ಒಂದೇ ಕುಟುಂಬದ ಐವರು ಸೇರಿ 21 ಮಂದಿಗೆ ಸೋಂಕು| ರಾಯಬಾಗ ತಾಲೂಕಿನ ಇಡೀ ಹಳ್ಳಿ ಕ್ವಾರಂಟೈನ್‌

ರಾಯಬಾಗ(ಮಾ.15): ನೆರೆಯ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಭಾರಿ ಪ್ರಮಾಣದಲ್ಲಿ ಹಬ್ಬುತ್ತಿರುವಾಗಲೇ, ಆ ರಾಜ್ಯಕ್ಕೆ ಹೋಗಿಬರುತ್ತಿದ್ದ ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ನೆಲೆಸಿರುವ ಒಂದೇ ಕುಟುಂಬದ ಐವರು ಸೇರಿದಂತೆ ಗ್ರಾಮದ 21 ಮಂದಿಗೆ ಸೋಂಕು ದೃಢವಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮವನ್ನು ಕಂಟೈನ್ಮೆಂಟ್‌ ವಲಯವಾಗಿ ಘೋಷಿಸಲಾಗಿದೆ.

ಮಹಾರಾಷ್ಟ್ರಕ್ಕೆ ನಿತ್ಯ ಹೋಗಿ ಬರುತ್ತಿದ್ದ ಬಾವನಸೌಂದತ್ತಿಯ ಒಂದೇ ಕುಟುಂಬದ ಐವರಿಗೆ ಶನಿವಾರವಷ್ಟೇ ಕೊರೋನಾ ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದ 361 ಜನರನ್ನು ತಪಾಸಣೆ ಮಾಡಿದಾಗ ಅದರಲ್ಲಿ 16 ಜನರಿಗೆ ಸೋಂಕು ದೃಢವಾಗಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 21ಕ್ಕೇರಿದೆ.

ಐವರು ಸೋಂಕಿತರಿರುವ ಮನೆಯ ಆಸುಪಾಸಿನ ಪ್ರದೇಶವನ್ನು ಸೀಲ್‌ಡೌನ್‌ ಮಾಡಿ ಇಡೀ ಗ್ರಾಮವನ್ನು ಕಂಟೈನ್ಮೆಂಟ್‌ ಝೋನ್‌ ಎಂದು ಘೋಷಿಸಲಾಗಿದೆ. ಗ್ರಾಮ ಪಂಚಾಯ್ತಿ ವತಿಯಿಂದ ಸ್ವಚ್ಛತೆ ಹಾಗೂ ಸ್ಯಾನಿಟೈಸ್‌ ಮಾಡಲಾಗಿದೆ. ಭಾನುವಾರ ನಡೆಯಬೇಕಿದ್ದ ವಾರದ ಸಂತೆಯನ್ನು ರದ್ದುಗೊಳಿಸಲಾಗಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಡಂಗುರ ಹೊರಡಿಸಲಾಗಿದೆ.

ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಇನ್ನೂ ಹೆಚ್ಚಿನ ಮುತುವರ್ಜಿ ವಹಿಸುತ್ತೇವೆ. ಈ ಹಿಂದೆ ದಿನಕ್ಕೆ 500 ಕೇಸ್‌ ಬಂದಾಗ ನಾವು ಪರಿಸ್ಥಿತಿ ನಿಭಾಯಿಸಿದ್ದೀವಿ. ಈಗ 21 ಕೇಸ್‌ ಬಂದಾಗ ನಿಭಾಯಿಸುವುದು ದೊಡ್ಡ ಮಾತಲ್ಲ.

-ಎಂ.ಜಿ.ಹಿರೇಮಠ, ಜಿಲ್ಲಾಧಿಕಾರಿ