ಬೆಂಗಳೂರು (ಫೆ.12):  ಮದ್ಯ ತಯಾರಿಕಾ ಕ್ಷೇತ್ರದ ಪ್ರಮುಖ ಕಂಪನಿ ಖೋಡೇಸ್‌ ಗ್ರೂಪ್‌ನ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 878.82 ಕೋಟಿ ರು.ಗಳಷ್ಟುಅಘೋಷಿತ ಆದಾಯವನ್ನು ಪತ್ತೆ ಹಚ್ಚಿದ್ದಾರೆ.

"

ಮಂಗಳವಾರ ಖೋಡೇಸ್‌ ಗ್ರೂಪ್‌ನ ಮಾಲೀಕರ ಮನೆ, ಕಚೇರಿ ಸೇರಿದಂತೆ 26 ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದ ಅಧಿಕಾರಿಗಳು ಅವುಗಳನ್ನು ಪರಿಶೀಲನೆ ನಡೆಸಿದಾಗ 878 ಕೋಟಿ ರು. ನಷ್ಟುಅಘೋಷಿತ ಆದಾಯ ಪತ್ತೆಯಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಖೋಡೇಸ್‌ ಗ್ರೂಪ್‌ ಅಪಾರ ಪ್ರಮಾಣದಲ್ಲಿ ಭೂಮಿಯನ್ನು ಹೊಂದಿದ್ದು, ವಸತಿ ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಬೆಂಗಳೂರಿನ ಬಿಲ್ಡರ್‌ಗಳ ಜತೆಗೂಡಿ 692.82 ಕೋಟಿ ರು. ಆರ್ಥಿಕ ವ್ಯವಹಾರ ನಡೆಸುತ್ತಿರುವ ದಾಖಲೆಗಳು ಸಿಕ್ಕಿವೆ. ಕೇರಳ ಮೂಲದ ಮದ್ಯ ಉತ್ಪಾದನಾ ಘಟಕವೊಂದರ ಜತೆ 74 ಕೋಟಿ ರು. ವಹಿವಾಟು ನಡೆಸಿದ್ದು, ಇದನ್ನು ಲೆಕ್ಕದಲ್ಲಿ ತೋರಿಸಿಲ್ಲ. 17 ಕೋಟಿ ರು. ನಕಲಿ ವೆಚ್ಚವನ್ನು ತೋರಿಸಲಾಗಿದೆ. 9 ಕೋಟಿ ರು. ವಿವರಿಸಲಾಗದ ವೆಚ್ಚ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸೆನ್ಸೆಕ್ಸ್‌ ಭರ್ಜರಿ ನೆಗೆತ: 51 ಸಾವಿರದ ‘ಗಡಿ’ಪಾರು ...

ಹಲವು ವರ್ಷಗಳಿಂದ ತಮ್ಮ ಉದ್ಯೋಗಿಗಳು ಮತ್ತು ಸಹವರ್ತಿಗಳ ಹೆಸರಲ್ಲಿ ಬೇನಾಮಿ ಆಸ್ತಿಗಳಲ್ಲಿ ಕಂಪನಿಯು ಹೆಚ್ಚಿನ ಸಂಖ್ಯೆಯಲ್ಲಿ ಹೂಡಿಕೆ ಮಾಡಿದೆ. 150 ಕೋಟಿ ರು.ಗಿಂತ ಹೆಚ್ಚು ಮೊತ್ತವನ್ನು 35 ಮಂದಿಯ ಹೆಸರಲ್ಲಿ ಬೇನಾಮಿ ಹೂಡಿಕೆ ಮಾಡಿರುವುದು ಶೋಧ ಕಾರ್ಯ ವೇಳೆ ಪತ್ತೆಯಾಗಿದೆ. ಅಲ್ಲದೇ, ವಿದೇಶಿ ಆಸ್ತಿಗಳು ಸಹ ಪತ್ತೆಯಾಗಿವೆ. ಕಂಪನಿಯ ನಿರ್ದೇಶಕರ ಹೆಸರಲ್ಲಿ ಆ ಆಸ್ತಿಗಳಿವೆ. ತನಿಖೆಯು ಮುಂದುವರಿದಿದ್ದು, ಸ್ಪಷ್ಟನೆಗಾಗಿ ಕಂಪನಿಯ ಮುಖ್ಯಸ್ಥರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಇಲಾಖೆ ಮಾಹಿತಿ ನೀಡಿದೆ.