಾಗೂ ಮೇ ತಿಂಗಳ ಬಾಕಿ ಪಾವತಿ ಗ್ರಾಹಕರ ಹೊಣೆಯಾಗಿರುವುದರಿಂದ ಮೇ ಬಿಲ… ಗ್ರಾಹಕರ ಜೇಬು ಸುಡುವಂತೆ ಮಾಡಿದೆ.

200 ಯೂನಿಟ್‌ ವಿದ್ಯುತ್‌ ಫ್ರೀ: ಜು.1ರಿಂದ ಜಾರಿ

ಗ್ರಾಹಕರಲ್ಲಿ ಗೊಂದಲ, ಆಕ್ರೋಶ:

ವಿದ್ಯುತ್‌ ಬಿಲ್ಲಿನಲ್ಲಿ ನಿಗದಿತ ಶುಲ್ಕ ಹೆಚ್ಚಾಗಿರುವುದು ಹಾಗೂ ತಾವು ಕಳೆದ ತಿಂಗಳ ಶುಲ್ಕ ಪಾವತಿಸಿದ್ದರೂ ಬಾಕಿ ಎಂದು ಮೊತ್ತ ನಮೂದು ಮಾಡಿರುವುದರಿಂದ ಸಾರ್ವಜನಿಕರು ಗೊಂದಲಕ್ಕೊಳಗಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೃಹಜ್ಯೋತಿ ಅಡಿ ಉಚಿತ ವಿದ್ಯುತ್‌ ಘೋಷಿಸಿದ ಸರ್ಕಾರ ಹಿಂಬಾಗಿಲಿನಿಂದ ಪರೋಕ್ಷ ಶುಲ್ಕಗಳ ಮೂಲಕ ಸುಲಿಗೆ ಮಾಡುತ್ತಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ತಾತ್ಕಾಲಿಕ ಸಂಪರ್ಕದ ನಿಗದಿತ ಶುಲ್ಕ ಕಡಿತ:

ಇನ್ನು ಕೆಇಆರ್‌ಸಿಯು ತಾತ್ಕಾಲಿಕ ವಿದ್ಯುತ್‌ ಸಂಪರ್ಕಕ್ಕೆ ವಿಧಿಸುತ್ತಿದ್ದ ದುಬಾರಿ ನಿಗದಿತ ಶುಲ್ಕ ಕಡಿತ ಮಾಡಿದೆ. ತನ್ಮೂಲಕ ಮನೆ ನಿರ್ಮಾಣ ಮತ್ತಿತರ ಅನುಕೂಲಕ್ಕಾಗಿ ತಾತ್ಕಾಲಿಕ ಸಂಪರ್ಕ ಪಡೆಯುವವರು ನಿಟ್ಟಿಸಿರು ಬಿಡುವಂತಾಗಿದೆ. ಈ ಮೊದಲು ಒಂದು ಎಚ್‌ಪಿ ವಿದ್ಯುತ್‌ ಬಳಕೆಯ ತಾತ್ಕಾಲಿಕ ವಿದ್ಯುತ್‌ ಸಂಪರ್ಕಕ್ಕೆ ಪ್ರತಿ ವಾರಕ್ಕೆ 250 ರು. ನಿಗದಿತ ಶುಲ್ಕ ಸಂಗ್ರಹಿಸಲಾಗುತ್ತಿತ್ತು. ಅಂದರೆ 1 ಎಚ್‌ಪಿ (0.74 ಕೆ.ವಿ) ಸಾಮರ್ಥ್ಯದ ಸಂಪರ್ಕಕ್ಕೆ ತಿಂಗಳಿಗೆ ತೆರಿಗೆ ಸೇರಿ 1,100 ರು. ಸಂಗ್ರಹಿಸಲಾಗುತ್ತಿತ್ತು. 5 ಎಚ್‌ಪಿ ಸಂಪರ್ಕ ಪಡೆಯುವವರು ವಿದ್ಯುತ್‌ ಬಳಕೆ ಮಾಡಲಿ ಬಿಡಲಿ ತಿಂಗಳಿಗೆ 5,500 ರು. ನಿಗದಿತ ಶುಲ್ಕ ಪಾವತಿಸಬೇಕಾಗಿತ್ತು. ಇದೀಗ ಜೂ.1 ರಿಂದ ಅನ್ವಯವಾಗುವಂತೆ 1 ಎಚ್‌ಪಿ ಸಾಮರ್ಥ್ಯದ ಸಂಪರ್ಕಕ್ಕೆ ತಿಂಗಳಿಗೆ 200 ರು. ಮಾತ್ರ ನಿಗದಿತ ಸಂಪರ್ಕ ಶುಲ್ಕ ಸಂಗ್ರಹಿಸಲು ಆದೇಶಿಸಲಾಗಿದೆ.

Latest Videos
Follow Us:
Download App:
  • android
  • ios