ಉಡುಪಿ[ಜ.24]: ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ, ಪ್ರಥಮ ದರ್ಜೆ ಗುತ್ತಿಗೆದಾರ ಮುನಿಯಾಲು ಉದಯ ಕುಮಾರ್‌ ಶೆಟ್ಟಿಅವರ ವ್ಯವಹಾರ ಕಚೇರಿ ಹಾಗೂ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಬೆಂಗಳೂರಿನ ಅಧಿಕಾರಿಗಳು ಬುಧವಾರ ದಾಳಿ ಮಾಡಿ ಶೋಧ ನಡೆಸಿದ್ದಾರೆ.

ಬುಧವಾರ ಮುಂಜಾನೆ ಎರಡು ಬಾಡಿಗೆ ಇನೋವಾ ಕಾರಿನಲ್ಲಿ ಆಗಮಿಸಿದ ಅಧಿಕಾರಿಗಳು ನೇರವಾಗಿ ಉದಯ ಕುಮಾರ್‌ ಶೆಟ್ಟಿಮನೆಗೆ ತೆರಳಿ ತನಿಖೆ ನಡೆಸಿದ್ದಾರೆ. ಉದಯ ಕುಮಾರ್‌ ಶೆಟ್ಟಿಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಅಕಾಂಕ್ಷಿಯಾಗಿದ್ದರು. ಟಿಕೆಟ್‌ಗಾಗಿ ಸಚಿವರೊಬ್ಬರಿಗೆ ಹಣ ನೀಡಿರುವ ಆರೋಪ ಕೂಡ ಇವರ ಮೇಲೆ ಕೇಳಿಬಂದಿತ್ತು. ಸ್ವತಃ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರೇ ಉದಯ ಕುಮಾರ್‌ ಶೆಟ್ಟಿವಿರುದ್ಧ ತಿರುಗಿ ಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಉದಯ ಕುಮಾರ್‌ ಶೆಟ್ಟಿಅವರ ಮೇಲಿನ ಐಟಿ ದಾಳಿ ತೀವ್ರ ಕುತೂಹಲ ಮೂಡಿಸಿದೆ.

ಗಣಿ ಉದ್ಯಮಿ ಮನೆ ಮೇಲೂ ದಾಳಿ:

ಗ್ರಾನೈಟ್‌ ಉದ್ಯಮದಲ್ಲಿ ಸುದ್ದಿ ಮಾಡಿರುವ ಗಣಿ ಉದ್ಯಮಿ, ಕೇರಳದ ಮೂಲದ ಸಿ.ಎಂ. ಜೋಯ್‌ ಎಂಬವರ ಕಚೇರಿ, ಕ್ವಾರಿ ಹಾಗೂ ಮನೆಗೆ ದಾಳಿ ನಡೆಸಿರುವ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.

ಏತನ್ಮಧ್ಯೆ, ಮಾಜಿ ಶಾಸಕ ಗೋಪಾಲ ಪೂಜಾರಿ ಅವರ ಆಪ್ತರಾಗಿದ್ದ, ಗುತ್ತಿಗೆದಾರ ರಾಜೇಶ್‌ ಕಾರಂತ್‌ ಅವರ ಮನೆ, ಕಚೇರಿಗಳ ಮೇಲೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಆದರೆ, ಇದು ಇದು ಖಚಿತವಾಗಿಲ್ಲ.